ಪತಿ ಕೊಲೆ: ಪತ್ನಿ, ಪ್ರಿಯಕರ ಬಂಧನ

7
ರಾಣಿಕೆರೆಯ ತೂಬಿನ ಬಳಿ ಸಿಕ್ಕಿತ್ತು ಶವ

ಪತಿ ಕೊಲೆ: ಪತ್ನಿ, ಪ್ರಿಯಕರ ಬಂಧನ

Published:
Updated:

ಚಳ್ಳಕೆರೆ: ತಾಲ್ಲೂಕಿನ ರಾಣಿಕೆರೆಯ ತೂಬಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೀರಸಾಬಿಹಳ್ಳಿಯ ಕೃಷ್ಣಪ್ಪ (50) ಅವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಭೇದಿಸಿದ ಪೊಲೀಸರು, ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ್ದಾರೆ.

ಕೃಷ್ಣಪ್ಪ ಅವರ ಪತ್ನಿ ಪಾರ್ವತಮ್ಮ (48), ಪ್ರಿಯಕರ ಮೋಹನ ನಾಯ್ಕ್‌ (30) ಹಾಗೂ ಕೊಲೆಗೆ ನೆರವು ನೀಡಿದ ಈತನ ಸ್ನೇಹಿತ ಲಕ್ಷಣ್‌ (30) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೃಷ್ಣಪ್ಪ ಹಾಗೂ ಪಾರ್ವತಮ್ಮ 28 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ವಯಸ್ಸಿನಲ್ಲಿ ಕಿರಿಯವನಾದ ಮೋಹನ ನಾಯ್ಕ್‌ ಜೊತೆ ಪತ್ನಿ ಅನೋನ್ಯವಾಗಿರುವುದು ಪತಿಗೆ ಅನುಮಾನ ಮೂಡಿಸಿತ್ತು. ಈ ಕುರಿತು ದಂಪತಿಯ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಬಂಧಿಕರು ಆಗಾಗ ಪಂಚಾಯಿತಿ ನಡೆಸಿ ರಾಜಿ ಮಾಡಿಸಿದ್ದರು. ವೈಮನಸು ಹೆಚ್ಚಾದ ಬಳಿಕ ಪತಿಯನ್ನು ಕೊಲೆ ಮಾಡಲು ಪ್ರಿಯಕರನೊಂದಿಗೆ ಸೇರಿ ಪಾರ್ವತಮ್ಮ ಸಂಚು ರೂಪಿಸಿದ್ದರು. ಇದಕ್ಕೆ ಲಕ್ಷ್ಮಣನ ನೆರವು ಕೇಳಿದ್ದರು. ಮದ್ಯ ವ್ಯಸನಿಯಾಗಿದ್ದ ಈತ ಕೊಲೆಗೆ ಕೈಜೋಡಿಸಿದ್ದ ಎಂದು ವಿವರಿಸಿದ್ದಾರೆ.

ಈರುಳ್ಳಿಗೆ ನೀರು ಕಟ್ಟಲು ಪತಿಯೊಂದಿಗೆ ಪತ್ನಿಯೂ ಆ.6ರಂದು ರಾತ್ರಿ 10ಕ್ಕೆ ಜಮೀನಿಗೆ ತೆರಳಿದ್ದಳು. ದಂಪತಿ ಗದ್ದೆಯಲ್ಲಿ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಮೋಹನ ನಾಯ್ಕ್‌ ಹಾಗೂ ಲಕ್ಷ್ಮಣ ದೊಣ್ಣೆಯಿಂದ ಹೊಡೆದು ಕೃಷ್ಣಪ್ಪ ಅವರನ್ನು ಕೊಲೆ ಮಾಡಿದ್ದರು. ಬಳಿಕ ಗೋಣಿಚೀಲದಲ್ಲಿ ಶವವನ್ನು ತುಂಬಿ ರಾಣಿಕೆರೆಯ ತೂಬಿನ ಕೆಳಗೆ ಹಾಕಿದ್ದರು.

ಕೃಷ್ಣಪ್ಪ ಕಾಣದಿರುವ ಕುರಿತು ಅವರ ಸಹೋದರರು ಪಾರ್ವತಮ್ಮ ಅವರನ್ನು ಈಚೆಗೆ ಪ್ರಶ್ನಿಸಿದ್ದರು. ಜಮೀನಿಗೆ ತೆರಳಿದ ಪತಿ ಮತ್ತೆ ಮನೆಗೆ ಮರಳಿಲ್ಲ ಎಂಬ ಸಬೂಬು ಹೇಳಿದ್ದಳು. ಈಕೆ ನೀಡಿದ ದೂರಿನ ಆಧಾರದ ಮೇರೆಗೆ ಅ.1ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು.

ಅ.3ರಂದು ರಾಣಿಕೆರೆಯ ತೂಬಿನ ಸಮೀಪ ಅಪರಿಚಿತ ಶವವೊಂದು ಪೊಲೀಸರಿಗೆ ಸಿಕ್ಕಿತು. ಗೋಣಿ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವದ ಬಟ್ಟೆಯ ಆಧಾರದ ಮೇರೆಗೆ ಮೃತ ವ್ಯಕ್ತಿ ಕೃಷ್ಣಪ್ಪ ಎಂಬುದನ್ನು ಸಹೋದರರು ಗುರುತಿಸಿದ್ದರು. ಅಂತ್ಯಕ್ರಿಯೆ ಮುಗಿದ ಬಳಿಕ ಪಾರ್ವತಮ್ಮ ಅವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !