ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕೊರೊನಾ ಸೋಂಕು ಪರೀಕ್ಷೆ ವಿಳಂಬ

ಹೊರ ಜಿಲ್ಲೆಗೆ ತಪ್ಪದ ಅಲೆದಾಟ, ಸ್ಥಾಪನೆಯಾಗದ ಆರ್‌ಟಿಪಿಸಿಆರ್‌ ಪ್ರಯೋಗಾಲಯ
Last Updated 28 ಜುಲೈ 2020, 14:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ದೃಢಪಟ್ಟ ಬಾಲಕಿಯ ಕುಟುಂಬದ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸುವ ಹೊತ್ತಿಗೆ ವಾರ ಕಳೆದಿತ್ತು. ಗುಣಮುಖಳಾಗಿ ಬಿಡುಗಡೆ ಹೊಂದುತ್ತಿದ್ದ ಬಾಲಕಿಯನ್ನು ಸ್ವಾಗತಿಸಲು ಸಹೋದರ ಆಸ್ಪತ್ರೆಗೆ ಬಂದಿದ್ದರು. ತಂಗಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದ ಅಣ್ಣನ ಪ್ರಯೋಗಾಲಯದ ವರದಿ ಆಗ ವೈದ್ಯರ ಕೈಸೇರಿತ್ತು. ಆಸ್ಪತ್ರೆಗೆ ಬಂದಿದ್ದ ಸೋಂಕಿತನನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಯಿತು.

ಇದು ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ 15 ದಿನಗಳ ಹಿಂದೆ ನಡೆದ ಘಟನೆ. ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ಇದು ಕೈಗನ್ನಡಿ ಹಿಡಿದಂತಿದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣ ತಾಳತಪ್ಪುತ್ತಿರುವುದಕ್ಕೆ ಇಂತಹ ಹಲವು ನಿದರ್ಶನಗಳು ಸಿಗುತ್ತಿವೆ. ಸೋಂಕಿತರ ಗಂಟಲು ದ್ರವದ ಮಾದರಿಯ ಪರೀಕ್ಷೆ ವರದಿ ಹೊರಬರಲು ಜಿಲ್ಲೆಯಲ್ಲಿ ಸರಾಸರಿ ನಾಲ್ಕು ದಿನ ಹಿಡಿಯುತ್ತಿದೆ.

ಹೊಸಪೇಟೆಯ ಕುಟುಂಬದ ಸಂಪರ್ಕದಿಂದ ರಾಂಪುರದ 12 ವರ್ಷದ ಬಾಲಿಕಿಗೆ ಸೋಂಕು ಅಂಟಿತ್ತು. ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಟುಂಬದ ಎಲ್ಲ ಸದಸ್ಯರ ಗಂಟಲು ದ್ರವದ ಮಾದರಿ ಸಂಗ್ರಹಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಹತ್ತು ದಿನ ಕಳೆದರೂ ವರದಿ ಕೈಸೇರದಿರುವ ಹಿನ್ನೆಲೆಯಲ್ಲಿ ಸೋಂಕು ಅಂಟಿಲ್ಲವೆಂದೇ ಕುಟುಂಬ ಭಾವಿಸಿತ್ತು. ಈ ಲೆಕ್ಕಾಚಾರ ಉಲ್ಟಾ ಆಗಿ ಆಸ್ಪತ್ರೆ ಸೇರಿದ ಬಾಲಕಿಯ ಸಹೋದರನನ್ನು ಮತ್ತೆ ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಲಿಲ್ಲ.

ಸರಾಸರಿ 100 ಪರೀಕ್ಷೆ:ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಶಂಕಿತರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗ ಹಾಗೂ ಬೆಂಗಳೂರಿಗೆ ರವಾನಿಸಲಾಗುತ್ತಿತ್ತು. ಒಂದೂವರೆ ತಿಂಗಳ ಹಿಂದೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ‘ಟ್ರೂನಾಟ್‌’ ಎಂಬ ಪ್ರಯೋಗಾಲಯ ಆರಂಭವಾಯಿತು. ಎರಡು ಯಂತ್ರಗಳು ಪ್ರಯೋಗಾಲಯದಲ್ಲಿದ್ದು, ಮೂರು ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಯಂತ್ರವೊಂದು ದಿನದ 24 ಗಂಟೆ ಕಾರ್ಯನಿರ್ವಹಿಸಿದರೆ ಗರಿಷ್ಠ 50 ಮಾದರಿ ಪರೀಕ್ಷೆಗೆ ಒಳಪಡಿಸಬಹುದು. ನಿತ್ಯ ಸರಾಸರಿ 100 ಜನರ ಮಾದರಿ ಪರೀಕ್ಷಿಸಲು ಮಾತ್ರ ಇಲ್ಲಿ ಸಾಧ್ಯವಾಗುತ್ತಿದೆ.

ಸೋಂಕು ಹೆಚ್ಚಳವಾಗುತ್ತಿದ್ದಂತೆ ಪ್ರಾಥಮಿಕ ಸಂಪರ್ಕಿತರು, ರೋಗ ಲಕ್ಷಣ ಕಾಣಿಸಿಕೊಂಡವರನ್ನು ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ನಿತ್ಯ 250ಕ್ಕೂ ಹೆಚ್ಚು ಜನರ ಗಂಟಲು ದ್ರವದ ಮಾದರಿ ಸಂಗ್ರಹವಾಗುತ್ತಿದೆ. ಹೆಚ್ಚುವರಿ ಮಾದರಿಗಳನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತಿದೆ.

ಮಾದರಿ ಸಂಗ್ರಹ ಕಡಿತ:ಹೊರ ಜಿಲ್ಲೆಗೆ ರವಾನೆ ಮಾಡುವ ಗಂಟಲು ದ್ರವದ ಮಾದರಿಗಳು ಬೇಗ ಕೈಸೇರುತ್ತಿಲ್ಲ. ದಾವಣಗೆರೆ ಹಾಗೂ ಶಿವಮೊಗ್ಗ ಪ್ರಯೋಗಾಲಯದ ಮೇಲೆ ಒತ್ತಡ ಹೆಚ್ಚಾಗಿರುವುದರಿಂದ ಚಿತ್ರದುರ್ಗಕ್ಕೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಯೋಗಾಲಯದ ವರದಿಗೆ ವಾರಗಟ್ಟಲೆ ಕಾಯುವುದು ಅನಿವಾರ್ಯವಾಗಿದೆ.

‘ಶಿವಮೊಗ್ಗ ಹಾಗೂ ದಾವಣಗೆರೆ ಪ್ರಯೋಗಾಲಯದಿಂದ ಸಕಾರಾತ್ಮಕ ಸ್ಪಂದನೆ ಸಿಗದಿರುವುದರಿಂದ ಬೆಂಗಳೂರು ಪ್ರಯೋಗಾಲಯಕ್ಕೆ ಮಾದರಿ ರವಾನಿಸಲಾಗಿತ್ತು. ಏಳು ದಿನಗಳಾದರೂ ವರದಿ ಕೈಸೇರಲಿಲ್ಲ. ಸಿಬ್ಬಂದಿಯೇ ಖುದ್ದು ಬೆಂಗಳೂರಿಗೆ ತೆರಳಿ ಪ್ರಯೋಗಾಲಯದ ವರದಿ ಪಡೆದರು. ಇದರಲ್ಲಿ ಐದಾರು ಜನರಿಗೆ ಪಾಸಿಟಿವ್‌ ಇರುವುದು ಗೊತ್ತಾಯಿತು. ವರದಿ ಬರುವುದು ತಡವಾಗಿದ್ದರಿಂದ ಸೋಂಕು ಇನ್ನಷ್ಟು ಜನರಿಗೆ ಹರಡಿತ್ತು’ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ.

ಪ್ರಯೋಗಾಲಯದ ವರದಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಾದರಿ ಸಂಗ್ರಹದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಸೋಂಕಿನ ಲಕ್ಷಣ ಕಾಣಿಸಿಕೊಂಡವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರ‍್ಯಾಪಿಡ್‌ ಆಂಟಿಜನ್‌ ಕಿಟ್‌ ಮೇಲೆ ಅವಲಂಬನೆ ಹೆಚ್ಚಾಗುತ್ತಿದೆ.

ರ‍್ಯಾಪಿಡ್‌ ಆಂಟಿಜನ್‌ ವರದಿ ಗೊಂದಲ

ತ್ವರಿತಗತಿಯಲ್ಲಿ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರ‍್ಯಾಪಿಡ್‌ ಆಂಟಿಜನ್‌ ಕಿಟ್‌ ಒದಗಿಸಿದೆ. ಚಿತ್ರದುರ್ಗ ಜಿಲ್ಲೆಗೆ 5,300 ಕಿಟ್‌ಗಳನ್ನು ನೀಡಲಾಗಿದೆ. ಆದರೆ, ಇದರ ವರದಿಯ ಬಗ್ಗೆ ವೈದ್ಯರಿಗೇ ವಿಶ್ವಾಸವಿಲ್ಲ.

‘ಕಿಟ್‌ ಮೂಲಕ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದು ಸೋಂಕಿನ ಲಕ್ಷಣ ಕಾಣಿಸಿಕೊಳ್ಳದಿದ್ದರೆ ಟ್ರೂನಾಟ್‌ ಪರೀಕ್ಷೆಯಿಂದ ಖಚಿತಪಡಿಸಿಕೊಳ್ಳಲಾಗುತ್ತದೆ. ಸೋಂಕಿನ ಲಕ್ಷಣ ಇದ್ದರೂ ನೆಗೆಟಿವ್‌ ಬಂದಾಗ ಇದೇ ನಿಯಮ ಪಾಲನೆ ಮಾಡಲಾಗುತ್ತಿದೆ. ಸೋಂಕು ಇಲ್ಲದವರಲ್ಲಿಯೂ ಪಾಸಿಟಿವ್‌ ಅಂತ ವರದಿ ನೀಡಿದ ನಿದರ್ಶನಗಳಿವೆ’ ಎನ್ನುತ್ತಾರೆ ಆರೋಗ್ಯ ಇಲಾಖೆ ವೈದ್ಯರು.

ಆರ್‌ಟಿಪಿಸಿಆರ್‌ ಪ್ರಯೋಗಾಲಯಕ್ಕೆ ಸಿದ್ಧತೆ

ಸುಮಾರು ₹ 1 ಕೋಟಿ ವೆಚ್ಚದಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ಸೋಂಕಿತರ ಗಂಟಲು ಮತ್ತು ಮೂಗಿನ ದ್ರವದ ಮಾದರಿ ಹಿಡಿದು ಹೊರಜಿಲ್ಲೆಗೆ ಅಲೆಯುವುದು ತಪ್ಪುವ ಸಾಧ್ಯತೆ ಇದೆ.

ಪ್ರಯೋಗಾಲಯಕ್ಕೆ ಅಗತ್ಯವಿರುವ ಅನುದಾನವನ್ನು ಜಿಲ್ಲಾಡಳಿತ ಒದಗಿಸಲಿದೆ. ಉಪಕರಣ ತರುವಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಪ್ರಯೋಗಾಲಯ ಸ್ಥಾಪನೆ ತಡವಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ ಸಿಎಂಡಿ ವಾರ್ಡ್‌ ಬಳಿ ಪ್ರಯೋಗಾಲಯಕ್ಕೆ ಸ್ಥಳ ಗುರುತಿಸಲಾಗಿದೆ. ನಿತ್ಯ ಸರಾಸರಿ 400 ಮಾದರಿಗಳನ್ನು ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT