ಶನಿವಾರ, ನವೆಂಬರ್ 23, 2019
18 °C

ಅನೈತಿಕ ಸಂಬಂಧ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ -ಪತ್ನಿ ಬಂಧನ

Published:
Updated:
Prajavani

ಚಿತ್ರದುರ್ಗ: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ‍ಪತಿಯನ್ನು ಪ್ರಿಯತಮನೊಂದಿಗೆ ಸೇರಿ ಕೊಲೆಗೈದು ಅಸಹಜ ಸಾವು ಎಂಬಂತೆ ಬಿಂಬಿಸಲು ಯತ್ನಿಸಿದ ಪತ್ನಿಯನ್ನು ಮೊಳಕಾಲ್ಮುರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಮೊಳಕಾಲ್ಮುರು ತಾಲ್ಲೂಕು ಕನಕಯ್ಯನಹಟ್ಟಿಯ ಯಶೋದಮ್ಮ (29) ಸೆರೆಯಾದ ಮಹಿಳೆ. ಪತಿ ಎನ್‌.ಗೋಪಾಲ (38) ಎಂಬುವರ ಕೊಲೆಗೆ ಈಕೆ ಸಂಚು ರೂಪಿಸಿದ್ದಳು. ಕೊಲೆಗೈದ ಪ್ರಿಯತಮ ತಿಪ್ಪೇಶಿ (28) ಹಾಗೂ ಕೊಲೆಗೆ ನೆರವು ನೀಡಿದ ಎದ್ದಲಬೊಮ್ಮಯ್ಯನಹಟ್ಟಿಯ ಹುಲುಕುಂಟನ (26) ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನಕಯ್ಯನಹಟ್ಟಿಯ ಎನ್‌.ಗೋಪಾಲ ಅವರ ಶವ ಯರಮಂಚನಾಯಕ ಐ.ಟಿ.ಐ. ಕಾಲೇಜ್ ಬಳಿ ಅ.15ರಂದು ಪತ್ತೆಯಾಗಿತ್ತು. ವಿಪರೀತ ಮದ್ಯ ಸೇವಿಸಿ ಮನೆಗೆ ಬಾರದೇ ಮೃತಪಟ್ಟಿದ್ದಾಗಿ ಪತ್ನಿ ಯಶೋದಮ್ಮ ಪೊಲೀಸರಿಗೆ ದೂರು ನೀಡಿದ್ದರು. ಮೃತ ಗೋಪಾಲ ಅವರ ಸಹೋದರಿ ವ್ಯಕ್ತಪಡಿಸಿದ ಅನುಮಾನದ ಮೇರೆಗೆ ಮೊಳಕಾಲ್ಮುರು ಸಿಪಿಐ ಗೋಪಾಲನಾಯ್ಕ ತನಿಖೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.

ಗೋಪಾಲ ಹಾಗೂ ಯಶೋದಮ್ಮ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬರ ಪುತ್ರ ಇದ್ದಾನೆ. ಎದ್ದಲ ಬೊಮ್ಮಯ್ಯನಹಟ್ಟಿ ಗ್ರಾಮದ ತಿಪ್ಪೇಶಿ ಜೊತೆ ಯಶೋದಮ್ಮ ಅನೋನ್ಯವಾಗಿದ್ದರು. ಇದಕ್ಕೆ ಗೋಪಾಲ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ದಂಪತಿಯ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.

ಅನೈತಿಕ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆರಳಿದ ಯಶೋದಮ್ಮ ಪತ್ನಿಯ ಮೇಲೆ ಹಗೆ ಸಾಧಿಸತೊಡಗಿದಳು. ತಿಪ್ಪೇಶನೊಂದಿಗೆ ಚರ್ಚಿಸಿ ಕೊಲೆಗೆ ಸಂಚು ರೂಪಿಸಿದ್ದಳು. ಅ.14ರಂದು ರಾತ್ರಿ ಮದ್ಯ ಸೇವಿಸಿದ ಗೋಪಾಲ ಅವರಿಗೆ ವಿಷಪ್ರಾಷನ ಮಾಡಿಸಿ ಹತ್ಯೆ ಮಾಡಿದ್ದರು. ಕುಡಿದ ಅಮಲಿನಲ್ಲಿ ಬಿದ್ದು ಮೃತಪಟ್ಟಿದ್ದಾಗಿ ಬಿಂಬಿಸಲು ಐಟಿಐ ಕಾಲೇಜು ಬಳಿಗೆ ಶವ ತಂದು ಹಾಕಿದ್ದರು. ದ್ವಿಚಕ್ರ ವಾಹನದಲ್ಲಿ ಶವ ಸಾಗಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಪ್ರತಿಕ್ರಿಯಿಸಿ (+)