ಶುಕ್ರವಾರ, ಡಿಸೆಂಬರ್ 4, 2020
22 °C

ಅಡಿಕೆ ಕಳವು: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಗುಜರಿ ವ್ಯಾಪಾರಿಗಳ ಸೋಗಿನಲ್ಲಿ ತೋಟದ ಮನೆಗಳನ್ನು ಹುಡುಕಿ ಅಡಿಕೆ ಕಳವು ಮಾಡುತ್ತಿದ್ದ ಗ್ಯಾಂಗ್‌ವೊಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದೆ. ಇಬ್ಬರನ್ನು ಬಂಧಿಸಿದ ಪೊಲೀಸರು, ನಾಲ್ವರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಭದ್ರಾವತಿ ತಾಲ್ಲೂಕಿನ ಕೊರಚರಹಟ್ಟಿಯ ಧನು ಅಲಿಯಾಸ್‌ ಧನಂಜಯ (23) ಹಾಗೂ ಕಲ್ಲಾಳ್‌ ವೃತ್ತದ ಹರಿಕೃಷ್ಣ (45) ಬಂಧಿತರು. ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಕೊರಚರಹಟ್ಟಿಯ ಗುಡ್ಡರಾಮ, ಕೃಷ್ಣ, ಚಿಟ್ಟೆಕೃಷ್ಣ ಹಾಗೂ ಅಶೋಕ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ₹ 5 ಲಕ್ಷ ಮೌಲ್ಯದ 19 ಚೀಲ ಅಡಿಕೆ ಹಾಗೂ ₹ 8 ಲಕ್ಷ ಮೌಲ್ಯದ ಬುಲೆರೊ ವಾಹನ ಜಪ್ತಿ ಮಾಡಲಾಗಿದೆ.

‘ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಸಮೀಪದ ವಿ.ಪಾಳ್ಯದ ವೆಂಕಟೇಶಪ್ಪ ಎಂಬುವರ ಗೋದಾಮಿನ ಬೀಗ ಮುರಿದು 25 ಮೂಟೆ ಅಡಿಕೆ ಕಳವು ಮಾಡಿದ ಪ್ರಕರಣ ಸೆ.16ರಂದು ದಾಖಲಾಗಿತ್ತು. ತನಿಖೆಯ ಜಾಡು ಹಿಡಿದು ಸಾಗಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಆರೋಪಿಗಳು ಅಪರಾಧ ಕೃತ್ಯದ ಹಿನ್ನೆಲೆಯವರಾಗಿದ್ದಾರೆ. ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಪ್ರತಿಯೊಬ್ಬರ ವಿರುದ್ಧ 10ರಿಂದ 30 ಪ್ರಕರಣ ದಾಖಲಾಗಿವೆ. ಗುಜರಿ ವಸ್ತು ಖರೀದಿಸುವ ನೆಪದಲ್ಲಿ ಊರು ಸುತ್ತುತ್ತಿದ್ದ ಆರೋಪಿಗಳು ತೋಟದ ಮನೆಗಳಿಗೆ ಹೊಂಚು ಹಾಕುತ್ತಿದ್ದರು. ರಾತ್ರಿ ವೇಳೆ ಬುಲೆರೊ ವಾಹನದಲ್ಲಿ ಬಂದು ಬೀಗ ಮುರಿದು ಅಡಿಕೆ ಕಳವು ಮಾಡುತ್ತಿದ್ದರು’ ಎಂದು ವಿವರಿಸಿದರು.

ಚಿತ್ರದುರ್ಗ ಸಿಪಿಐ ಎಸ್‌.ಬಾಲಚಂದ್ರ ನಾಯಕ್‌ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.