ಶುಕ್ರವಾರ, ಡಿಸೆಂಬರ್ 4, 2020
25 °C
ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗೆ ಚಿತ್ರದುರ್ಗದಿಂದ ಲಸಿಕೆ ಪೂರೈಕೆ

ಕೋವಿಡ್‌ ಲಸಿಕೆಗೆ ದಾಸ್ತಾನು ಕೇಂದ್ರ ಸಜ್ಜು

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌ ಲಸಿಕೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಲಸಿಕೆ ದಾಸ್ತಾನು ಹಾಗೂ ವಿತರಣೆಗೆ ಜಿಲ್ಲೆಯಲ್ಲಿ ಭರದ ತಯಾರಿ ಶುರುವಾಗಿದೆ. ಲಸಿಕೆಯನ್ನು ವೈಜ್ಞಾನಿಕ ಹಾಗೂ ಸುರಕ್ಷಿತವಾಗಿ ಸಂಗ್ರಹಿಸಿಡಲು ಚಿತ್ರದುರ್ಗದಲ್ಲಿ ಪ್ರಾದೇಶಿಕ ದಾಸ್ತಾನು ಕೇಂದ್ರ ಸಜ್ಜಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಕೋಲ್ಡ್ ಸ್ಟೋರೇಜ್‌ ಕೇಂದ್ರ ತೆರೆಯಲಾಗಿದೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಈ ಕೇಂದ್ರದಿಂದ ಲಸಿಕೆ ಪೂರೈಕೆಯಾಗಲಿದೆ. 10 ಲಕ್ಷಕ್ಕೂ ಅಧಿಕ ಡೋಸ್‌ಗಳನ್ನು ಸಂಗ್ರಹಿಸಿ
ಡುವ ಸಾಮರ್ಥ್ಯ ಈ ಕೇಂದ್ರಕ್ಕಿದೆ. ಜನವರಿ ಮೊದಲ ವಾರ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ.

ಕೋವಿಡ್‌ ಲಸಿಕೆ ಬೆಂಗಳೂರಿನಿಂದ ಪೂರೈಕೆಯಾಗಲಿದೆ. ಪ್ರಾದೇಶಿಕ ವ್ಯಾಪ್ತಿಯಲ್ಲಿ ಚಿತ್ರದುರ್ಗ ಮಧ್ಯ ಭಾಗದಲ್ಲಿರುವ ಕಾರಣಕ್ಕೆ ದಾಸ್ತಾನು ಕೇಂದ್ರ ತೆರೆಯಲಾಗಿದೆ. ಮೂರು ಜಿಲ್ಲೆಗೆ ಪ್ರತಿ ತಿಂಗಳು ಅಥವಾ ಬೇಡಿಕೆಗೆ ಅನುಗುಣವಾಗಿ ಪ್ರಾದೇಶಿಕ ಕೇಂದ್ರದಿಂದ ಲಸಿಕೆ ಪೂರೈಕೆಯಾಗಲಿದೆ. ಆಯಾ ಜಿಲ್ಲೆ, ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿಯೂ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಪೊಲೀಸರು, ಪೌರಕಾರ್ಮಿಕರು, ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡುವ ಸಾಧ್ಯತೆ ಇದೆ. ಲಸಿಕೆ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಯ ಮಾಹಿತಿ ಕಲೆಹಾಕುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಜಿಲ್ಲೆಯ 103 ಸರ್ಕಾರಿ ಆಸ್ಪತ್ರೆ, 435 ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಕ್ಲಿನಿಕ್‌ ಸಿಬ್ಬಂದಿಗೂ ಲಸಿಕೆ ನೀಡಲಾಗುತ್ತದೆ.

ಲಸಿಕೆ ವ್ಯಾಪ್ತಿಗೆ ಬರುವ ಸಿಬ್ಬಂದಿಯ ಸಂಪೂರ್ಣ ಮಾಹಿತಿಯನ್ನು ಆರೋಗ್ಯ ಇಲಾಖೆ ಪಡೆಯುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಸೇರಿ ಪ್ರತಿ ವಿವರವನ್ನು ‘ಕೋವಿಡ್‌ ಲಸಿಕೆ ಫಲಾನುಭವಿಗಳ ನಿರ್ವಹಣಾ ವ್ಯವಸ್ಥೆ (ಸಿವಿಬಿಎಂಎಸ್‌)’ಗೆ ಅಪ್ಲೋಡ್‌ ಮಾಡಲಾಗುತ್ತಿದೆ. ಪೊಲೀಸರು, ಶಿಕ್ಷಕರು ಸೇರಿದಂತೆ ಎರಡನೇ ಹಂತದಲ್ಲಿ ಲಸಿಕೆ ಪಡೆಯಲಿರುವ ಫಲಾನುಭವಿಗಳ ಪಟ್ಟಿಗೂ ಸಿದ್ಧತೆ ಆರಂಭವಾಗಿದೆ.

‘ಫಲಾನುಭವಿಗಳಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ 101 ಕೋಲ್ಡ್‌ ಚೈನ್‌ ಪಾಯಿಂಟ್ಸ್‌ಗಳು ಸಿದ್ಧವಾಗಿವೆ. ಪ್ರಾದೇಶಿಕ ಕೇಂದ್ರದಿಂದ ಲಸಿಕೆ ಚೈನ್‌ ಪಾಯಿಂಟ್ಸ್‌ ತಲುಪಲಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಶಿಕ್ಷಕರು ಸೇರಿ ಎಲ್ಲ ಫಲಾನುಭವಿಗಳಿಗೆ ಈ ಕೇಂದ್ರದಿಂದ ಲಸಿಕೆ ವಿತರಣೆಯಾಗಲಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌. ಫಾಲಾಕ್ಷ.

ಕೋವಿಡ್‌ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಕಾರ್ಯಪಡೆಯ ಸಭೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ನಡೆದಿದೆ. ತಾಲ್ಲೂಕು ಕಾರ್ಯಪಡೆ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ವೈದ್ಯರಿಗೆ ತರಬೇತಿ ನೀಡಲಾಗಿದೆ. ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತರು, ಆರೋಗ್ಯ ಸಹಾಯಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ತರಬೇತಿ ನೀಡಲು ನಿರ್ಧರಿಸಲಾಗಿದೆ.

‘ಲಸಿಕೆಯನ್ನು ಹೇಗೆ ನೀಡಬೇಕು ಎಂಬ ತಿಳಿವಳಿಕೆ ನೀಡುವ ಅಗತ್ಯವಿದೆ. ಎಷ್ಟು ಡೋಸ್‌ ನೀಡಬೇಕು, ಹೇಗೆ ನೀಡಿದರೆ ಅನುಕೂಲ ಎಂಬುದನ್ನು ಸಿಬ್ಬಂದಿಗೆ ಮನವರಿಕೆ ಮಾಡಿಕೊಡಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ತರಬೇತಿಗಳನ್ನು ನಡೆಸಲಾಗುತ್ತಿದೆ’ ಎಂದು ಡಾ. ಫಾಲಾಕ್ಷ ವಿವರಿಸಿದರು.

***

ಕೋವಿಡ್‌ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನಿಂದ ಚಿತ್ರದುರ್ಗದ ಪ್ರಾದೇಶಿಕ ಕೇಂದ್ರಕ್ಕೆ ಲಸಿಕೆ ಬರಲಿದೆ. ಇಲ್ಲಿಂದ ಉಳಿದ ಮೂರು ಜಿಲ್ಲೆಗೆ ವಿತರಣೆ ಮಾಡಲಾಗುತ್ತದೆ.

–ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು