ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷದ ಮಗು, ತಂದೆಗೆ ಸೋಂಕು

ಚೆನ್ನೈನಿಂದ ಚಳ್ಳಕೆರೆಗೆ ಬಂದಿದ್ದ ಕುಟುಂಬ, ಬಾಣಂತಿ ಸುರಕ್ಷಿತ
Last Updated 15 ಮೇ 2020, 12:29 IST
ಅಕ್ಷರ ಗಾತ್ರ

ಚಿತ್ರದುರ್ಗ: ತಮಿಳುನಾಡಿನ ಚೆನ್ನೈನಿಂದ ಮರಳಿದ್ದ ಕುಟುಂಬವೊಂದರ ಮೂರು ವರ್ಷದ ಮಗು ಸೇರಿ ಇಬ್ಬರಿಗೆ ‘ಕೋವಿಡ್‌–19’ ಇರುವುದು ಶುಕ್ರವಾರ ದೃಢಪಟ್ಟಿದೆ. ಇದರಿಂದ ಕೋಟೆನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9ಕ್ಕೆ ಏರಿದೆ.

ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿಯ 39 ವರ್ಷದ ಪುರುಷ (ಪಿ–994) ಹಾಗೂ ಇವರ ಮೂರು ವರ್ಷದ ಪುತ್ರಿ (ಪಿ.993) ಸೋಂಕಿತರು. ಪಿ–994 ರೋಗಿಯ ಪತ್ನಿಗೆ ಸೋಂಕು ಅಂಟಿಲ್ಲ ಎಂಬುದು ಪ್ರಯೋಗಾಲಯದ ವರದಿಯಿಂದ ಖಚಿತವಾಗಿದೆ. ದಂಪತಿಯ 20 ದಿನದ ಶಿಶುವಿನ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಾಲ್ವರು ಸದಸ್ಯರ ಕುಟುಂಬ ಮೇ 5ರಂದು ಚಿತ್ರದುರ್ಗಕ್ಕೆ ಬಂದಿತ್ತು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕತರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಸೋಂಕಿತರ ಕುಟುಂಬದ ಸದಸ್ಯರು ಸೇರಿದಂತೆ 15ಕ್ಕೂ ಹೆಚ್ಚು ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂಬುದು ಗೊತ್ತಾಗಿದೆ. ಇವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಸೋಂಕಿತರು ತಂಗಿದ್ದ ಕೋಡಿಹಳ್ಳಿ ಹಾಗೂ ಇವರು ಭೇಟಿ ನೀಡಿದ್ದ ಚಿಕ್ಕೇಹಳ್ಳಿಯ ಐದು ಕಿ.ಮೀ ವ್ಯಾಪ್ತಿಯಲ್ಲಿ ಸೀಲ್‌ಡೌನ್‌ ಮಾಡಲಾಗಿದೆ.

ತವರಿಗೆ ಬಂದಿದ್ದ ಬಾಣಂತಿ

ರಾಜ್ಯದ ಗಡಿಯಲ್ಲಿರುವ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದ ವ್ಯಕ್ತಿ (ಪಿ–994) ಹಾಗೂ ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿಯ ಮಹಿಳೆ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೋಡಿಹಳ್ಳಿಯ ವ್ಯಕ್ತಿಯೊಬ್ಬರಿಗೆ ಸೇರಿದ ಹಾರ್ಡ್‌ವೇರ್‌ ಕಾರ್ಖಾನೆ ತಮಿಳುನಾಡಿನ ಚೆನ್ನೈನಲ್ಲಿದೆ. ಈ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದ ವ್ಯಕ್ತಿ, ಕುಟುಂಬ ಸಹಿತ ಚೆನ್ನೈನಲ್ಲಿ ನೆಲೆಸಿದ್ದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗ ಸೋಂಕಿತ ವ್ಯಕ್ತಿಯ ಪತ್ನಿ ತುಂಬು ಗರ್ಭಿಣಿ. ಹೆರಿಗೆ ಸಮಯಕ್ಕೆ ತವರಿಗೆ ಮರಳಬೇಕು ಎಂಬ ಇವರ ಆಸೆ ಕೈಗೂಡಲಿಲ್ಲ. ಹೀಗಾಗಿ, ಚೆನ್ನೈನಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಬಾಣಂತಿ ಹಾಗೂ ಶಿಶುವಿನ ಆರೈಕೆ ಕಷ್ಟವಾಗಿದ್ದರಿಂದ ಈ ಕುಟುಂಬ ಕೋಡಿಹಳ್ಳಿಗೆ ಬಂದಿತ್ತು.

ಆಶಾ ಕಾರ್ಯಕರ್ತೆಯ ಶ್ರಮ:

ತಮಿಳುನಾಡಿನಿಂದ ಮೇ 5ರಂದು ಕೋಡಿಹಳ್ಳಿಗೆ ಆಗಮಿಸಿದ ಕುಟುಂಬದ ಬಗ್ಗೆ ಗ್ರಾಮದ ಜನರಿಗೆ ಗೊತ್ತಾಗಿದೆ. ಸೋಂಕು ಪೀಡಿತ ವ್ಯಕ್ತಿ ಗ್ರಾಮದ ಹೊರಭಾಗದ ತೋಟದ ಮನೆಯಲ್ಲಿ ಹಾಗೂ ಬಾಣಂತಿ ಊರಲ್ಲಿನ ಮನೆಯಲ್ಲಿ ತಂಗಿದ್ದರು. ಮೇ 8ರಂದು ಈ ಮಾಹಿತಿ ಆಶಾ ಕಾರ್ಯಕರ್ತೆಗೆ ಸಿಕ್ಕಿದೆ. ಮರುದಿನ ಇವರು ಮನೆಗೆ ಭೇಟಿ ನೀಡಿದಾಗ ಕುಟುಂಬ ಸರಿಯಾದ ಮಾಹಿತಿ ನೀಡಿಲ್ಲ. ಮೇ 10ರಂದು ಮತ್ತೊಮ್ಮೆ ಮನೆಗೆ ಭೇಟಿ ನೀಡಿದಾಗಲೂ ಪತ್ತೆಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಮೇ 11ರಂದು ಮತ್ತೆ ಪರಿಶೀಲನೆ ಮಾಡಿದಾಗ ಸೋಂಕಿತ ವ್ಯಕ್ತಿ ಶೀಥ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದದು ಗೊತ್ತಾಗಿದೆ. ಈ ಮಾಹಿತಿಯನ್ನು ಆಶಾಕಾರ್ಯಕರ್ತೆ ಕ್ಷಿಪ್ರ ಸ್ಪಂದನಾ ತಂಡಕ್ಕೆ (ರ‍್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌) ನೀಡಿದ್ದಾರೆ. ಶಂಕಿತ ವ್ಯಕ್ತಿ, ಅವರ ಪುತ್ರಿ ಹಾಗೂ ಪತ್ನಿಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರಯೋಗಾಲಯದ ವರದಿ ಮೇ 14ಕ್ಕೆ ಜಿಲ್ಲಾಡಳಿತದ ಕೈಸೇರಿದೆ.

ಪಾಸ್‌ ಪಡೆದಿದ್ದು ಅನುಮಾನ

ಹೊರ ರಾಜ್ಯದಿಂದ ಬರುವವರು ‘ಸೇವಾ ಸಿಂಧು’ ತಂತ್ರಾಂಶದ ಮೂಲಕ ಪಾಸ್‌ ಪಡೆಯುವುದು ಕಡ್ಡಾಯ. ಈ ಕುಟುಂಬ ಹೀಗೆ ಪಾಸ್‌ ಪಡೆದು ಮರಳಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ತಮಿಳುನಾಡಿನಿಂದ ಚಳ್ಳಕೆರೆಗೆ ಹೇಗೆ ಬಂದಿತು ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಈ ಬಗ್ಗೆ ಜಿಲ್ಲಾಡಳಿತದ ಬಳಿಯೂ ಸಮರ್ಪಕವಾದ ಮಾಹಿತಿ ಇಲ್ಲ.

