ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪಾಕ್‌ ಗಡಿಯಲ್ಲಿ ಪತ್ತೆಯಾದ ಆರೋಪಿಗಳು

ಬಟ್ಟೆ ವ್ಯಾಪಾರಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಪ್ರಕರಣ ಭೇದಿಸಿದ ಪೊಲೀಸರು
Last Updated 31 ಆಗಸ್ಟ್ 2021, 16:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣದ ಬಟ್ಟೆ ವ್ಯಾಪಾರಿ ಮೂಲ್‌ಸಿಂಗ್‌ (35) ಎಂಬುವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಪಾಕಿಸ್ತಾನದ ಗಡಿಯಲ್ಲಿ ಬಂಧಿಸಿದ್ದಾರೆ. ವ್ಯವಹಾರದ ಉದ್ದೇಶದಿಂದ ಹುಟ್ಟಿಕೊಂಡ ಹಳೆ ದ್ವೇಷದ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ರಾಜಸ್ಥಾನದ ನಾಗೋರ್‌ ಜಿಲ್ಲೆಯ ದಿಡ್ವಾನ ತಾಲ್ಲೂಕಿನ ನೋಸರ್‌ ಗ್ರಾಮದ ಸಂಜಿತ್‌ ಸಿಂಗ್‌ (22) ಹಾಗೂ ಈತನ ಸೋದರ ಮಾವ ಜೋಧ್‌ಪುರ್‌ ಜಿಲ್ಲೆಯ ಪೃಥ್ವಿರಾಜ್‌ ಸಿಂಗ್‌ (31) ಬಂಧಿತರು. ರಾಜಸ್ಥಾನದ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಆ.31ರಂದು ಚಿತ್ರದುರ್ಗಕ್ಕೆ ಕರೆತರಲಾಗಿದೆ. ಸಂಜಿತ್‌ ಸಿಂಗ್‌ ತಂದೆ ಕಲ್ಯಾಣ್‌ಸಿಂಗ್‌ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂಲ್‌ಸಿಂಗ್‌ ಆರೋಪಿಯಾಗಿದ್ದರು.

‘ಕೊಲೆಯಾದ ಮೂಲ್‌ಸಿಂಗ್‌ ಹಾಗೂ ಕಲ್ಯಾಣ್‌ ಸಿಂಗ್‌ ಪರಿಚಿತರು. ಮೂಲತಃ ರಾಜಸ್ಥಾನದ ಕಲ್ಯಾಣ್‌ ಸಿಂಗ್‌ 20 ವರ್ಷದ ಹಿಂದೆ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಗೆ ಬಂದು ನೆಲೆಸಿದ್ದರು. ಚಿನ್ನಾಭರಣ ವ್ಯಾಪಾರ ಮಾಡಿಕೊಂಡಿದ್ದ ಇವರಿಗೆ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂಲ್‌ ಸಿಂಗ್‌ ಪರಿಚಯವಾಗಿತ್ತು. ಐದು ವರ್ಷಗಳ ಹಿಂದೆ ಮೂಲ್‌ಸಿಂಗ್‌ ಅವರನ್ನು ರಾಮಗಿರಿಗೆ ಕರೆತಂದು ಬಟ್ಟೆ ವ್ಯಾಪಾರ ಮಾಡಲು ತನ್ನ ಕಟ್ಟಡದಲ್ಲಿದ್ದ ಮಳಿಗೆಯನ್ನು ಬಾಡಿಗೆ ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮೂಲ್‌ಸಿಂಗ್‌ ಬಟ್ಟೆ ಅಂಗಡಿ ವ್ಯವಹಾರಕ್ಕೆ ಸಹೋದರರಾದ ಬಲ್‌ವೀರ್‌ ಸಿಂಗ್‌, ಶೇರ್‌ ಸಿಂಗ್‌ ಮತ್ತು ಗೋವರ್ಧನ ಸಿಂಗ್‌ ಜೊತೆಯಾಗಿದ್ದರು. ಕ್ಷುಲ್ಲಕ ವಿಚಾರದಲ್ಲಿ ಸ್ನೇಹ ಮುರಿದು ಬಿದ್ದ ಪರಿಣಾಮ ಮಳಿಗೆ ಖಾಲಿ ಮಾಡುವಂತೆ ಕಲ್ಯಾಣ್‌ ಸಿಂಗ್‌ ತಾಕೀತು ಮಾಡಿದ್ದರು. ಉತ್ತಮ ವ್ಯವಹಾರ ನಡೆಯುತ್ತಿದ್ದ ಮಳಿಗೆಯನ್ನು ಖಾಲಿ ಮಾಡಿದರೆ ತೊಂದರೆ ಆಗುತ್ತದೆ ಎಂದು ಭಾವಿಸಿದ ಮೂಲ್‌ಸಿಂಗ್‌ ಸಹೋದರರು, 2018ರ ನ.28ರಂದು ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು’ ಎಂದು ಹೇಳಿದರು.

‘ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂಲ್‌ಸಿಂಗ್‌ ಸೇರಿ ಎಲ್ಲ ಸಹೋದರರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಜಾಮೀನು ಮೇಲೆ ಹೊರಗೆ ಬಂದ ಮೂಲ್‌ಸಿಂಗ್‌ ಹೊಳಲ್ಕೆರೆ ಪಟ್ಟಣದಲ್ಲಿ ‘ಪ್ರಿಯದರ್ಶಿನಿ ಟೆಕ್ಸ್‌ಟೈಲ್‌’ ಎಂಬ ಬಟ್ಟೆ ಅಂಗಡಿ ತೆರೆದಿದ್ದರು. ರಾಮಗಿರಿಯ ಮಳಿಗೆಯಲ್ಲಿದ್ದ ಬಟ್ಟೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದಿರುವುದರಿಂದ ₹ 80 ಲಕ್ಷ ನಷ್ಟ ಸಂಭವಿಸಿರುವುದಾಗಿ ಕಲ್ಯಾಣ್‌ಸಿಂಗ್‌ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿದ್ದರು’ ಎಂದು ವಿವರಿಸಿದರು.

‘ಸಿವಿಲ್‌ ದಾವೆಯ ನೋಟಿಸ್‌ ಜುಲೈ 28ರಂದು ಕಲ್ಯಾಣ್‌ ಸಿಂಗ್‌ ಕುಟುಂಬವನ್ನು ತಲುಪಿತ್ತು. ಆ.12ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದು ಕಲ್ಯಾಣ್‌ಸಿಂಗ್ ಪುತ್ರ ಸಂಜಿತ್‌ ಸಿಂಗ್‌ನನ್ನು ಕೆರಳಿಸಿತು. ತರಿಕೆರೆಯಲ್ಲಿ ಚಿನ್ನಾಭರಣ ವ್ಯಾಪಾರ ಮಾಡಿಕೊಂಡಿದ್ದ ಸೋದರಮಾವ ಪೃಥ್ವಿರಾಜ್‌ ಸಿಂಗ್‌ ಜೊತೆ ಸೇರಿ ಕೊಲೆಯ ಸಂಚು ರೂಪಿಸಿದನು’ ಎಂದರು.

ಬಿಹಾರದಲ್ಲಿ ಪಿಸ್ತೂಲ್‌ ಖರೀದಿ
ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಸಂಜಿತ್‌ ಅತ್ಯಂತ ಚಾಣಾಕ್ಷತನದಿಂದ ಕೃತ್ಯ ಎಸಗಿದ್ದನು. ಸಾಕ್ಷ್ಯಗಳು ಲಭ್ಯವಾಗದಂತೆ ಎಚ್ಚರವಹಿಸಿದ್ದನು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಆರೋಪಿಗಳ ಸುಳಿವು ನೀಡಿತ್ತು.

‘ಬಿಹಾರದ ಗಯಾದಲ್ಲಿ ನಾಡ ಪಿಸ್ತೂಲ್‌ ಖರೀದಿ ಮಾಡಿದ ಆರೋಪಿಗಳು ನೇರವಾಗಿ ಹೊಳಲ್ಕೆರೆಗೆ ಬಂದಿದ್ದರು. ಆ.17ರಂದು ರಾತ್ರಿ ಬಟ್ಟೆ ಅಂಗಡಿ ಬಾಗಿಲು ಹಾಕುವುದಕ್ಕೂ ಮೊದಲು ದೃಷ್ಟಿ ಪೂಜೆ ಮಾಡುತ್ತಿದ್ದ ಮೂಲ್‌ ಸಿಂಗ್‌ ಬಳಿಗೆ ತೆರಳಿ ತಲೆಗೆ ಗುಂಡು ಹಾರಿಸಿದ್ದರು. ಒಂದೇ ಗುಂಡಿಗೆ ಕುಸಿದು ಬಿದ್ದು ಮೃತಪಟ್ಟಿದ್ದರು. ಕೃತ್ಯ ಎಸಗುವ ಸ್ಥಳಕ್ಕೆ ಮೊಬೈಲ್‌ ಫೋನ್‌ ತೆಗೆದುಕೊಂಡು ಹೋಗಿರಲಿಲ್ಲ’ ಎಂದು ಎಸ್‌ಪಿ ತಿಳಿಸಿದರು.

ಹೊಳಲ್ಕೆರೆಯಿಂದ ದ್ವಿಚಕ್ರ ವಾಹನದಲ್ಲಿ ನೇರವಾಗಿ ಬೀರೂರು ತಲುಪಿದ್ದರು. ಸಂಬಂಧಿಕರ ಮನೆಯಲ್ಲಿ ರಾತ್ರಿ ಊಟ ಮುಗಿಸಿ ರೈಲಿನ ಮೂಲಕ ರಾಜಸ್ಥಾನಕ್ಕೆ ಮರಳಿದ್ದರು. ಕೃತ್ಯಕ್ಕೆ ಎಸಗಿದ ದ್ವಿಚಕ್ರ ವಾಹನವನ್ನು ಲಾರಿಯೊಂದಕ್ಕೆ ಹಾಕುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಪೊಲೀಸರ ಅನುಮಾನವವನ್ನು ಇನ್ನಷ್ಟು ಬಲಗೊಳಿಸಿತ್ತು.

ಗಡಿಯಲ್ಲಿ ಅಡಗಿದ್ದರು
ರಾಜಸ್ಥಾನಕ್ಕೆ ತೆರಳಿದ ಆರೋಪಿಗಳು ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಗ್ರಾಮದಲ್ಲಿ ಅಡಗಿದ್ದರು. ಅವರನ್ನು ಬಂಧಿಸಿದ ಸ್ಥಳದಿಂದ ಗಡಿ 18 ಕಿ.ಮೀ ದೂರದಲ್ಲಿತ್ತು ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕಲ್ಯಾಣ್‌ ಸಿಂಗ್ ಕೊಲೆಯ ಪ್ರತಿಕಾರ ಹಾಗೂ ಮೂಲ್‌ಸಿಂಗ್‌ ಆಸ್ತಿ ಕಲಹದ ದೃಷ್ಟಿಯಿಂದ ತನಿಖೆ ಆರಂಭಿಸಿದೆವು. ಸುಮಾರು 25 ಪೊಲೀಸರ ತಂಡ ತನಿಖೆಯಲ್ಲಿ ತೊಡಗಿತ್ತು. ಒಂದು ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಿಕೊಡಲಾಯಿತು. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಯಿತು’ ಎಂದು ರಾಧಿಕಾ ತಿಳಿಸಿದರು.

‘ಕೊಲೆ ಆರೋಪಿಗಳು ಅಡಗುತಾಣದ ಸುಳಿವು ದೊರೆಯದಂತೆ ಎಚ್ಚರವಹಿಸಿದ್ದರು. ವಾಟ್ಸ್‌ಆ್ಯಪ್‌ ಕರೆಯ ಮೂಲಕ ಸಂಬಂಧಿಕರನ್ನು ಸಂಪರ್ಕಿಸಿ ಮಾತನಾಡುತ್ತಿದ್ದರು. ಇದರಿಂದ ನೆಟ್‌ವರ್ಕ್‌ ವಿಳಾಸ ಸಿಗುತ್ತಿತ್ತೇ ಹೊರತು ಆರೋಪಿಗಳ ನಿಖರ ಸ್ಥಳ ಪತ್ತೆಯಾಗುತ್ತಿರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT