ಬಾರದ ಮಳೆ ಒಣಗುತ್ತಿವೆ ಬೆಳೆ

7
* ಮೂಡಿದ ಬರಗಾಲದ ಛಾಯೆ * ರೈತಾಪಿ ವರ್ಗದಲ್ಲಿ ಹೆಚ್ಚಿದ ಆತಂಕ * ಬೆಳೆ ನಾಶಕ್ಕೆ ಮುಂದಾದ ರೈತರು

ಬಾರದ ಮಳೆ ಒಣಗುತ್ತಿವೆ ಬೆಳೆ

Published:
Updated:
Deccan Herald

ತುರುವನೂರು: ಬೆಳೆ ಹಾಕಿ ಎರಡು ತಿಂಗಳಾಗಿದೆ. ಬಿತ್ತಿದಾಗಿನಿಂದ ಮಳೆ ಬಂದಿಲ್ಲ. ಕಾಳು ಕಟ್ಟಬೇಕಾದ ಹಂತದಲ್ಲಿರುವ ಸೂರ್ಯಕಾಂತಿ ಬತ್ತಿದೆ. ಇನ್ನೂ ಮಳೆ ಬಂದರೂ ಪ್ರಯೋಜವಿಲ್ಲ..!

ಸಾಸಲಹಟ್ಟಿಯ ಸಿದ್ದಲಿಂಗಸ್ವಾಮಿ 15 ಎಕರೆಯಲ್ಲಿ ಒಣಗುತ್ತಿರುವ ಸೂರ್ಯಕಾಂತಿ ಬೆಳೆ ತೋರಿಸುತ್ತಾ ಬೇಸರ ವ್ಯಕ್ತಪಡಿಸಿದರು. ಒಂದು ವಾರ ನೋಡ್ತಿನಿ ಮಳೆ ಬರದಿದ್ದರೆ ಬೆಳೆ ನಾಶ ಮಾಡ್ತಿನಿ ಎಂದು ಮಾತು ಮುಂದುವರೆಸಿದರು.

ತಾಲ್ಲೂಕಿನ ಮಳೆಯಾಶ್ರಿತ ಬೆಳೆ ಬೆಳೆಯುವ ಬಹುತೇಕ ರೈತರ ಕಥೆ ಹೀಗೆ ಇದೆ. ರೈತ ಸಿದ್ದಲಿಂಗಸ್ವಾಮಿ ಸೇರಿದಂತೆ ಅಕ್ಕಪಕ್ಕದಲ್ಲಿರುವ ತಿಪ್ಪೇಸ್ವಾಮಿ, ಈಶಪ್ಪ, ತಿಪ್ಪೇರುದ್ರಸ್ವಾಮಿ, ನಾಗರಾಜ ಸೇರಿದಂತೆ ಹತ್ತಾರು ರೈತರು ಜಮೀನಿನಲ್ಲಿ ಬೆಳೆದಿರುವ ಸೂರ್ಯಕಾಂತಿ ಒಣಗಿದೆ.

ಅಂದಾಜು 50 ಎಕರೆ ಪ್ರದೇಶದ ಸೂರ್ಯಕಾಂತಿ ಒಣಗುತ್ತಿದ್ದು, ಮುಂದೆ ಮಳೆ ಬಂದರೂ ಬೆಳೆ ಬರುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲವಾಗಿದೆ. ಮಳೆಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಅನೇಕ ಬೆಳೆಗಳು ಒಣಗುತ್ತಿವೆ. ಬರಗಾಲದ ಛಾಯೆ ಮೂಡಿದ್ದು ಇದು ರೈತಾಪಿ ವರ್ಗದ ಆತಂಕ ಹೆಚ್ಚಿಸಿದೆ ಎನ್ನುತ್ತಾರೆ ರೈತ ಸಿದ್ದಲಿಂಗಸ್ವಾಮಿ.

ಜೂನ್ ತಿಂಗಳಲ್ಲಿ ಅಲ್ಪಸ್ವಲ್ಪ ಸುರಿದ ಮಳೆಯಿಂದ ಪ್ರೇರಣೆಗೊಂಡ ರೈತರು ಬಿತ್ತನೆ ಮಾಡಿ ಸಂಭ್ರಮಿಸಿದ್ದರು. ಜುಲೈ, ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದ್ದು, ಮೋಡಗಳು ಸಾಂದ್ರತೆಗೊಂಡರೂ ಮಳೆಯಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿವೆ. ₹ 80 ಸಾವಿರ ವೆಚ್ಚ ಮಾಡಿ 15 ಎಕರೆಯಲ್ಲಿ ಸೂರ್ಯಕಾಂತಿ ಬೆಳೆ ಹಾಕಿದ್ದೇನೆ. ಬಿತ್ತಿದಾಗಿನಿಂದ ಇದುವರೆಗೂ ಒಂದು ಹನಿಯೂ ಮಳೆಯಾಗಿಲ್ಲ. ಜೂನ್ ತಿಂಗಳಲ್ಲಿ ಇದ್ದ ತೇವಾಂಶಕ್ಕೆ ಬೆಳೆ ಹಾಕಲಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೆ ಕಳೆದ ಐದು ವರ್ಷಗಳಿಂದ ಸಮರ್ಪಕವಾಗಿ ನನ್ನ ಜಮೀನಿನಲ್ಲಿ ಬೆಳೆಯಾಗಿಲ್ಲ ಎಂದು ಅಳಲು ತೋಡಿಕೊಂಡರು.

ಸಾಸಲಹಟ್ಟಿ, ಗೋನೂರು, ಬಚ್ಚಬೋರನಹಟ್ಟಿ ಸುತ್ತಮುತ್ತಲಿನ ಗ್ರಾಮಗಳ ರೈತರು ಸುಮಾರು 50 ರಿಂದ 60 ದಿನದ ಸೂರ್ಯಕಾಂತಿ ಬೆಳೆ, ಬೀಜ, ಗೊಬ್ಬರ, ಖರ್ಚು ವೆಚ್ಚ ಸೇರಿ ಪ್ರತಿ ಎಕರೆಗೆ ₹ 5 ಸಾವಿರದಂತೆ ಖರ್ಚು ಮಾಡಿದ್ದಾರೆ. ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ಮಳೆ ಕೊರತೆಯಿಂದಾಗಿ ಒಣಗುತ್ತಿವೆ. ಇನ್ನೂ ವಾರದಲ್ಲಿ ಮಳೆ ಬರದಿದ್ದರೆ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗುತ್ತವೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಶರಣಪ್ಪ.

ಮುಂಗಾರು ವಿಫಲವಾಗಿದ್ದು, ಹಿಂಗಾರಿನಲ್ಲಾದರೂ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ ಈ ಭಾಗದ ಅನೇಕ ರೈತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !