ಶುಕ್ರವಾರ, ಏಪ್ರಿಲ್ 3, 2020
19 °C
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ

ಕಲ್ಯಾಣ ಮಂಟಪಗಳ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ವೈರಸ್‌ ತಡೆಯುವ ಉದ್ದೇಶದಿಂದ ಜನಜಂಗುಳಿ ಸೇರುವ ಕಲ್ಯಾಣ ಮಂಪಟ, ಜಾತ್ರೆ, ಪ್ರವಾಸಿ ತಾಣಗಳ ಮೇಲೆ ನಿಗಾ ಇಡುವಂತೆ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾನುವಾರ ತುರ್ತು ಸಭೆ ನಡೆಸಿದ ಅವರು, ಜವಾಬ್ದಾರಿಯುತವಾಗಿ ವರ್ತಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕೊರೊನಾ ವೈರಸ್‌ ತಡೆಗೆ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ದೇಗುಲ, ಮಂದಿರ, ಮಸೀದಿಗಳಲ್ಲಿ ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಜಾತ್ರೆ, ಕಲ್ಯಾಣ ಮಂಟಪಗಳಲ್ಲಿ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕಿದೆ. ಹೋಟೆಲ್‌, ಯಾತ್ರಿ ನಿವಾಸ್‌ಗಳಿಗೆ ಸಿಬ್ಬಂದಿಯನ್ನು ನಿಯೋಜಿಸಿ ಪರಿಶೀಲಿಸಬೇಕಿದೆ. ನಿಯಮ ಪಾಲನೆ ಆಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಪ್ರಮುಖ ಸ್ಥಳಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸಿನಿಮಾ ಮಂದಿರಗಳ ಮೇಲೆ ಕಣ್ಗಾವಲು ವ್ಯವಸ್ಥೆ ಇರಬೇಕು. ಸರ್ಕಾರದ ಸೂಚನೆ ಪಾಲಿಸದವರ ವಿರುದ್ಧ ‘ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ’ ಪ್ರಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಜನಸಂಚಾರದ ಮೇಲೆ ನಿಗಾ ಇಡಬೇಕು. ಗ್ರಾಮಗಳ ಪರಿಸ್ಥಿತಿಯ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ವರದಿ ಪಡೆಯಬೇಕು’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ, ‘ಪ್ರತಿ ತಾಲ್ಲೂಕು ಹಂತದಲ್ಲಿ ಕ್ಷಿಪ್ರ ಸಂರಕ್ಷಣಾ ತಂಡವನ್ನು ರಚಿಸಲಾಗಿದೆ. ಇಂತಹ ಯಾವುದೇ ಪ್ರಕರಣ ಗಮನಕ್ಕೆ ಬಂದರೆ ತಂಡ ಸ್ಥಳಕ್ಕೆ ತೆರಳಿ ಸೋಂಕು ಪೀಡಿತ ಶಂಕಿತರನ್ನು ಸಂರಕ್ಷಿಸಲಿದೆ. ತಾಲ್ಲೂಕು ಹಂತದಲ್ಲಿಯೂ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಕಲ್ಪಿಸಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳು ನಿತ್ಯ ವರದಿ ನೀಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಾಲಾಕ್ಷಯ್ಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು