ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅಕಾಲಿಕ ಮಳೆ, ಕೊಚ್ಚಿಹೋದ ಬೆಳೆ

Last Updated 29 ನವೆಂಬರ್ 2021, 5:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಬರಗಾಲ ತಲೆದೋರಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ಬೆಳೆಯೂ ಕೊಚ್ಚಿಹೋಗಿದೆ. ಅನಾವೃಷ್ಟಿಯಿಂದ ಬೇಸತ್ತು ಹೋಗಿದ್ದ ರೈತರು ಈ ಬಾರಿ ಅತಿವೃಷ್ಟಿಯಿಂದ ತತ್ತರಿಸಿದ್ದಾರೆ. ಬೆಳೆ ನಷ್ಟ ಪರಿಹಾರಕ್ಕೆ ಸರ್ಕಾರದತ್ತ ನೋಡುತ್ತಿದ್ದಾರೆ.

ಚಿತ್ರದುರ್ಗ ಸತತ ಬರಗಾಲಕ್ಕೆ ತುತ್ತಾಗುವ ಜಿಲ್ಲೆ. ಇಲ್ಲಿ ವಾರ್ಷಿಕ 528 ಮಿ.ಮೀ. ವಾಡಿಕೆ ಮಳೆ ಬೀಳುತ್ತದೆ. ಹಲವು ವರ್ಷಗಳ ಬಳಿಕ 843 ಮಿ.ಮೀ. ಮಳೆ ಸುರಿದಿದೆ. ಕೃಷಿ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಶೇ 60ಕ್ಕಿಂತ ಹೆಚ್ಚು ಮಳೆ ಸುರಿದಿದೆ. ನವೆಂಬರ್‌ನಲ್ಲಿ ಸುರಿದ ಮಳೆ ಬೆಳೆದು ನಿಂತ ಫಸಲನ್ನು ಸಂಪೂರ್ಣ ನಾಶ ಮಾಡಿದೆ.

ಜಿಲ್ಲೆಯ 7.7 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಮುಂಗಾರು ಹಂಗಾಮಿನಲ್ಲಿ 3.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. 1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ, 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಸೇರಿ ಹಲವು ಬೆಳೆ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಶೇಂಗಾ ಮತ್ತು ಈರುಳ್ಳಿ ಸಂಪೂರ್ಣ ನೀರು ಪಾಲಾಗಿದೆ. ಮೆಕ್ಕೆಜೋಳಕ್ಕೆ ತೇವಾಂಶ ಹೆಚ್ಚಾಗಿ ಇಳುವರಿ, ಗುಣಮಟ್ಟ ಕುಸಿತವಾಗಿದೆ. ಬೆಳೆ ಕೈಗೆ ಸಿಕ್ಕರೂ ಹಾಕಿದ ಬಂಡವಾಳ ಮರಳುವುದಿಲ್ಲ ಎಂಬುದು ರೈತರ ಅಳಲು.

ಪೂರ್ವ ಮುಂಗಾರು ಸಮಯದಿಂದಲೂ ವರುಣ ಕೃಪೆ ತೋರಿದ್ದಾನೆ. ಇದರಿಂದ ಹರ್ಷಗೊಂಡ ರೈತರು ಮುಂಗಾರು ಹಂಗಾಮಿನ ಬೆಳೆಗಳು ಕೈಹಿಡಿಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಸಕಾಲಕ್ಕೆ ಮಳೆ ಸುರಿದಿದ್ದರಿಂದ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಅಗತ್ಯಕ್ಕೆ ತಕ್ಕಷ್ಟೇ ಸುರಿದಿದ್ದ ಮಳೆ, ಆಗಸ್ಟ್‌ಮತ್ತು ಸೆಪ್ಟೆಂಬರ್‌ ತಿಂಗಳ ಕೆಲ ದಿನ ಕೈಕೊಟ್ಟಿತ್ತು. ಬೆಳೆ ರೈತರ ಕೈಸೇರುವ ಸಮಯದಲ್ಲಿ ಸುರಿದ ಮಳೆ ಫಸಲನ್ನು ಸಂಪೂರ್ಣ ನಾಶಪಡಿಸಿದೆ.

ಅಕ್ಟೋಬರ್‌ ತಿಂಗಳಿಂದ ಮತ್ತೆ ಆರಂಭವಾದ ಮಳೆ ನಿರಂತರವಾಗಿ ಸುರಿದಿದೆ. ಅಕ್ಟೋಬರ್‌ನಲ್ಲಿ 108 ಮಿ.ಮೀ. ಸುರಿಯಬೇಕಿದ್ದ ಮಳೆ 209 ಮಿ.ಮೀ. ಮಳೆಯಾಗಿದೆ. ನವೆಂಬರ್‌ನಲ್ಲಿ 101 ಮಿ.ಮೀ. ಹೆಚ್ಚುವರಿ ಮಳೆ ಸುರಿದಿದೆ. ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಅಕಾಲಿಕವಾಗಿ ಬಿದ್ದ ಮಳೆಗೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾಯಿತು. ಮೋಡ ಮುಸುಕಿದ ವಾತಾವರಣ ಹಾಗೂ ತೇವಾಂಶ ಹೆಚ್ಚಾಗಿ ಹಲವು ಬೆಳೆಗಳು ನಾಶವಾಗಿವೆ.

ಮಳೆಯಿಂದ ನಷ್ಟವಾದ ಬೆಳೆಯಲ್ಲಿ ಶೇಂಗಾದ್ದೇ ಸಿಂಹಪಾಲು. ಕಾಳು ಕಟ್ಟುವಾಗ ಸುರಿದ ಮಳೆ ಇಳುವರಿಯ ಮೇಲೆ ಪರಿಣಾಮ ಬೀರಿತು. ಮಧ್ಯೆ ಮತ್ತೆ ಕಡಿಮೆಯಾಗಿದ್ದ ಮಳೆ ಮತ್ತೆ ಸೋನೆಯಂತೆ ಸುರಿದಿದ್ದರಿಂದ ನಿರೀಕ್ಷೆಯಂತೆ ಕಾಳುಕಟ್ಟಿಲ್ಲ. ಶೇಂಗಾ ಬಳ್ಳಿಯೂ ಕಪ್ಪಾಗಿದ್ದು, ಜಾನುವಾರು ಮೇವಿಗೂ ತತ್ವಾರ ಉಂಟಾಗುವ ಆತಂಕ ಎದುರಾಗಿದೆ.

ಬೆಳೆ ನಷ್ಟ ಪರಿಹಾರಕ್ಕೆ ಸಮೀಕ್ಷೆಗೆ ಮುಂದಾದ ಜಿಲ್ಲಾಡಳಿತ ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ರೈತರ ಕೃಷಿ ಭೂಮಿಗೆ ಭೇಟಿ ನೀಡದೇ ಸಲ್ಲಿಸಿದ ವರದಿಗೆ ಆಕ್ಷೇಪವೂ ವ್ಯಕ್ತವಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್‌ ಸೂಚನೆ ನೀಡಿದ್ದಾರೆ. ಸಮೀಕ್ಷೆ ನಡೆದು ವರದಿ ಸಲ್ಲಿಕೆಯಾದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪರಿಹಾರ ಲಭ್ಯವಾಗಲಿದೆ.

ತೇವಾಂಶ ಹೆಚ್ಚಿ ಹಾಳಾದ ಕಡಲೆ

ಹಿರಿಯೂರು: ಕಡಲೆ ಬಿತ್ತನೆ ಮಾಡಿ ಗೇಣುದ್ದದ ಸಸಿ ಬೆಳೆದು ನಿಂತ ಸಂದರ್ಭದಲ್ಲಿ ಮಳೆಯಾಗಿದ್ದುದನ್ನು ಕಂಡು ಈ ಬಾರಿ ಪೂರ್ಣಪ್ರಮಾಣದ ಬೆಳೆ ಕೈಗೆ ಸಿಗುತ್ತದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.

ನವೆಂಬರ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ಕಡಲೆ ಬಿತ್ತನೆ ಮಾಡಿದ್ದ ತಾಲ್ಲೂಕಿನ ಐಮಂಗಲ ಮತ್ತು ಕಸಬಾ ಹೋಬಳಿ ರೈತರು ಎರಡನೇ ವಾರದಲ್ಲಿ ಆರಂಭವಾದ ಮಳೆ ವರವಾಗಿ ಬಂದಿದೆ ಎಂಬ ಭಾವನೆಯಲ್ಲಿದ್ದರು. ಆದರೆ, ಎಡೆಬಿಡದೆ ಸುರಿದ ಮಳೆಯಿಂದ ಬಿತ್ತನೆ ಮಾಡಿದ್ದ ಜಮೀನಿನ ತುಂಬ ನೀರು ನಿಂತ ಪರಿಣಾಮ ಮತ್ತೊಮ್ಮೆ ರೈತರ ಬದುಕು ಬೀದಿಗೆ ಬಿದ್ದಿದೆ.

‘80 ಎಕರೆಯಲ್ಲಿ ಕಡಲೆ ಬಿತ್ತನೆ ಮಾಡಿದ್ದೆ. ಪ್ರತಿ ಎಕರೆಗೆ ಎರಡು ಪಾಕೆಟ್ ಬಿತ್ತನೆ ಬೀಜ, ರಸಗೊಬ್ಬರ ಸೇರಿ ಎಕರೆಗೆ ₹ 1,350 ವೆಚ್ಚ ಮಾಡಿದ್ದೆ. ಬಿತ್ತನೆಗೆ ಭೂಮಿ ಹಸನು ಮಾಡಿದ್ದು ಒಳಗೊಂಡು ಆರೇಳು ಸಾವಿರ ರೂಪಾಯಿ ಖರ್ಚು ಮಾಡಿದ್ದೆ. ಬೀಜ ಮೊಳಕೆ ಒಡೆದು, ಹಸಿರು ಮೂಡಿಸಿತ್ತು. ಅಕಾಲಿಕ ಮಳೆಯಿಂದ ಜಮೀನಿನ ಅರ್ಧಭಾಗದಲ್ಲಿ ನೀರು ನಿಂತು ಗಿಡಗಳೆಲ್ಲ ಕೊಳೆತುಹೋಗಿವೆ’ ಎಂದು ಗನ್ನಾಯಕನಹಳ್ಳಿಯ ರೈತ ವಿನಯ್ ನೋವು ಹೊರಹಾಕಿದರು.

‘ಅಕ್ಟೋಬರ್ ತಿಂಗಳಲ್ಲಿ ಕಡಲೆ ಬಿತ್ತಿದ್ದೆ. ನೆಲ ಕಾಣದಂತೆ ಗಿಡಗಳು ಹರಡಿಕೊಂಡಿದ್ದವು. ಔಷಧ ಸಿಂಪಡಣೆ ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಆರಂಭವಾಯಿತು. ಬಹುತೇಕ ಗಿಡಗಳು ಕೊಳೆತುಹೋಗಿವೆ. ಹಿಂದಿನ ವರ್ಷ ಬೆಳೆಹಾನಿ ಪರಿಶೀಲನೆಗೆ ಕಂದಾಯ
ಸಚಿವರು ನನ್ನ ಜಮೀನಿಗೆ ಬಂದಿದ್ದರು. ಈ ವರ್ಷವೂ ನಷ್ಟವೇ ಗತಿ’ ಎಂದು ಬಬ್ಬೂರಿನ ಕಾಂತರಾಜ್ ಬೇಸರ ವ್ಯಕ್ತಪಡಿಸಿದರು.

ಐಮಂಗಲ ಹೋಬಳಿಯ ಗನ್ನಾಯಕನಹಳ್ಳಿ, ಮಲ್ಲಪ್ಪನಹಳ್ಳಿ, ಗುಯಿಲಾಳು ಸುತ್ತಮುತ್ತ ಕಡಲೆ ಮತ್ತು ಈರುಳ್ಳಿ ಬೆಳೆಗಾರರು, ಯರಬಳ್ಳಿ, ಹರ್ತಿಕೋಟೆ ಭಾಗದಲ್ಲಿ ಹಾಗೂ ಜವನಗೊಂಡನಹಳ್ಳಿ, ಧರ್ಮಪುರ ಹೋಬಳಿಗಳಲ್ಲಿ ಶೇಂಗಾ ಬೆಳೆಗಾರರು ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಳೆತ ಸೊಪ್ಪು, ತರಕಾರಿ, ಪಪ್ಪಾಯ

ಹೊಳಲ್ಕೆರೆ: ನವೆಂಬರ್ ಮಧ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ತಾಲ್ಲೂಕಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಸುಗಂಧರಾಜ, ಸೇವಂತಿಗೆ, ಚೆಂಡು ಹೂ, ಪಪ್ಪಾಯ, ಬಾಳೆ, ಟೊಮೆಟೊ ನೀರುಪಾಲಾಗಿವೆ. ಹೆಚ್ಚು ಮಳೆಯಿಂದ ಈಗಲೂ ಹಳ್ಳಗಳಲ್ಲಿ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶದ ತೋಟಗಳಲ್ಲಿ ನೀರು ನಿಂತಿದೆ. ಗುಡ್ಡದಿಂದ ಬಸಿಯುವ ಜೋಪಿನ ನೀರು ತೋಟಗಳಲ್ಲಿ ಹರಿಯುತ್ತಿದ್ದು, ತೇವಾಂಶ ಹೆಚ್ಚಾಗಿ ಬೆಳೆಗಳು ಒಣಗುತ್ತಿವೆ.

ತಾಳ್ಯ ಹೋಬಳಿಯ ನಗರಘಟ್ಟ, ಮತಿಘಟ್ಟ, ಎಚ್.ಡಿ.ಪುರ, ನಂದನಹೊಸೂರು, ಉಪ್ಪರಿಗೇನಹಳ್ಳಿ, ಕೆರೆಯಾಗಳಹಳ್ಳಿ, ಕೊಳಾಳು, ತೇಕಲವಟ್ಟಿ ಭಾಗದಲ್ಲಿ ಹೆಚ್ಚು ಹೂ ಬೆಳೆಯುತ್ತಿದ್ದು, ಮಳೆಯಿಂದ ಹೂವಿನ ಬೆಳೆ ಹಾಳಾಗಿದೆ. ತೇವಾಂಶ ಹೆಚ್ಚಾಗಿ ಟೊಮೆಟೊ, ಬದನೆ, ಬೆಂಡೆ, ಬೀನ್ಸ್, ಮೆಣಸಿನಕಾಯಿ, ಮೂಲಂಗಿ, ಜವಳಿಕಾಯಿ, ಹಾಗಲಕಾಯಿ, ಹೀರೆಕಾಯಿ ಮತ್ತಿತರ ತರಕಾರಿ ಬೆಳೆ ಕೊಳೆತುಹೋಗಿವೆ. ಪಾಲಕ್, ಮೆಂತ್ಯೆ, ಕೊತ್ತಂಬರಿ, ಪುದಿನಾ, ಸಬ್ಬಸಿಗೆ, ದಂಟು ಮತ್ತಿತರ ಸೊಪ್ಪಿನ ಮಡಿಗಳು ಮಳೆಯಿಂದ ನಾಶವಾಗಿವೆ.

‘ದೀಪಾವಳಿ ಹಬ್ಬದ ಸೀಸನ್‌ಗೆ ಚೆಂಡು ಹೂ ಬೆಳೆದಿದ್ದೆವು. ಆದರೆ, ಒಂದು ವಾರ ಎಡಬಿಡದೆ ಸುರಿದ ಮಳೆಯಿಂದ ಹೂವಿನ ಗಿಡಗಳು ಒಣಗಿಹೋದವು. ಬೀಜ, ಗೊಬ್ಬರ, ಔಷಧ, ಬೇಸಾಯ, ಕೂಲಿಗೆಂದು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಅಸಲು ಕೂಡ ಸಿಕ್ಕಿಲ್ಲ’ ಎನ್ನುತ್ತಾರೆ ಈಚಗಟ್ಟದ ಹೂ ಬೆಳೆಗಾರರಾದ ಹೋಟೆಲ್ ಮೋಕ್ಷಪತಿ ಹಾಗೂ ಉಜ್ಜಿನಿ ಸ್ವಾಮಿ.

ಸಂಕಷ್ಟಕ್ಕೆ ಸಿಲುಕಿದ ಹೂವು ಬೆಳೆಗಾರ

ನಾಯಕನಹಟ್ಟಿ: ಜಿಲ್ಲೆಯಲ್ಲಿ ನಿರಂತವಾಗಿ ಸುರಿದ ಮಳೆಗೆ ಸೇವಂತಿ ಸೇರಿ ಎಲ್ಲ ಹೂವಿನ ಬೆಳೆಗೆ ತೇವಾಂಶ ಹೆಚ್ಚಾಗಿ ಗಿಡಗಳು ಕೊಳೆಯುತ್ತಿವೆ. ಹೂವು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಯಕನಹಟ್ಟಿ ಹೋಬಳಿಯು ದಶಕದಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬಳಲಿದೆ. ಎರಡು ವರ್ಷಗಳಿಂದ ಬಿದ್ದ ಮಳೆಯಿಂದ ಕೆರೆಕಟ್ಟೆಗಳು ತುಂಬಿವೆ. ಇದರಿಂದ ಕೊಳವೆಬಾವಿಗಳಲ್ಲಿ ಸಿಗುವ ಅತ್ಯಲ್ಪ ನೀರಿನಲ್ಲಿ ಆಧುನಿಕ ಕೃಷಿ ಪದ್ಧತಿಗಳಾದ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ನಿತ್ಯವೂ ಆದಾಯ ತಂದುಕೊಡುವ ವಾಣಿಜ್ಯ ಬೆಳೆಯಾಗಿ ಸೇವಂತಿ ಹೂವು ಪ್ರಸಿದ್ಧಿ.

ಹೋಬಳಿಯ ನೆಲಗೇತನಹಟ್ಟಿ, ಸರೋಜವ್ವನಹಳ್ಳಿ, ಬೊಮ್ಮಕ್ಕನಹಳ್ಳಿ, ರಾಮದುರ್ಗ, ದೊರೆಗಳಹಟ್ಟಿ, ಬೋಸೆದೇವರಹಟ್ಟಿ, ಉಪ್ಪಾರಹಟ್ಟಿ, ಎತ್ತಿನಹಟ್ಟಿ, ಕೋಲಮ್ಮನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಪುಷ್ಪ ಕೃಷಿಯತ್ತ ರೈತರು ಹೊರಳಿದ್ದಾರೆ. ಹೋಬಳಿಯಾದ್ಯಂತ 550ರಿಂದ 600 ಎಕರೆ ಪ್ರದೇಶದಲ್ಲಿ ಹಳದಿ ಪೇಪರ್, ಬಿಳಿ ಪೇಪರ್, ಕ್ರೀಮ್‍ಯೆಲ್ಲೋ, ಸೆಂಟೆಲ್, ಚಾಂದಿನಿ, ಕಾವೇರಿ, ನಾಗಿಣಿ, ಕುಪ್ಪಮ್ಮ, ಪೂರ್ಣಿಮಾ, ಸೇವಂತಿಪಚ್ಚ ಹೀಗೆ ವಿವಿಧ ತಳಿಯ ಹೂವುಗಳನ್ನು ಬೆಳೆಯಲಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬದಲ್ಲಿ ಸೇವಂತಿಪಚ್ಚ ಮತ್ತು ಕುಪ್ಪಮ್ಮ ತಳಿಯ ಸೇವಂತಿ ಹೂವುಗಳ ಇಳುವರಿ, ಬೆಲೆ ಮತ್ತು ಮಾರುಕಟ್ಟೆ ದೊರೆತು ಉತ್ತಮ ಆದಾಯವನ್ನು ತಂದುಕೊಡುತ್ತವೆ.

‘ಜಿಲ್ಲೆಯು ಸಮಶೀತೋಷ್ಣ ವಲಯದಲ್ಲಿದ್ದು, ಗುಣಮಟ್ಟದ ಸೇವಂತಿ ಹೂವು ಬೆಳೆಯಲು ನೈಸರ್ಗಿಕ ಹವಾಗುಣವಿದೆ. ಬೆಳೆದ ಹೂವನ್ನು ಮಾರಾಟ ಮಾಡಲು ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಬಳ್ಳಾರಿಗಳಲ್ಲಿ ಹೂವಿನ ಮಾರುಕಟ್ಟೆಗಳಿದ್ದು, ಸಾಗಾಣಿಕೆ ಮತ್ತು ಸಂಚಾರ ಸೌಲಭ್ಯಗಳೂ ಉತ್ತಮವಾಗಿದೆ. ಇದರಿಂದ ನೂರಾರು ರೈತರು ಸೇವಂತಿ ಹೂವು ಬೆಳೆಯಲು ಮುಂದಾಗಿದ್ದಾರೆ. ಆದರೆ, ಕಳೆದ 15 ದಿನಗಳಿಂದ ನಿರಂತರವಾಗಿ ಮೋಡ ಕವಿದ ವಾತಾವರಣ ಮತ್ತು ಅಕಾಲಿಕವಾಗಿ ಸುರಿದ ಮಳೆಗೆ ಉತ್ತಮವಾದ ಆದಾಯದ ನೀರಿಕ್ಷೆಯಲ್ಲಿದ್ದ ಹೋಬಳಿಯ ಸೇವಂತಿ ಬೆಳೆಗಾರರು ತೀವ್ರ ನಷ್ಟವನ್ನು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎನ್ನುತ್ತಾರೆ ಜಿ. ಅಜ್ಜಯ್ಯ.

‘ಬೇಸಾಯ, ಕಳೆ, ಔಷಧೋಪಚಾರ ಸೇರಿ 90 ದಿನಗಳವರೆಗೂ ಗಿಡಗಳನ್ನು ಜತನ ಮಾಡಲಾಗಿತ್ತು. ಹೂವು ಕಟಾವಿನ ವೇಳೆಗೆ ಮಳೆ ಹಿಡಿದುಕೊಂಡು ಕೈಗೆ ಬಂದಿದ್ದ ಬೆಳೆ ಸಂಪೂರ್ಣವಾಗಿ ಕೊಳೆತು ನಾಶವಾಗಿದೆ. ಒಂದು ಎಕರೆ ಭೂಮಿಯಲ್ಲಿ ಸೇವಂತಿ ಬೆಳೆಯಲು ಸುಮಾರು ₹ 70 ಸಾವಿರದವರೆಗೂ ವೆಚ್ಚ ಮಾಡಲಾಗಿತ್ತು. ಮಳೆಯಿಂದ ನಷ್ಟ ಅನುಭವಿಸುವಂತಾಯಿತು’ ಎಂದು ರೈತ ಸಣ್ಣೋಬಯ್ಯ ಬೇಸರ ವ್ಯಕ್ತಪಡಿಸುತ್ತಾರೆ.

ಜಾನುವಾರು ಮೇವು ನೀರುಪಾಲು

ಮೊಳಕಾಲ್ಮುರು: ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಶೇಂಗಾ ಇಳುವರಿ ಮಾತ್ರವಲ್ಲದೇ ಮೇವು ಕೂಡ ನೀರು ಪಾಲಾಗಿದೆ. ಜಾನುವಾರು ಮೇವಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಹಲವು ದಶಕಗಳಿಂದ ತಾಲ್ಲೂಕಿನಲ್ಲಿ ಸಾಕಷ್ಟು ನಷ್ಟಗಳ ಮಧ್ಯೆಯೂ ರೈತರು ಶೇಂಗಾ ಬಿತ್ತನೆ ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷ ಇಳುವರಿ ಸಿಗಬಹುದು ಎಂಬ ನಂಬಿಕೆ ಹುಸಿಯಾಗಿದೆ. ಜಾನುವಾರು, ಕುರಿ, ಮೇಕೆಗಳಿಗೆ ಇದರಿಂದ ಗುಣಮಟ್ಟದ ಮೇವು (ಶೇಂಗಾ ಹೊಟ್ಟು) ಸಿಗುವ ನಿರೀಕ್ಷೆಯೂ ಮಣ್ಣು ಪಾಲಾಗಿದೆ. ಈ ಬಾರಿ ಬುಡಕೊಳೆ ರೋಗ, ಮಳೆಯಿಂದಾಗಿ ಬಳ್ಳಿ ಕಪ್ಪಾಗಿ ಕೊಳೆತುಹೋಗಿದೆ.

ಜಿಲ್ಲೆಯಲ್ಲಿ 2.25 ಲಕ್ಷ ದನಕರು, 1.13 ಲಕ್ಷ ಎಮ್ಮೆ, 13.52 ಲಕ್ಷ ಕುರಿ ಹಾಗೂ 3.85 ಲಕ್ಷ ಮೇಕೆಗಳಿವೆ. ಇವುಗಳಿಗೆ ಮನೆ ಮುಂದೆ ಹಾಕಲು ಶೇಂಗಾ ಹೊಟ್ಟು ಮುಖ್ಯ ಆಹಾರವಾಗಿತ್ತು. ಕಟಾವಿನ ಸಮಯದಲ್ಲಿ ಬಳ್ಳಿ ನಷ್ಟಕ್ಕೀಡಾಗಿರುವುದು ಜಾನುವಾರು ಮಾಲೀಕರಿಗೆ ಆತಂಕ ತಂದಿದೆ.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಕಸಬಾ ಹೋಬಳಿಯಲ್ಲಿ ಶೇಂಗಾ, ದೇವಸಮುದ್ರ ಹೋಬಳಿಯಲ್ಲಿ ಹತ್ತಿ, ಮೆಣಸಿನಕಾಯಿ ನಾಟಿ ಮಾಡಲಾಗಿತ್ತು. ಎಲ್ಲಾ ಬೆಳೆಗಳು ಮಳೆಯಿಂದ ಕೈಕೊಟ್ಟಿವೆ. ಆದ್ದರಿಂದ ಜನ, ಜಾನುವಾರು ಇಬ್ಬರಿಗೂ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅಧಿಕಾರಿಗಳು ನೈಜ ವರದಿ ಸಲ್ಲಿಸಿ ನೆರವು ಕಲ್ಪಿಸಬೇಕು ಎಂಬುದು ರೈತರ ಮನವಿ.

***

ನವೆಂಬರ್‌ ತಿಂಗಳ ಎರಡು ವಾರ ಸುರಿದ ಮಳೆ ಕೃಷಿ ಬೆಳೆಗೆ ತೊಂದರೆ ಉಂಟು ಮಾಡಿದೆ. ಫಸಲಿಗೆ ಬಂದಿದ್ದ ಬೆಳೆ ನೀರು ಪಾಲಾಗಿದೆ. ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ಡಾ.ಪಿ.ರಮೇಶಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

***

ಬೆಳೆವಿಫಲ ಮತ್ತು ಬೆಳೆ ನಾಶವಾದಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೃಷಿ ಭೂಮಿಗೆ ಭೇಟಿ ನೀಡಬೇಕು. ವಿಜ್ಞಾನಿಗಳು ಭೇಟಿ ಕೊಟ್ಟು ಯಾವ ಕಾಲಕ್ಕೆ ಯಾವ ಬೆಳೆಗಳು ಸೂಕ್ತ ಎಂಬುದನ್ನು ರೈತರಿಗೆ ಸಲಹೆ ಮಾರ್ಗದರ್ಶನ ನೀಡಲು ಮುಂದಾಗಬೇಕು.

ಜಿ.ಅಜ್ಜಯ್ಯ, ರಾಮದುರ್ಗ

***

ಬಿತ್ತನೆ ಖರ್ಚಿನ ಕಾಲು ಭಾಗ ಸಹ ವಾಪಸ್ ಆಗುತ್ತಿಲ್ಲ. ಮೊದಲು ಕಾಯಿ ಕಟ್ಟಲಿಲ್ಲ. ಕೊನೆಗೆ ಬಳ್ಳಿ ಕೊಳೆತುಹೋಯಿತು. ದುಪ್ಪಟ್ಟು ನಷ್ಟ ಸುಧಾರಿಸಿಕೊಳ್ಳಲು ಆಗುತ್ತಿಲ್ಲ.

ತಿಪ್ಪೇಸ್ವಾಮಿ, ರೈತ, ಬಿಳಿನೀರು ಚಿಲುಮೆ ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT