ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಗುಣಮುಖರ ಪ್ರಮಾಣ ಶೇ 75

ಸೋಂಕು ಪರೀಕ್ಷೆ ಹೆಚ್ಚಳ: ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ
Last Updated 14 ಸೆಪ್ಟೆಂಬರ್ 2020, 11:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾದವರಲ್ಲಿ ಶೇ 9.7ರಷ್ಟು ಜನರಿಗೆ ಕೋವಿಡ್‌ ಇರುವುದು ದೃಢಪಡುತ್ತಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ 75ಕ್ಕೆ ಇಳಿಮುಖವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

‘ಸೋಂಕು ಪತ್ತೆಗೆ ಪರೀಕ್ಷೆ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಗುಣಮುಖರಾಗುವವರ ಪ್ರಮಾಣ ಶೇ 94ರಿಂದ 75ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ಶೆ 0.65ರಷ್ಟಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಕೋವಿಡ್‌ ಪತ್ತೆಗೆ ಆರ್‌ಟಿಪಿಸಿಆರ್‌, ರ‍್ಯಾಪಿಡ್‌ ಆಂಟಿಜನ್‌ ಹಾಗೂ ಟ್ರೂನಾಟ್‌ ಮಾದರಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ನಿತ್ಯ 1,700 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಸರ್ಕಾರ ಗುರಿ ನೀಡಿದೆ. ನಿತ್ಯ ಸರಾಸರಿ 670 ಪರೀಕ್ಷೆಗಳನ್ನು ಮಾಡುವ ಸೌಲಭ್ಯ ಮಾತ್ರ ಜಿಲ್ಲೆಯಲ್ಲಿದೆ’ ಎಂದು ಹೇಳಿದರು.

‘ರೋಗ ಲಕ್ಷಣ ಕಾಣಿಸಿಕೊಳ್ಳದ ಸೋಂಕಿತರ ಚಿಕಿತ್ಸೆಗೆ 20 ಕೋವಿಡ್‌ ಕೇರ್‌ ಸೆಂಟರ್‌ಗಳು ಜಿಲ್ಲೆಯಲ್ಲಿವೆ. ಹಾಸ್ಟೆಲ್‌, ಲಾಡ್ಜ್‌ ಹಾಗೂ ಸಮುದಾಯ ಭವನದಲ್ಲಿ ಇವು ನಡೆಯುತ್ತಿವೆ. ವೈದ್ಯರು, ಶುಶ್ರೂಷಕಿ ಹಾಗೂ ‘ಡಿ’ ಗ್ರೂಪ್‌ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. 14 ದಿನ ಕೇಂದ್ರದಲ್ಲಿದ್ದು ಚಿಕಿತ್ಸೆ ಪಡೆಯುವುದು ಕಡ್ಡಾಯ. ಊಟ, ಕೊಠಡಿ, ಔಷಧ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಚೇತರಿಕೆ ಕಾಣದ ಹಾಗೂ ರೋಗ ಲಕ್ಷಣ ಇರುವ ಸೋಂಕಿತರನ್ನು ಡೆಡಿಕೇಟೆಡ್‌ ಕೋವಿಡ್ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲಾಗುತ್ತದೆ. ಇಂತಹ 13 ಕೇಂದ್ರಗಳ ಜಿಲ್ಲೆಯಲ್ಲಿದ್ದು, ಆಕ್ಸಿಜನ್‌ ಸೌಲಭ್ಯ ಕೂಡ ಹೊಂದಿವೆ. ಆದರೆ, ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸುವಂತೆ ಬಹುತೇಕ ಸೋಂಕಿತರು ಒತ್ತಾಯಿಸುತ್ತಿದ್ದಾರೆ. ಇದರಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

‘ಸೋಂಕಿತರೆಲ್ಲರಿಗೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸೌಲಭ್ಯವೂ ಇದೆ. ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತ್ರ ಜಿಲ್ಲಾ ಕೋವಿಡ್‌ ಆಸ್ಪತ್ರೆ ಮೀಸಲಿಡಲಾಗಿದೆ. 175 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲಾಗಿದೆ. 18 ವೆಂಟಿಲೇಟರ್‌, 125 ಆಕ್ಸಿಜನ್‌ ಬೆಡ್‌ ಹಾಗೂ ಐಸಿಯು ವ್ಯವಸ್ಥೆ ಇದೆ’ ಎಂದರು.

‘ಜಿಲ್ಲೆಯಲ್ಲಿ 32 ತಜ್ಞ ವೈದ್ಯರ ಕೊರತೆ ಇದೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಖಾಲಿ ಇರುವ ವೈದ್ಯ ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆರೋಗ್ಯ ರಕ್ಷಾ ಕವಚದ (108) 26 ಆಂಬುಲೆನ್ಸ್ ಸೇರಿದಂತೆ 34 ಆಂಬುಲೆನ್ಸ್‌ಗಳು ಜಿಲ್ಲೆಯಲ್ಲಿವೆ. ಇದರಲ್ಲಿ 13 ವಾಹನ ಗಂಟಲು ದ್ರವದ ಮಾದರಿ ಸಂಗ್ರಹಕ್ಕೆ ಮೀಸಲಿಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್‌ ಇದ್ದರು.

₹ 66 ಕೋಟಿ ಮಳೆ ಹಾನಿ

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ₹ 66 ಕೋಟಿಯಷ್ಟು ನಷ್ಟ ಸಂಭವಿಸಿದ ಎಂದು ಜಿಲ್ಲಾಡಳಿ ಅಂದಾಜು ಮಾಡಿದೆ.

‘ಜಿಲ್ಲೆಯಲ್ಲಿ 307 ಮಿ.ಮೀ ವಾಡಿಕೆ ಮಳೆಯಾಗಬೇಕುತ್ತು. ಆದರೆ, ಈವರೆಗೆ 557 ಮಿ.ಮೀ ಮಳೆ ಬಿದ್ದಿದ್ದು, ಶೇ 82ರಷ್ಟು ಹೆಚ್ಚುವರಿ ಮಳೆ ಸುರಿದಿದೆ. 124 ಕಿ.ಮೀ ರಸ್ತೆ ಹಾಳಾಗಿದ್ದು, 38 ಸೇತುವೆಗಳಿಗೆ ಹಾನಿಯಾಗಿದೆ. ಸರ್ಕಾರದ 22 ಕಟ್ಟಡ ಹಾಗೂ 15 ಕೆರೆಗಳು ಶಿಥಿಲಗೊಂಡಿವೆ. ಅಂದಾಜು ₹ 25 ಕೋಟಿ ನಷ್ಟ ಸಂಭವಿಸಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ವಿವರಿಸಿದರು.

‘409 ಮನೆಗಳು ಹಾನಿಗೊಂಡಿವೆ. ಏಳು ಜನರು ಪ್ರಾಣ ಕಳೆದುಕೊಂಡಿದ್ದು, ಐವರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. 3,569 ಹೆಕ್ಟೇರ್‌ ತೋಟಗಾರಿಕೆ ಹಾಗೂ 700 ಹೆಕ್ಟೇರ್‌ ಕೃಷಿ ಬೆಳೆ ನಷ್ಟವಾಗಿದ್ದು, ಅಂದಾಜು ₹ 41 ಕೋಟಿ ನಷ್ಟವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT