ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ತಾಲ್ಲೂಕಿನಲ್ಲಿ ಬೆಳೆ ನಾಶ: ಹಳ್ಳದಲ್ಲಿ ಕೊಚ್ಚಿಹೋದ ಕುರಿಗಳು

ಮುಂದುವರಿದ ವರುಣನ ಆರ್ಭಟ
Last Updated 17 ನವೆಂಬರ್ 2021, 4:25 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪಟ್ಟಣ ಸೇರಿ ಹಲವೆಡೆ ಮಂಗಳವಾರವೂ ಗುಡುಗು, ಸಿಡಿಲು ಸಹಿತ ಭಾರಿ ಮಳೆಗೆ 20 ಕುರಿಗಳು ಹಳ್ಳದಲ್ಲಿ ಕೊಚ್ಚಿ ಹೋದವು.

ಮತ್ತೋಡು ಹೋಬಳಿಯ ದೊಡ್ಡತೇಕಲವಟ್ಟಿ ಗ್ರಾಮದ ಕುರಿಗಾಹಿಗಳು ಎಂದಿನಂತೆ ಕುರಿಗಳನ್ನು ಮೇಯಿಸಲು ಕೈನಡು, ಸೋಮಸಂದ್ರ ಸಮೀಪದ ಅಡವಿಗೆ ಹೋಗಿದ್ದರು. ಕುರಿಗಳನ್ನು ಸೋಮಸಂದ್ರದ ಕಡೆಯಿಂದ ದೊಡ್ಡತೇಕಲವಟ್ಟಿ ಕಡೆಗೆ ಸಿರಿಗೊಂಡನಹಳ್ಳಿ ಹಳ್ಳದ ಮಾರ್ಗವಾಗಿ ಎಂದಿನಂತೆ ದಾಟಿಸುತ್ತಿರುವಾಗ ದಿಢೀರನೆ ಒಳಹರಿವು ಹೆಚ್ಚಾಗಿ 20ಕ್ಕೂ ಹೆಚ್ಚು ಕುರಿಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಕುರಿಗಾಹಿಗಳು ಹಳ್ಳದ ಮಾರ್ಗದಲ್ಲಿ ಕುರಿಗಳನ್ನು ಹುಡುಕಿದಾಗ ದೊಡ್ಡತೇಕಲವಟ್ಟಿ ಗ್ರಾಮದ ರೇವಣ್ಣ, ಈಶ್ವರಪ್ಪ ಅವರಿಗೆ ಸೇರಿದ 4 ಹಾಗೂ ರಂಗಪ್ಪ ಅವರಿಗೆ ಸೇರಿದ 2 ಕುರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿವೆ. ಇನ್ನುಳಿದ ಕುರಿಗಳನ್ನು ಹುಡುಕುವ ಕಾರ್ಯಾಚರಣೆ ಸಂಜೆಯವರೆಗೂ ಮುಂದುವರಿಯಿತು.

ಸೋಮವಾರ ರಾತ್ರಿಯೂ ಪಟ್ಟಣ ಸೇರಿ ತಾಲ್ಲೂಕಿನ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಂಗಳವಾರವೂ ಸುರಿದ ಬಿರುಸಿನ ಮಳೆಗೆ ಪಟ್ಟಣದಲ್ಲಿ ದುರಸ್ತಿಯಾಗದಿರುವ ರಸ್ತೆಗಳಲ್ಲಿ ಸಾಕಷ್ಟು ಕೊರಕಲು ಬಿದ್ದಿದೆ. ದುರಸ್ತಿಯಾಗಿದ್ದ ರಸ್ತೆಗಳು ಹದಗೆಟ್ಟಿವೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ಬಡಾವಣೆಗಳಿಗೆ ಸಾಕಷ್ಟು ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಯಿತು. ಬಹುತೇಕ ಕೆರೆಕಟ್ಟೆ, ಬ್ಯಾರೇಜ್‌, ಚೆಕ್‌ಡ್ಯಾಂಗಳು ಭರ್ತಿಯಾಗಿ ಕೋಡಿಬಿದ್ದಿವೆ. ಹೊನ್ನೇನಹಳ್ಳಿ, ದೇವಪುರ, ಜಾನಕಲ್‌, ಕೋಡಿಹಳ್ಳಿ, ತಾರೀಕೆರೆ, ನಾಗೇನಹಳ್ಳಿ ಸೇರಿ ಕೋಡಿಬಿದ್ದಿರುವ ಇನ್ನಿತರ ಕೆರೆಗಳ ನೀರು ಭೋರ್ಗರೆಯುತ್ತಾ ಹರಿಯುತ್ತಿದೆ.

‘ಗುತ್ತಿಕಟ್ಟೆ, ಚಿಕ್ಕಯಗಟಿ ಹಳ್ಳ, ಶೃಂಗೇರಿ ಹಳ್ಳ, ಕಾನೀಹಳ್ಳ, ಗಂಗೇಹಳ್ಳ, ಹಿರೇಹಳ್ಳಗಳು ತುಂಬಿ ಹರಿಯುತ್ತಿದ್ದು, ವೇದಾವತಿ ನದಿ ಮಾರ್ಗವಾಗಿ ಹರಿದು ಸಾಕಷ್ಟು ನೀರು ವಾಣಿವಿಲಾಸ ಸಾಗರ ಜಲಾಶಯ ಸೇರುತ್ತಿದೆ. ನಿರಂತರ ಮಳೆಯಿಂದಾಗಿ ಹಲವೆಡೆ ಜಮೀನುಗಳು ಮುಳುಗಡೆಯಾಗಿವೆ. ಕೊಯ್ಲಿಗೆ ಬಂದಿದ್ದ ರಾಗಿ, ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ, ಹಣ್ಣು, ಹೂವು, ತರಕಾರಿಗಳು ನೀರು ಪಾಲಾಗಿವೆ. ಅಧಿಕ ತೇವಾಂಶದಿಂದ ಈಚೆಗೆ ಬಿತ್ತನೆ ಮಾಡಿದ್ದ ಕಡಲೆಕಾಳು ಬೆಳೆ ಹಾಗೂ ಅಡಿಕೆ ಸಸಿಗಳು ಮಳೆ ನೀರಿನಲ್ಲಿ ಕೊಳೆಯುತ್ತಿರುವುದನ್ನು ಕಂಡ ರೈತರು ಜಮೀನಿನಲ್ಲಿ ಕಣ್ಣೀರಿಡುತ್ತಿದ್ದಾರೆ. ಜೋಪು ಹಾಗೂ ತೇವಾಂಶ ಹೆಚ್ಚಾಗಿರುವುದರಿಂದ ಕೆಲವೆಡೆ ಜಮೀನಿಗೆ ಕಾಲಿಡಲು ಆಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಕಾಲದಲ್ಲಿ ಇಷ್ಟೊಂದು ಮಳೆ ಬಂದು ಅವಾಂತರ ಸೃಷ್ಟಿಯಾಗಿದ್ದನ್ನು ನಾನು ಕಂಡಿಲ್ಲ’ ಎಂದು ಮಾಡದಕೆರೆಯ ರೈತ ಕರಿಯಪ್ಪ ತಮ್ಮ ಅಳಲು ತೋಡಿಕೊಂಡರು.

13 ಮನೆಗಳಿಗೆ ಹಾನಿ

‘ಸೋಮವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಗರೀಂಬೀಳು ಗ್ರಾಮದ ಗೊರಪ್ಪ, ಕಾಚಾಪುರ ಶಿವಮ್ಮ, ತಂಡಗ ಲಂಬಾಣಿಹಟ್ಟಿ ನಾಗನಾಯ್ಕ, ಕಡವಗೆರೆ ಲಕ್ಕಮ್ಮ, ಕಪ್ಪನಾಯಕನಹಳ್ಳಿ ಶಿವಪ್ಪ, ಸಿರಿಗೊಂಡನಹಳ್ಳಿ ಸಿದ್ದಪ್ಪ, ಕಡದಿನಕೆರೆ ತಿಪ್ಪೇಶಪ್ಪ, ಹನುಮಂತನಾಯ್ಕ, ಕೆ.ಟಿ.ನಗರದ ವಿಜಯಲಕ್ಷ್ಮೀ, ದೇವಪುರ ಗಂಗಮ್ಮ, ಲಕ್ಷ್ಮೀದೇವಿ, ಸಿದ್ದಪ್ಪ, ದೇವಪುರ ಭೋವಿಹಟ್ಟಿ ಕಮಲಮ್ಮ ಸೇರಿ 13 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹5.50 ಲಕ್ಷ ನಷ್ಟವಾಗಿದೆ’ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.

ಶ್ರೀರಾಂಪುರ ವರದಿ: ಹೋಬಳಿಯಲ್ಲಿ ನಿರಂತರವಾಗಿ ಸುರಿದ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳ ಮೇಲೆ ಹರಿದು ವಾಹನಗಳ ಸವಾರರು ಸಂಚರಿಸಲು ಪರದಾಡುವಂತಾಯಿತು.

ಕಳೆದ ತಿಂಗಳು ಕೋಡಿಬಿದ್ದಿದ್ದ ಹೆಗ್ಗೆರೆ ಸಮೀಪದ ಪಾಪರಾಜನ ಕೆರೆ, ಗೌಡನಕೆರೆಗಳು ಕೋಡಿ ಬಿದ್ದಿದೆ. ಅಮ್ಮನಕೆರೆಯೂ ತುಂಬುವ ಹಂತ ತಲುಪಿದೆ. ಸೂಜಿಕಲ್‍ ಕೆರೆಯ ಕೋಡಿ ನೀರು ಅಧಿಕವಾಗಿ ಕೆಂಚಾಂಬಿಕಾ ದೇವಸ್ಥಾನದ ಸಮೀಪ ರಸ್ತೆಯ ಹರಿದಿದೆ. ಗಂಜಿಗೆರೆ ಕೆರೆಯಿಂದ ವೇದಾವತಿ ನದಿ ಒಡಲು ಸೇರುತ್ತಿದೆ.

ಕೊಯ್ಲಿಗೆ ಬಂದಿದ್ದ ಹಾಗೂ ರಾಗಿ ತೆನೆ ಕಾಳುಕಟ್ಟುವ ಸಮಯದಲ್ಲಿ ಮಳೆ ಹೆಚ್ಚಾಗಿ ಬಂದಿದ್ದರಿಂದ ರಾಗಿ ಸಾಮೆ ಬೆಳೆಗಳು ನೆಲ ಕಚ್ಚಿವೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.ಸೋಮವಾರ ರಾತ್ರಿ ಬಿದ್ದ ಮಳೆಯಿಂದಾಗಿ ಹೋಬಳಿಯ ಕಾಚಾಪುರ ಗ್ರಾಮದ ಶಿವಮ್ಮ, ಮಲ್ಲಿಹಳ್ಳಿ ಗ್ರಾಮದ ಗೊರಪ್ಪ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಭಾಗಶಃ ಹಾನಿಯಾಗಿದೆ.

ಗುಡುಗು ಸಹಿತ ಸುರಿದ ಮಳೆ

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಮಂಗಳವಾರ ಗುಡುಗು ಸಹಿತ ಬಿರುಸಿನ ಮಳೆ ಸುರಿಯಿತು. ನಿತ್ಯ ಮಳೆ ಸುರಿಯುತ್ತಿರುವ ಪರಿಣಾಮ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ.

ಹೊಸದುರ್ಗ ತಾಲ್ಲೂಕು ಹೊರತುಪಡಿಸಿ ಉಳಿದೆಡೆ ಮಂಗಳವಾರ ಸೂರ್ಯ ಕಣ್ತೆರೆದಿದ್ದನು. ಬಿಸಿಲು ಕಾಣಿಸಿಕೊಂಡು ದಟ್ಟ ಮೋಡಗಳು ಕಣ್ಮೆರೆಯಾಗಿದ್ದವು. ಆದರೆ, ಸಂಜೆ ಸಮೀಪಿಸುತ್ತಿದ್ದಂತೆ ವಾತಾವರಣವೇ ಬದಲಾಯಿತು.

ಸಂಜೆ ಸೂರ್ಯ ಮುಳುಗುವ ವೇಳೆಗೆ ಆಗಸದಲ್ಲಿ ಮೋಡಗಳು ದಟ್ಟವಾಗಿ ಆವರಿಸಿದವು. ಮಿಂಚು, ಗುಡುಗು ಆರ್ಭಟ ಜೋರಾಗಿತ್ತು. ನಿಧಾನವಾಗಿ ಧರೆಗೆ ಇಳಿದ ವರುಣ ಕೆಲ ಹೊತ್ತಿನ ಬಳಿಕ ಬಿರುಸು ಪಡೆಯಿತು. ಮಳೆಯ ಆರ್ಭಟ ಹೆಚ್ಚಾಗುತ್ತಿದ್ದಂತೆ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿತ್ತು.

ಸಂಜೆ 5.30ಕ್ಕೆ ಆರಂಭವಾದ ಮಳೆ ಒಂದು ಗಂಟೆ ನಿರಂತರವಾಗಿ ಸುರಿಯಿತು. ಬಿರುಸಿನಿಂದ ಮಳೆ ಸುರಿದಿದ್ದರಿಂದ ಎಲ್ಲೆಡೆ ನೀರು ಹರಿಯಿತು. ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶದಲ್ಲಿ ಅದಾಗಲೇ ನಿಂತಿದ್ದ ನೀರು ಮತ್ತೆ ಹೆಚ್ಚಾಯಿತು.

7 ಕುರಿಗಳ ಸಾವು

ಬೆಳಗೆರೆ (ಚಳ್ಳಕೆರೆ): ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಮಂಗಳವಾರ ಸಂಜೆ ಏಳು ಕುರಿ ಸಿಡಿಲಿಗೆ ಬಲಿಯಾಗಿದ್ದು, ನಾಲ್ಕು ಕುರಿಗಳು ಗಾಯಗೊಂಡಿವೆ.

ಬೆಳಗೆರೆ ಗ್ರಾಮದ ಕಾವಲಿನ ವಾಸಿ ಪೂಜಾರಿಹಟ್ಯಪ್ಪ ಮತ್ತು ಪ್ರಸನ್ನ ಅವರು, ಕುರಿಗಳನ್ನು ಮೇಯಿಸಿಕೊಂಡು ಸಂಜೆ ಗ್ರಾಮದ ರೊಪ್ಪದ ಕಡೆಗೆ ಹೊಡೆದುಕೊಂಡು ಹೋಗುವಾಗ ಗುಡುಗು ಸಹಿತ ಮಳೆ ಪ್ರಾರಂಭವಾಗಿದೆ. ಎಲ್ಲಾ ಕುರಿಗಳು ರಸ್ತೆ ಬದಿಯ ಮರದಡಿಗೆ ಹೋಗಿ ನಿಂತವು. ಸ್ವಲ್ಪ ಹೊತ್ತಿನ್ನಲ್ಲೇ ಕುರಿಗಳಿಗೆ ಸಿಡಿಲು ಬಡಿದಿದೆ. ಪ್ರತಿ ಕುರಿಗೆ ₹15 ಸಾವಿರದಂತೆ ₹1.05 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸಿಡಿಲು ಬಡಿಯುವ ವೇಳೆ ಕುರಿಯ ಮಧ್ಯೆ ನಿಂತಿದ್ದ ಕುರಿಗಾಹಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT