ಸೋಮವಾರ, ಜನವರಿ 18, 2021
15 °C

ಮಹಿಳೆ ಕೊಲೆ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಬಡಾಮಕಾನ್‌ ನಿವಾಸಿ ಫರಾನಾ ಬೇಗಂ (45) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿ ಇಮ್ತಿಯಾಜ್‌ (30) ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆಯಲ್ಲಿ ಫರಾನಾ ಬೇಗಂ ಅವರ ಪುತ್ರ ಮೆಹಫುಜ್‌ ಇಲಾಯಿ (16) ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌.ಎಸ್‌.ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

ಫರಾನಾ ಬೇಗಂ ಹಾಗೂ ಇಮ್ತಿಯಾಜ್‌ ನಡುವೆ ವೈಯಕ್ತಿ ದ್ವೇಷವಿತ್ತು ಎನ್ನಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಬೇಗಂ ಅವರ ಮನೆಯ ಮಹಡಿಯ ಮೇಲೆ ಅವಿತು ಕುಳಿತ ಆರೋ‍ಪಿ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ. ಗುರುವಾರ ರಾತ್ರಿ 10.40ರ ಸುಮಾರಿಗೆ ಊಟ ಮುಗಿಸಿದ ಬಳಿಕ ನೀರು ಬಾರದಿರುವುದನ್ನು ಗಮನಿಸಿದ ಫರಾನಾ ಅವರು ಪುತ್ರನ ಜತೆಗೆ ಮಹಡಿಗೆ ಬಂದಾಗ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೀರಿನ ಟ್ಯಾಪ್‌ ಪರಿಶೀಲಿಸುತ್ತಿದ್ದ ತಾಯಿ ಮತ್ತು ಮಗನ ಮೇಲೆ ಆರೋಪಿ ಏಕಾಏಕಿ ದಾಳಿ ನಡೆಸಿದ್ದಾನೆ. ಬೇಗಂ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ತಡೆಯಲು ಬಂದ ಪುತ್ರನ ಮೇಲೂ ದಾಳಿ ನಡೆಸಿದ್ದಾನೆ. ಆರೋಪಿಯಿಂದ ತಪ್ಪಿಸಿಕೊಳ್ಳಲು ಕೆಳಗೆ ಇಳಿದು ಓಡಿದ್ದಾರೆ. ಹಿಂಬಾಲಿಸಿ ಬಂದು ಮನೆ ಬಾಗಿಲ ಬಳಿಯೂ ಚಾಕುವಿನಿಂದ ಇರಿದಿದ್ದಾನೆ. ಕಿರುಚಾಟ ಕೇಳಿ ಜನರು ಸೇರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ತಾಯಿ–ಮಗನನ್ನು ಜನರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಾರ್ಗ ಮಧ್ಯದಲ್ಲಿಯೇ ಬೇಗಂ ಮೃತಪಟ್ಟರು. ಮೆಹಫುಜ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ದಾವಣಗೆರೆಗೆ ಕೊಂಡೊಯ್ಯುವಂತೆ ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.