ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ವಿಭಜಕದ ಮಾಹಿತಿ ಕೇಳಿದ ಡಿಸಿ

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ
Last Updated 22 ಸೆಪ್ಟೆಂಬರ್ 2022, 5:11 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿದ ರಸ್ತೆ ಹಾಗೂ ಅಳವಡಿಸಿದ ವಿಭಜಕದ ಕುರಿತು ಮಾಹಿತಿ ಕೇಳಿದ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಸರ್ಕಾರದ ಮಾನದಂಡಗಳು ಪಾಲನೆಯಾಗಿರುವ ಬಗ್ಗೆ ಲಿಖಿತ ದೃಢೀಕರಣ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾನಾಡಿದರು.

‘ನಗರದಲ್ಲಿ ಅಭಿವೃದ್ಧಿಪಡಿಸಲಾದ ಎಲ್ಲ ರಸ್ತೆಗಳ ಮಾಹಿತಿಯನ್ನು ನೀಡಬೇಕು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಗಾಂಧಿ ವೃತ್ತದವರೆಗೆ ರಸ್ತೆ ವಿಭಜಕ ಅಳವಡಿಸುವ ಅಗತ್ಯ ಇತ್ತೇ’ ಎಂದು ಪ್ರಶ್ನಿಸಿದರು.

‘ಈ ಮಾರ್ಗವನ್ನು ಬಹುಹಿಂದೆಯೇ ಏಕಮುಖ ಸಂಚಾರವಾಗಿ ಅಧಿಸೂಚನೆ ಹೊರಡಿಸಿರುವುದರಿಂದ ರಸ್ತೆ ವಿಭಜಕ
ಅಗತ್ಯ ಇರಲಿಲ್ಲ’ ಎಂದು ಎಸ್ಪಿಕೆ. ಪರಶುರಾಮ್‌ ಪ್ರತಿಕ್ರಿಯಿಸಿದರು.

‘ಸರ್ಕಾರದ ಮಾನದಂಡದ ಪ್ರಕಾರವೇ ರಸ್ತೆ ಅಭಿವೃದ್ಧಿಪಡಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಟಿ.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಪಾರ್ಕಿಂಗ್‌ ವ್ಯವಸ್ಥೆಗೆ ಸೂಚನೆ: ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಪೊಲೀಸರು, ನಗರಸಭೆ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ಮಾಡಬೇಕು. ಪಾರ್ಕಿಂಗ್‍ಗೆ ಅವಕಾಶ ಮಾಡಿಕೊಳ್ಳುವ ಕಟ್ಟಡಗಳಿಗೆ ಮಾತ್ರ ಪರವಾನಗಿ ನೀಡಬೇಕು’ ಎಂದು ಡಿಸಿ ಸೂಚಿಸಿದರು.

‘ಬಿ.ಡಿ.ರಸ್ತೆಯ ಗಾಂಧಿ ವೃತ್ತ ಹಾಗೂ ಎಸ್‍ಬಿಐ ಬ್ಯಾಂಕ್ ವೃತ್ತದ ಬಳಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಸ್ಥಳಗಳಲ್ಲಿ ಸಿಗ್ನಲ್ ಅಳವಡಿಸುವ ಅಗತ್ಯವಿದೆ ಎಂದರು.

‘ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಬೇಕು. ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಜಂಟಿ ಸಮೀಕ್ಷೆ ನಡೆಸಬೇಕು’ ಎಂದು ತಾಕೀತು ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಕೆ. ಸತ್ಯ ಇದ್ದರು.

15 ಅಪಘಾತ ವಲಯ

ಜಿಲ್ಲೆಯಲ್ಲಿ 15 ಹೊಸ ಅ‍‍ಪಘಾತ ವಲಯಗಳನ್ನು ಗುರುತಿಸಲಾಗಿದ್ದು, ಅಪಘಾತ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

‘ಚಿತ್ರದುರ್ಗದ ಜೆಎಂಐಟಿ ವೃತ್ತ, ಬಸವೇಶ್ವರ ಆಸ್ಪತ್ರೆ, ನಾಮಕಲ್ ಗ್ಯಾರೇಜ್, ಹಂಪನೂರು, ಕೊಳಹಾಳ್, ಈರಜ್ಜನಹಟ್ಟಿ, ಕೊಳಹಾಳ, ಚಿಕ್ಕಬೆನ್ನೂರು, ಹಿರಿಯೂರು ನಗರದ ವೇದಾವತಿ ಸೇತುವೆ, ದುಮ್ಮಿ, ಹೊಳಲ್ಕೆರೆ- ಹೊಸದುರ್ಗ ರಸ್ತೆ ಸೇರಿದಂತೆ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಲಾಗಿದೆ. 46 ರಸ್ತೆ ಉಬ್ಬುಗಳನ್ನು ತೆರವುಗೊಳಿಸುವ ಅಗತ್ಯವಿದೆ’ ಎಂದರು.

ಹೆದ್ದಾರಿ ಬದಿಯ ಡಾಬಾಗಳಲ್ಲಿ ಊಟದ ಜೊತೆಗೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅಪಘಾತ ಸಂಭವಿಸುತ್ತಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು.

- ಕೆ.ಪರಶುರಾಮ್‌, ಎಸ್ಪಿ

ಚಿತ್ರದುರ್ಗ ನಗರದಲ್ಲಿ 31 ಆಟೊ ನಿಲ್ದಾಣಗಳಿವೆ. ಇನ್ನೂ ಹೆಚ್ಚಿನ ಆಟೊ ನಿಲ್ದಾಣಕ್ಕೆ ಮನವಿಗಳು ಬರುತ್ತಿವೆ. ನಗರಸಭೆ ಕ್ರಮಕೈಗೊಳ್ಳಬೇಕು.

- ರಾಜು, ಇನ್‌ಸ್ಪೆಕ್ಟರ್, ಸಂಚಾರ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT