ಸೋಮವಾರ, ಸೆಪ್ಟೆಂಬರ್ 27, 2021
22 °C
ಸಮೀಕ್ಷೆಯಲ್ಲಿ ರಾಜ್ಯದಲ್ಲೇ ಎರಡು ಅಥವಾ ಮೂರನೇ ಸ್ಥಾನ ತಲುಪಲು ಈಗಿನಿಂದಲೇ ಇಲಾಖೆ ಪ್ರಯತ್ನ

ಚಿತ್ರದುರ್ಗ: ಬೆಳೆ ಸಮೀಕ್ಷೆ; ಇಲಾಖೆಗೆ ಗುರಿ ಪರೀಕ್ಷೆ

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ಮಾಡುವ ಜವಾಬ್ದಾರಿಯನ್ನು ಅನ್ನದಾತರಿಗೆ ನೀಡಿದೆ. ಜಿಲ್ಲೆಯ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಸಮೀಕ್ಷೆಗೆ ಉತ್ಸುಕರಾಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಆ. 1ರಿಂದ ‘ಬೆಳೆ ಸಮೀಕ್ಷೆ ಆ್ಯಪ್‌’ ತಂತ್ರಾಂಶ ತೆರೆದುಕೊಂಡಿದ್ದು, ಸಂಪೂರ್ಣವಾಗಿ ರೈತರಿಂದಲೇ ಸಮೀಕ್ಷೆ ನಡೆಸಲು ಪ್ರಯತ್ನ ನಡೆಯುತ್ತಿದೆ.

ಜಿಲ್ಲೆಯ ಅನೇಕ ರೈತರ ಬಳಿ ಸ್ಮಾರ್ಟ್‌ ಫೋನ್ ಇಲ್ಲ. ನೆಟ್‌ವರ್ಕ್ ಸಮಸ್ಯೆ, ಮಾಹಿತಿಯ ಕೊರತೆ ಹೀಗೆ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ. ಈ ನಡುವೆಯೂ ಇಲಾಖೆಯಿಂದ ಜಾರಿಯಾದ ‘ನನ್ನ ಬೆಳೆ ನನ್ನ ಹಕ್ಕು’ ಘೋಷ ವಾಕ್ಯದೊಂದಿಗೆ ಪರಿಪೂರ್ಣ ಬೆಳೆ ಸಮೀಕ್ಷೆ ಕಳೆದ ವರ್ಷ ನಡೆದಿತ್ತು. ರೈತರಿಗಿಂತಲೂ ಪಿಆರ್‌ಗಳ (ಪ್ರೈವೇಟ್‌ ರೆಸಿಡೆನ್ಸೀಸ್‌) ಪಾತ್ರವೇ ಹೆಚ್ಚಿತ್ತು. ಶೇ 55ರಿಂದ 60ರಷ್ಟು ಸಮೀಕ್ಷೆ ಇವರಿಂದ ನಡೆದಿತ್ತು. ಆದರೆ, ಈ ಬಾರಿ ಅನ್ನದಾತರು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂಬುದು ಇಲಾಖೆಯ ನಿರೀಕ್ಷೆ.

ಜಿಲ್ಲೆಯಲ್ಲಿ ಒಟ್ಟು 6,02,239 ತಾಕುಗಳಿವೆ. ಮುಂಗಾರು ಆರಂಭವಾದ ನಂತರ ಬಿತ್ತನೆ ಹೆಚ್ಚಾಗುತ್ತದೆ. ಈಗಷ್ಟೇ ಸಮೀಕ್ಷೆ ಆರಂಭವಾಗಿದ್ದು, ಜಮೀನುಗಳಲ್ಲಿ ಸಮೀಕ್ಷೆ ಮಾಡಿಕೊಳ್ಳಲು ಮುಂದಾಗಿ ಎಂದು ಅನ್ನದಾತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಬಾರಿ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ಈ ಬಾರಿ ಎರಡು ಅಥವಾ ಮೂರನೇ ಸ್ಥಾನಕ್ಕೆ ತರಲು ಪ್ರಯತ್ನ ನಡೆಯುತ್ತಿದೆ.