ಕೋಡಿಹಳ್ಳಿ ಗ್ರಾಮಸ್ಥರ ಪ್ರಕಾರ ಈ ಕುಟುಂಬ ಬಾಡಿಗೆ ಕಾರಿನಲ್ಲಿ ಬೆಂಗಳೂರು ತಲುಪಿದೆ. ಅಲ್ಲಿಂದ ಮತ್ತೊಂದು ವಾಹನದಲ್ಲಿ ಚಿತ್ರದುರ್ಗಕ್ಕೆ ಬಂದಿದೆ. ಜಿಲ್ಲಾ ಗಡಿಯಲ್ಲಿ ಸ್ಥಾಪಿಸಿದ ಚೆಕ್‌ಪೋಸ್ಟ್‌ ಕಣ್ಣು ತಪ್ಪಿಸಿ ಹೇಗೆ ಬಂದಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ವಾಹನದಲ್ಲಿ ಬಾಣಂತಿ ಹಾಗೂ ಹಸುಗೂಸು ಇದ್ದ ಕಾರಣ ಚೆಕ್‌ಪೋಸ್ಟ್‌ ಸಿಬ್ಬಂದಿ ಸರಿಯಾಗಿ ಪರಿಶೀಲಿಸಿಲ್ಲ ಎನ್ನಲಾಗಿದೆ.

ಹಲವು ಹಳ್ಳಿಗಳಲ್ಲಿ ಆತಂಕ

ಊರು ತಲುಪಿದ ಬಳಿಕ ಸೋಂಕಿತ ವ್ಯಕ್ತಿ ಹಲವೆಡೆ ಸಂಚರಿಸಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಚಿಕ್ಕೇಹಳ್ಳಿ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾಗಿ ಸೋಂಕಿತ ವ್ಯಕ್ತಿ ಹೇಳಿಕೊಂಡಿದ್ದಾರೆ. ಅಲ್ಲದೇ, ಹಲವು ಜನರನ್ನು ಇವರು ಸಂಪರ್ಕಿಸಿದ ಸಾಧ್ಯತೆಗಳಿವೆ. ಹೀಗಾಗಿ, ಕೋಡಿಹಳ್ಳಿ, ಚಿಕ್ಕೇಹಳ್ಳಿ ಸೇರಿ ಸುತ್ತಲಿನ ಹಲವು ಹಳ್ಳಿಯ ಜನರಿಗೆ ಆತಂಕ ಶುರುವಾಗಿದೆ. ಎರಡು ಗ್ರಾಮಗಳನ್ನು ಮಾತ್ರ ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಿ ಸೀಲ್‌ಡೌನ್‌ ಮಾಡಲು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಆದೇಶಿಸಿದ್ದಾರೆ.

ತಂದೆ–ಮಗಳಿಗೆ ಒಟ್ಟಿಗೆ ಚಿಕಿತ್ಸೆ

ಕೊರೊನಾ ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದು ನಿಯಮ. ಆದರೆ, ಮೂರು ವರ್ಷದ ಬಾಲಕಿಯನ್ನು ಪ್ರತ್ಯೇಕವಾಗಿಡುವುದು ಅಸಾಧ್ಯವಾಗಿರುವ ಕಾರಣಕ್ಕೆ ತಂದೆಯೊಂದಿಗೆ ಇರಲು ಆರೋಗ್ಯ ಇಲಾಖೆ ಅವಕಾಶ ಕಲ್ಪಿಸಿದೆ.

‘ಚಿಕ್ಕ ಮಗುವನ್ನು ಪ್ರತ್ಯೇಕವಾಗಿ ಇಡುವುದು ಕಷ್ಟ. ತಂದೆ ಹಾಗೂ ಮಗಳು ಒಟ್ಟಿಗೆ ಇರಲು ಅವಕಾಶ ಕಲ್ಪಿಸಲಾಗಿದೆ. ಇಬ್ಬರಿಗೂ ಒಟ್ಟಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ 20 ದಿನಗಳ ಶಿಶು ಪ್ರತ್ಯೇಕವಾಗಿದ್ದಾರೆ. ಇವರ ಮೇಲೆಯೂ ನಿಗಾ ಇಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT