ಶನಿವಾರ, ಅಕ್ಟೋಬರ್ 19, 2019
27 °C

ಸಂಸ್ಕೃತಿ ಮರೆತರೆ ನಾಡು ಅಧಃಪತನ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Published:
Updated:
Prajavani

ಚಿತ್ರದುರ್ಗ: ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಭಾರತಕ್ಕೆ ಅತ್ಯುತ್ತಮ ಹೆಸರಿದೆ. ಇವೆರಡನ್ನೂ ಮರೆತರೆ ನಾಡು ಅಧಃಪತನಗೊಳ್ಳಲಿದೆ. ಗ್ರೀಕ್‌ ನಾಗರಿಕತೆಯೇ ಇದಕ್ಕೆ ನಿದರ್ಶನ ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ಇಲ್ಲಿನ ಮುರುಘಾ ಮಠದಲ್ಲಿ ಜಮುರಾ ಕಪ್‌ – 2019 ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗ್ರೀಕ್‌ ದೇಶ ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿತ್ತು. ಇದರಿಂದ ಅದು ವಿಶ್ವದಲ್ಲೇ ಖ್ಯಾತಿ ಗಳಿಸಿತ್ತು. ಸಂಸ್ಕೃತಿಯನ್ನು ಕಳೆದುಕೊಂಡ ಬಳಿಕ ದೇಶವೇ ಅಃಧಪತನಗೊಂಡಿತು’ ಎಂದು ಹೇಳಿದರು.

‘ಸಾಮರಸ್ಯ ಮತ್ತು ಸಮಾನತೆ ರೈಲು ಹಳಿಗಳಂತೆ ಸಮಾನಾಂತರವಾಗಿ ಸಾಗುತ್ತವೆ. ಇವುಗಳನ್ನು ಒಗ್ಗೂಡಿಸಿದಾಗ ಮಾತ್ರ ಸಮಾಜ ಪರಿವರ್ತನೆ ಹೊಂದಲು ಸಾಧ್ಯವಿದೆ. ಸಾಮಾಜಿಕ ಪರಿವರ್ತನೆಯ ವೇಗವನ್ನು ಹೆಚ್ಚಿಸಲು ವ್ಯಕ್ತಿಯೊಬ್ಬರು ಬೇಕಾಗುತ್ತಾರೆ. ಈ ಕಾರ್ಯವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಾಮಾಜಿಕ ಸಮಾನತೆಗೆ ಬಸವಣ್ಣನವರು ಪ್ರಯತ್ನಿಸಿದ್ದರು. ಅಸ್ಪೃಶ್ಯತೆ ನಿವಾರಣೆಗೂ ಶ್ರಮಿಸಿದ್ದರು. 12ನೇ ಶತಮಾನದಲ್ಲಿ ಸಾಧ್ಯವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಗುತ್ತಿಲ್ಲ ಎಂಬ ಬೇಸರವಿದೆ. ಪ್ರಜಾತಂತ್ರ ವ್ಯವಸ್ಥೆಯ ಯಶಸ್ವಿಗೆ ಎಲ್ಲರೂ ಒಗ್ಗೂಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಪಂಕ್ತಿಯಿಂದ ಅನ್ಯರನ್ನು ಮೇಲೆಬ್ಬಿಸಿ ಕಳುಹಿಸಿದ ಸ್ಥಳಗಳನ್ನು ನಾನು ಕಂಡಿದ್ದೇನೆ. ಆದರೆ, ಮುರುಘಾ ಮಠ ಮಾತ್ರ ಇದಕ್ಕೆ ಭಿನ್ನ. ಇಲ್ಲಿನ ಸಹಪಂಕ್ತಿ ಭೋಜನ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಅನುಕರಣೀಯ. ಮೈಸೂರಿನಲ್ಲಿ ರಾಜ ದರ್ಬಾರಿನ ದಸರಾ ನಡೆದರೆ, ಮುರುಘಾ ಮಠದಲ್ಲಿ ಸಾಮಾನ್ಯರ ಉತ್ಸವ ನಡೆಯುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ‘ಮುರುಘಾ ಮಠ ಹಲವು ವೈಶಿಷ್ಟ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಮೂಢನಂಬಿಕೆ, ಕಂದಾಚಾರದ ವಿರುದ್ಧ ಧ್ವನಿಯತ್ತಿ, ಹೊಸ ಪರಂಪರೆಗೆ ಮುನ್ನುಡಿ ಬರೆದಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಸಂದೇಶವನ್ನು ಅಕ್ಷರಶಃ ಪಾಲಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬಸವಣ್ಣನವರ ಭಾವಚಿತ್ರ ಎಲ್ಲರ ಮನೆಯಲ್ಲೂ ಇರುತ್ತದೆ. ಅದಕ್ಕೆ ಹೂಹಾಕಿ ಕೈಮುಗಿಯುತ್ತೇವೆಯೇ ಹೊರತು ಅವರ ತತ್ವಾದರ್ಶಗಳನ್ನು ಪಾಲನೆ ಮಾಡುತ್ತಿಲ್ಲ. ಶತಮಾನಗಳ ಹಿಂದೆಯೇ ಕ್ರಾಂತಿ ಮಾಡಿದ ಬಸವಣ್ಣ ಸಮಾಜಕ್ಕೆ ದಿಕ್ಸೂಚಿಯಾಗಿದ್ದಾರೆ. ಮಹಾತ್ಮ ಗಾಂಧೀಜಿ, ಬಿ.ಆರ್‌.ಅಂಬೇಡ್ಕರ್‌ ಕೂಡ ಇದೇ ಮಾರ್ಗದಲ್ಲಿ ಸಾಗಿದ್ದಾರೆ’ ಎಂದು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು, ಮಾದಾರ ಚನ್ನಯ್ಯ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಮುಖಂಡರಾದ ಹನುಮಾಲಿ ಷಣ್ಮುಖಪ್ಪ ಇದ್ದರು.

Post Comments (+)