ಪ್ರತಿಯೊಬ್ಬ ರೈತರು ಆ್ಯಪ್‌ನಲ್ಲಿ ತಮ್ಮ ಜಮೀನಿನ ವಿಸ್ತೀರ್ಣ, ಛಾಯಾಚಿತ್ರ ಸಹಿತ ಬೆಳೆಯ ವಿವರಗಳ ಕುರಿತು ನಿಖರ ಮಾಹಿತಿ ನಮೂದಿಸಬೇಕು. ಜಿಲ್ಲೆಯ ಪ್ರತಿ ಗ್ರಾಮಗಳಿಗೂ ವ್ಯಕ್ತಿಯೊಬ್ಬರನ್ನು ಪ್ರಚಾರಕ್ಕಾಗಿ ನೇಮಿಸಲಾಗಿದೆ. ಯಾವ ರೀತಿ ಅಪ್‌ಲೋಡ್ ಮಾಡಬೇಕು ಎಂಬ ಮಾಹಿತಿಯನ್ನು ಪಿಆರ್‌ಗಳು ತಿಳಿಸಿಕೊಡಲಿದ್ದಾರೆ. ಕೆಲ ರೈತರ ತಾಕುಗಳಲ್ಲಿ ಪಿಆರ್‌ಗಳೇ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.

ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಬೆಳೆ ಮಾರಾಟ ಮಾಡಲು ಇದರಿಂದ ಅನುಕೂಲವಾಗುತ್ತದೆ. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಅತಿವೃಷ್ಟಿ ಹಾಗೂ ಬೆಳೆಸಾಲದ ಸಂದರ್ಭದಲ್ಲಿ ಈ ಸಮೀಕ್ಷೆ ನೆರವಿಗೆ ಬರುತ್ತದೆ. ಪ್ರತಿ ಹಂಗಾಮಿನಲ್ಲಿ ರೈತ ತನ್ನ ಜಮೀನಿನಲ್ಲಿ ಬೆಳೆಯುವ ಬೆಳೆಯ ಕುರಿತು ಮಾಹಿತಿ ನೀಡುವುದರಿಂದ ರೈತರಿಗೆ ಅಗತ್ಯ ಮಾಹಿತಿ ಹಾಗೂ ಸೌಲಭ್ಯ ನೀಡಲಿಕ್ಕೂ ಸಹಕಾರಿಯಾಗಲಿದೆ.

‘ಬೆಳೆ ಆ್ಯಪ್‌ ಜಾರಿಗೂ ಮುನ್ನ ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆಗಳನ್ನು ಬೆಳೆಯಲಾಗಿದೆ ಎಂಬ ಕುರಿತು ವಿವರ ನೀಡಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಹೋಗಬೇಕಾಗಿತ್ತು. ಈ ಆ್ಯಪ್‌ನಿಂದ ಇಲಾಖಾ ಕಚೇರಿಗಳಿಗೆ ಅಲೆದಾಡುವುದು ತಪ್ಪಿದೆ. ಜಿಲ್ಲೆಯ ಅನೇಕ ಅನ್ನದಾತರಿಗೆ ಅಂತರ್ಜಾಲ ಬಳಕೆಯ ಜ್ಞಾನವಿದ್ದು, ಸ್ವತಃ ಸಮೀಕ್ಷೆ ನಡೆಸುವ ವಿಶ್ವಾಸವಿದೆ. ಸಮೀಕ್ಷೆ ಮಾಡಲು ಗೊತ್ತಾಗದವರಿಗೆ ಪಿ.ಆರ್‌. ಸಹಾಯ ಮಾಡಲಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ. ರಮೇಶಕುಮಾರ್ ತಿಳಿಸಿದ್ದಾರೆ.

‘ಕೃಷಿ, ತೋಟಗಾರಿಕೆ, ಕಂದಾಯ, ರೇಷ್ಮೆ ಇಲಾಖೆಗಳು ಸೇರಿ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ಪಾತ್ರ ಹೆಚ್ಚಿದೆ. ಹಿಂದಿನ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಶೇ 100ರಷ್ಟು ಗುರಿ ತಲುಪುವ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ಅವರು.

97 ಸಾವಿರ ಕೃಷಿ ತಾಕು ಸಮೀಕ್ಷೆ
ಹೊಳಲ್ಕೆರೆ:
ತಾಲ್ಲೂಕಿನಲ್ಲಿ 97 ಸಾವಿರ ಕೃಷಿ ತಾಕುಗಳಿದ್ದು, ಬೆಳೆ ಸಮೀಕ್ಷೆಗೆ ಸಿದ್ಧತೆ ನಡೆಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ವಿ. ಪ್ರಕಾಶ್ ತಿಳಿಸಿದ್ದಾರೆ.

‘ರೈತರು ತಾವು ಬೆಳೆದಿರುವ ಬೆಳೆಗಳನ್ನು ಸಮೀಕ್ಷೆ ಮಾಡಬೇಕಿದೆ. ಕಳೆದ ವರ್ಷ ಶೇ 100ರಷ್ಟು ಸಮೀಕ್ಷೆ ನಡೆಸಲಾಗಿತ್ತು. ಈ ವರ್ಷ ಆ. 1ರಿಂದ ಬೆಳೆ ಸಮೀಕ್ಷೆ ಆರಂಭಗೊಂಡಿದ್ದು, 60 ರೈತರು ಮಾತ್ರ ಸಮೀಕ್ಷೆ ಮಾಡಿದ್ದಾರೆ. ಸ್ಮಾರ್ಟ್‌ ಫೋನ್ ಮೂಲಕ ಸಮೀಕ್ಷೆ ಮಾಡಬೇಕಿದ್ದು, ಎಲ್ಲ ರೈತರ ಹತ್ತಿರ ಸ್ಮಾರ್ಟ್‌ ಫೋನ್ ಇರುವುದಿಲ್ಲ. ಆದ್ದರಿಂದ ಸರ್ಕಾರದಿಂದಲೇ ಖಾಸಗಿಯವರಿಂದ ಸಮೀಕ್ಷೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

‘ತಾಲ್ಲೂಕಿನಲ್ಲಿ 197 ಹಳ್ಳಿಗಳಿದ್ದು, ಸಮೀಕ್ಷೆ ಮಾಡಲು 135 ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಇವರಿಗೆ ಪ್ರತಿ ಪ್ಲಾಟ್‌ಗೆ ₹ 10 ನೀಡಲಾಗುವುದು. ಈ ವರ್ಷವೂ ಶೇ 100ರಷ್ಟು ಗುರಿ ಸಾಧಿಸಬೇಕಿದ್ದು, 2 ತಿಂಗಳ ಗಡುವು ನೀಡಿದ್ದೇವೆ’ ಎಂದು ಎಡಿಎ ತಿಳಿಸಿದ್ದಾರೆ.

‘ಬೆಳೆ ವಿಮೆ, ಬೆಳೆ ಸಾಲ ಪಡೆಯಲು ಸಮೀಕ್ಷೆ ಅಗತ್ಯ. ಸಮೀಕ್ಷೆಯ ಸಂದರ್ಭದಲ್ಲಿ ಬೆಳೆಗಳ ಹೆಸರು ಮತ್ತು ಫೋಟೊ ಹೋಲಿಕೆ ಆಗದಿದ್ದರೆ, ರೈತರಿಗೆ ಸೌಲಭ್ಯಗಳು ಸಿಗುವುದಿಲ್ಲ. ಸಮೀಕ್ಷೆ ವೇಳೆ ತಪ್ಪುಗಳಾಗಿದ್ದರೆ ಸರಿಪಡಿಸಲು ಸಮಯಾವಕಾಶ ನೀಡಲಾಗುತ್ತದೆ’ ಎನ್ನುತ್ತಾರೆ ಅವರು.

ಆಗದ ಸಮೀಕ್ಷೆ
ಮೊಳಕಾಲ್ಮುರು: 
ಸರ್ಕಾರ ಮಹತ್ವದ್ದು ಎಂದು ಹೇಳಿಕೊಳ್ಳುವ ಬೆಳೆ ಸಮೀಕ್ಷೆ ವರದಿ ತಾಲ್ಲೂಕಿನಲ್ಲಿ ರೈತರಿಗೆ ವರದಾನ ಆಗಿಲ್ಲ ಎಂಬುದು ರೈತ ಸಂಘಟನೆಗಳ ಆರೋಪ.

ಫಸಲ್‌ ಬಿಮಾ ಯೋಜನೆಯ ಪ್ರಯೋಜನ ತಾಲ್ಲೂಕಿಗೆ ದಕ್ಕುತ್ತಿಲ್ಲ. ಇದಕ್ಕೆ ಬೆಳೆ ಸಮೀಕ್ಷೆ ವರದಿ ಮುಖ್ಯ ಕಾರಣ. ವಿಮೆ ಕಂಪನಿಗಳು ಕಡಿಮೆ ರೈತರು ಪಾವತಿ ಮಾಡಿರುವ ಮತ್ತು ಕಡಿಮೆ ಜಮೀನು ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಪೂರ್ಣ
ಹೊಸದುರ್ಗ:
ಖಾಸಗಿ ನಿವಾಸಿಗಳು (ಪಿಆರ್‌) ಹಾಗೂ ರೈತರ ನೆರವಿನೊಂದಿಗೆ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ತಾಲ್ಲೂಕಿನಲ್ಲಿ ಪರಿಪೂರ್ಣವಾಗಿ ನಡೆದಿದೆ.

ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ತಾಲ್ಲೂಕಿನ ಹಲವೆಡೆ ಹದ ಮಳೆಯಾಗಿದ್ದರಿಂದ ಬಹುತೇಕ ರೈತರು ಎಳ್ಳು, ಹೆಸರುಕಾಳು ಹಾಗೂ ಸಾಮೆ ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿಯೇ ಹೊಸದುರ್ಗ ತಾಲ್ಲೂಕಿನಲ್ಲಿ ಮಾತ್ರ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ ಮೂಲಕ ಆಗುತ್ತಿರುವುದು ವಿಶೇಷ. ಪೂರ್ವ ಮುಂಗಾರು ಬೆಳೆ ಸಮೀಕ್ಷೆಯನ್ನು ಮೊಬೈಲ್‌ ಆ್ಯಪ್‌ ಮೂಲಕ ಹೇಗೆ ಮಾಡಬೇಕು ಎಂಬ ಬಗ್ಗೆ ಖಾಸಗಿ ನಿವಾಸಿಗಳಿಗೆ (ಪ್ರತಿ ಹಳ್ಳಿಗೆ ಕಂದಾಯ ಇಲಾಖೆಯವರು ನೇಮಿಸಿದ್ದ ಸ್ಥಳೀಯ ವ್ಯಕ್ತಿ) ಸಾಕಷ್ಟು ತರಬೇತಿ ನೀಡಲಾಗಿದೆ. ಈ ಮಾಹಿತಿಯನ್ನು ತಮ್ಮ ಗ್ರಾಮಗಳ ರೈತರಿಗೂ ತಿಳಿಸುವಂತೆ ಜಾಗೃತಿ ಮೂಡಿಸಲಾಗಿದೆ.

ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಬೆಳೆ ಸಂಬಂಧ 1,07,027 ರೈತರ ತಾಕುಗಳಿವೆ. ಅದರಲ್ಲಿ 846 ತಾಕು ರೈತರು ಯಾರ ಸಹಾಯ ಪಡೆಯದೇ ತಮ್ಮ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಮಾಡಿದ್ದಾರೆ. ಇನ್ನುಳಿದ 1,06,375 ತಾಕುಗಳನ್ನು ಖಾಸಗಿ ನಿವಾಸಿಗಳ ನೆರವಿನೊಂದಿಗೆ ಬೆಳೆ ಸಮೀಕ್ಷೆ ಮಾಡಲಾಗಿದೆ. ನೀರು ಮುಳುಗು ಪ್ರದೇಶ, ಜಾಲಿ ಹಾಗೂ ತಾಂತ್ರಿಕ ದೋಷ ಹೊರತುಪಡಿಸಿ ಪೂರ್ವ ಮುಂಗಾರು ಬೆಳೆಗಳ ರೈತರ ಎಲ್ಲ ತಾಕುಗಳು ಈಗಾಗಲೇ ಅನುಮೋದನೆಯಾಗಿವೆ.

‘ಬೆಳೆ ಸಮೀಕ್ಷೆ ರೈತರಿಗೆ ವರದಾನವಾಗಿದೆ. ಮೊಬೈಲ್‌ ಆ್ಯಪ್‌ ಮೂಲಕ ತಮ್ಮ ಆಧಾರ್‌ ಕಾರ್ಡ್‌, ಜಮೀನಿನ ಸರ್ವೆ ನಂಬರ್‌, ಇರುವ ಬೆಳೆ ಸೇರಿ ಇತರ ಮಾಹಿತಿ ದಾಖಲಿಸುತ್ತಿರುವುದರಿಂದ (ಎಫ್‌ಐಡಿ) ಸರ್ಕಾರದ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಲು ನೆರವಾಗುತ್ತಿದೆ. ಬೆಳೆ ಸಮೀಕ್ಷೆ ಮಾಡುವಾಗ ಖಾಸಗಿ ನಿವಾಸಿಗಳು ಯಾವುದೇ ದೋಷ ಉಂಟಾಗದಂತೆ ಎಚ್ಚರ ವಹಿಸಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌. ಈಶ ತಿಳಿಸಿದ್ದಾರೆ.

ಆ್ಯಪ್‌ ಕುರಿತು ಒಂದಿಷ್ಟು
ಪ್ಲೇ ಸ್ಟೋರ್‌ನಲ್ಲಿ ಬೆಳೆ ಸಮೀಕ್ಷೆ 2021–22 ಮುಂಗಾರು ಆ್ಯಪ್‌ ಅನ್ನು ಮೊದಲು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಡೌನ್‌ಲೋಡ್ ಬಳಿಕ ಆ್ಯಪ್‌ನಲ್ಲಿ ಹೆಸರು, ಮೊಬೈಲ್‌ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಮಾಡಬೇಕು.

ಕೊಟ್ಟಿರುವ ಮೊಬೈಲ್‌ ನಂಬರ್‌ಗೆ ಒಟಿಪಿ ಬರಲಿದ್ದು, ಅದನ್ನು ನಮೂದಿಸಬೇಕು. ಆಗ ನೋಂದಣಿ ಖಚಿತವಾಗುತ್ತದೆ.

ನಂತರ ಇದರೊಳಗೆ ಕ್ರಾಪ್‌ ಮಾಸ್ಟರ್‌ ಡೆಟಾ ಡೌನ್‌ಲೋಡ್ ಮಾಡಿಕೊಳ್ಳಬೇಕು. ಸರ್ವೆ ನಂಬರ್‌ ಕೂಡ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಇವು ಡೌನ್‌ಲೋಡ್ ಆದ ನಂತರ ಸರ್ವೆ ನಂಬರ್‌ ದಾಖಲಿಸಿದ್ದೇವೆ ಅಂದುಕೊಂಡು ಎಲ್ಲಿಯೋ ಕುಳಿತು ಬೆಳೆಯ ಚಿತ್ರ ಅಪ್‌ಲೋಡ್ ಮಾಡಿದರೆ ತೆಗೆದುಕೊಳ್ಳುವುದಿಲ್ಲ.

ಸರ್ವೆ ನಂಬರ್‌ನಲ್ಲಿ ರೈತರು ಇದ್ದಲ್ಲಿ ಜಿಪಿಎಸ್‌ ತೆರೆದುಕೊಳ್ಳಲಿದ್ದು, ಆಗ ಬೆಳೆದಿರುವ ಬೆಳೆಯ ಮೂರು ಫೋಟೊ ದಾಖಲಿಸಬೇಕು. ಈ ರೀತಿ ಕ್ರಮ ಅನುಸರಿಸಿದಲ್ಲಿ ಮಾತ್ರ ಸಮೀಕ್ಷೆ ಯಶಸ್ವಿಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.