ಬುಧವಾರ, ನವೆಂಬರ್ 13, 2019
18 °C
ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಶವವಾದ ತಾಯಿ ಪಕ್ಕ ಮಲಗಿದ್ದ ಮಕ್ಕಳು

Published:
Updated:

ಚಿತ್ರದುರ್ಗ: ಕಾಣೆಯಾಗಿದ್ದ ತಂದೆಯ ಪತ್ತೆಗೆ ತಾಯಿಯೊಂದಿಗೆ ಬಂದಿದ್ದ ಇಬ್ಬರು ಮಕ್ಕಳು ಊಟ ಮಾಡಿ ಮಧ್ಯಾಹ್ನದ ನಿದ್ದೆಗೆ ಜಾರಿದ್ದರು. ಪಕ್ಕದಲ್ಲೇ ಮಲಗಿದ್ದ ತಾಯಿ ಶವವಾದರೂ ಮಕ್ಕಳ ಅರಿವಿಗೆ ಬಂದಿರಲಿಲ್ಲ. ತಾಯಿಗೆ ನೆರವಾಗಲು ಬಂದಿದ್ದ ವ್ಯಕ್ತಿಯ ಶವ ಫ್ಯಾನಿಗೆ ನೇತಾಡುತ್ತಿತ್ತು.

ಸಂಜೆಯಾದರೂ ಕೊಠಡಿಯ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಲಾಡ್ಜ್‌ ವ್ಯವಸ್ಥಾಪಕ ಪರಿಶೀಲಿಸಿದಾಗ ಕಂಡುಬಂದ ದೃಶ್ಯವಿದು. ಪೊಲೀಸರು ಕೊಠಡಿಗೆ ಧಾವಿಸಿ ಸ್ಥಳ ಮಹಜರು ಮಾಡುವಾಗಲೂ ಮಕ್ಕಳು ಶವವಾದ ತಾಯಿಯ ಪಕ್ಕದಲ್ಲಿ ಕುಳಿತಿದ್ದ ದೃಶ್ಯ ನೆರೆದವರ ಮನಕಲಕುವಂತೆ ಇತ್ತು.

ಪತಿಯನ್ನು ಅರಸಿ ಚಿತ್ರದುರ್ಗಕ್ಕೆ ಬಂದು ಶವವಾದ ಮಹಿಳೆ ಸುಮಂಗಲ (30). ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಪವನ್‌ (38) ಮಹಿಳೆಯ ಕೊರಳನ್ನು ವೇಲಿನಿಂದ ಬಿಗಿದು ಕೊಲೆ ಮಾಡಿದ್ದಾನೆ. ಇವರು ವಿಜಯಪುರ ಜಿಲ್ಲೆಯ ಬಬಲೇಶ್ವರದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಂಗಲ ಅವರ ಪತಿ ಕೃಷ್ಣೇಗೌಡ ಮೂರು ತಿಂಗಳಿಂದ ಕಾಣೆಯಾಗಿದ್ದರು. ರಾಹುಲ್‌ (3) ಹಾಗೂ ಸ್ಪಂದನಾ (2) ಎಂಬ ಮಕ್ಕಳೊಂದಿಗೆ ಪತಿಯನ್ನು ಹುಡುಕಲು ಇವರು ರಾಜ್ಯ ಸುತ್ತುತ್ತಿದ್ದರು. ಸುಮಂಗಲ ಅವರೊಂದಿಗೆ ಪವನ್‌ ಕೂಡ ಬಂದಿದ್ದನು. ಲಕ್ಷ್ಮಿ ಬಜಾರಿನ ಬೃಂದಾವನ ಲಾಡ್ಜ್‌ನಲ್ಲಿ ಶನಿವಾರ ಕೊಠಡಿಯೊಂದನ್ನು ಬಾಡಿಗೆ ಪಡೆದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಊಟ ಮುಗಿಸಿ ನಾಲ್ವರು ಕೊಠಡಿಗೆ ತೆರಳಿದ್ದರು. ಮಕ್ಕಳು ನಿದ್ದೆಗೆ ಜಾರಿದ ಬಳಿಕ ಸುಮಂಗಲ ಅವರನ್ನು ಉಸಿರುಕಟ್ಟಿಸಿ ಪವನ್‌ ಕೊಲೆ ಮಾಡಿದ್ದಾನೆ. ಬಳಿಕ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸಂಬಂಧಿಕರು ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)