ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆ | ಸ್ಮಶಾನ ನೀರು ಪಾಲು: ಹೊಸ ಜಾಗಕ್ಕೆ ಹುಡುಕಾಟ

ಬುಕ್ಕರಾಯನ ಕೆರೆಯಂಗಳದಲ್ಲೀಗ ನೀರು, ಮುಳ್ಳುಕಂಟಿಗಳು
Last Updated 3 ಡಿಸೆಂಬರ್ 2022, 6:53 IST
ಅಕ್ಷರ ಗಾತ್ರ

ಸಿರಿಗೆರೆ: ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದೂವರೆ ಕೀ.ಮಿ ದೂರದ ಹೊರ ವಲಯದ ಬುಕ್ಕರಾಯನ ಕೆರೆಯಂಗಳದಲ್ಲಿ ಒಂದು ಎಕರೆ ವಿಸ್ತೀರ್ಣವಿರುವ ಮುಕ್ತಿಧಾಮದ ಜಾಗ ಜಲಾವೃತವಾಗಿದ್ದು ಸಿರಿಗೆರೆಯವರಿಗೆ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ.

ಗ್ರಾಮದಲ್ಲಿ 900ಕ್ಕೂ ಹೆಚ್ಚು ಮನೆಗಳಿದ್ದು, 3000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಮುಕ್ತಿಧಾಮದಲ್ಲಿ ಎಲ್ಲ ಸಮುದಾಯದವರು ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಹತ್ತು ವರ್ಷಗಳಿಂದ ಸಿರಿಗೆರೆ ಸಮೀಪದ ಬುಕ್ಕರಾಯನ ಕೆರೆಯಲ್ಲಿ ನೀರಿಲ್ಲದೇ ಇದ್ದುದ್ದರಿಂದ ಗ್ರಾಮದವರು ಮೃತದೇಹ ಹೂಳಲು ಕೆರೆಯ ಅಂಗಳದ ಹತ್ತಿರವಿರುವ ಮುಕ್ತಿಧಾಮವನ್ನು ಆಶ್ರಯಿಸಿದ್ದರು.

150ಕ್ಕೂ ಅಧಿಕ ಎಕರೆ ಪ್ರದೇಶ ಹೊಂದಿರುವ ಬುಕ್ಕರಾಯನ ಕೆರೆಯಲ್ಲಿ ಪ್ರಸಕ್ತ ವರ್ಷ ನೀರು ಹೆಚ್ಚಾಗಿ ಸಂಗ್ರಹವಾಗಿರುವುದರಿಂದ ಈಗ ಇರುವ ಮುಕ್ತಿಧಾಮ ನೀರು ಪಾಲಾಗಿದೆ. ನೀರು ತುಂಬಿರುವುದರಿಂದ ಮುಳ್ಳಿನ ಗಿಡಗಳು ಆಳೆತ್ತರಕ್ಕೆ ಬೆಳೆದಿವೆ. ಅಂತ್ಯಸಂಸ್ಕಾರಕ್ಕೆ ಬಂದ ಜನ ನಿಲ್ಲಲೂ ಜಾಗವಿಲ್ಲದಂತಾಗಿದೆ.

ಸಿರಿಗೆರೆಯವರಿಗಾಗಿ ಸಮೀಪದ ಸಿದ್ಧಾಪುರ ಗ್ರಾಮಕ್ಕೆ ಹತ್ತಿರ ಇರುವ ಹೊರಕೇರನಹಳ್ಳಿ ಗ್ರಾಮದ ಬಳಿ ಕಂದಾಯ ಇಲಾಖೆ ಸ್ಮಶಾನಕ್ಕೆ ಸ್ಥಳ ಸೂಚಿಸಿದೆ. ಆದರೆ, ಆ ಜಾಗೆಯು ಗ್ರಾಮದಿಂದ 4-5 ಕಿ.ಮೀ. ದೂರ ಇರುವುದರಿಂದ ಗ್ರಾಮದ ಜನ ಅಲ್ಲಿಗೆ ತೆರಳಿ ಅಂತ್ಯಕ್ರಿಯೆ ಮಾಡಲು ಕಷ್ಟಕರವಾಗಿದೆ. ಕೆಲವರು ತಮ್ಮತಮ್ಮ ಜಮೀನುಗಳಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.

ಗ್ರಾಮದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಖಬರಸ್ಥಾನವಿದೆ. ಅಲ್ಲಿ ಕಾಂಪೌಂಡ್ ವ್ಯವಸ್ಥೆ ಇದೆ. ನೀರಿನ ವ್ಯವಸ್ಥೆ ಬೇಕಿದೆ.

ಚಿಕ್ಕೇನಹಳ್ಳಿ ಗ್ರಾಮದಲ್ಲಿ ಸ್ಮಶಾನ ಇಲ್ಲ. ಗ್ರಾಮದಿಂದ ಒಂದೂವರೆ ಕಿ.ಮೀ ದೂರದಲ್ಲಿ ಗುಡ್ಡದ ಸಮೀಪದ ಹಳ್ಳ ಹರಿಯುವ ಇಕ್ಕೆಲಗಳಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ. ಇನ್ನೂ ಕೆಲವರು ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿದ್ದಾರೆ.

ಕೋಣನೂರು, ಸೀಗೆಹಳ್ಳಿ, ಹೊಸರಂಗಾಪುರ, ಚಿಕ್ಕಾಲಘಟ್ಟ, ದೊಡ್ಡಾಲಘಟ್ಟ, ಓಬವ್ವನಾಗ್ತಿಹಳ್ಳಿ, ಹಳೇರಂಗಾಪುರ, ಪಳಕೇಹಳ್ಳಿ, ಅಳಗವಾಡಿ ಗ್ರಾಮಗಳಲ್ಲಿ ಸ್ಮಶಾನ ಗುರುತಿಸಲಾಗಿಲ್ಲ.

***

ಅಕ್ಟೋಬರ್ ತಿಂಗಳ ಸಾಮಾನ್ಯ ಸಭೆಯಲ್ಲಿ ಮುಕ್ತಿಧಾಮ ವಿಷಯ ಚರ್ಚಿಸಿದ್ದೇವೆ. ಶೀಘ್ರದಲ್ಳೇ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ.

– ಎಂ.ಜಿ. ದೇವರಾಜ್, ಗ್ರಾ.ಪಂ. ಅಧ್ಯಕ್ಷ

ಸಿರಿಗೆರೆ ಗ್ರಾಮದಲ್ಲಿ ವಿವಿಧ ಸಮುದಾಯದವರಿದ್ದಾರೆ. ಬಹಳಷ್ಟು ಜನರಿಗೆ ಸ್ವಂತದ ಜಮೀನು ಇಲ್ಲ. ಸ್ಮಶಾನಕ್ಕಾಗಿ ಸೂಕ್ತ ಸ್ಥಳವನ್ನು ಶೀಘ್ರದಲ್ಲಿ ಗುರುತಿಸಿ ಕೊಡುವಂತೆ ಮನವಿ ಮಾಡಲಾಗುವುದು.

– ನಾಗರಾಜ್, ಗ್ರಾ.ಪಂ. ಸದಸ್ಯ

ಜಮ್ಮೇನಹಳ್ಳಿ ಗ್ರಾಮದಲ್ಲಿ 18 ಎಕರೆ ಗೋಮಾಳದ ಜಾಗವಿದೆ. ಅದರಲ್ಲಿ 2 ಎಕರೆಯನ್ನು ಸ್ಮಶಾನಕ್ಕೆ ನೀಡಲಾಗುವುದು ಎಂಬ ಮಾಹಿತಿ ಇದೆ. ಆ ಜಾಗದಲ್ಲಿ ಮೂಲಸೌಲಭ್ಯ ಒದಗಿಸಬೇಕು

– ಚಿದಾನಂದಮೂರ್ತಿ, ಜಮ್ಮೇನಹಳ್ಳಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT