ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ ಕಾರ್ಮಿಕರಾದ ಶಾಲಾ ಮಕ್ಕಳು

ಜಿಲ್ಲಾಧಿಕಾರಿ ಶಾಲೆಗೆ ಕರೆತಂದಿದ್ದ ಬಾಲಕಿ ಚಿಕ್ಕಮಗಳೂರಿಗೆ ವಲಸೆ
Last Updated 13 ಡಿಸೆಂಬರ್ 2018, 14:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಕೋನಾಪುರದಲ್ಲಿ ಹಿಂದಿನ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಶಾಲೆಗೆ ಕರೆತಂದಿದ್ದ 15 ಮಕ್ಕಳು ಈಗ ಬಾಲಕಾರ್ಮಿಕರಾಗಿದ್ದು, ಪೋಷಕರೊಂದಿಗೆ ಚಿಕ್ಕಮಗಳೂರಿಗೆ ವಲಸೆ ಹೋಗಿರುವ ಸಂಗತಿ ಜಿಲ್ಲಾಡಳಿತವನ್ನು ಮುಜುಗರಕ್ಕೀಡು ಮಾಡಿದೆ.

ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಆಂಥೋನಿ ಸಬಾಸ್ಟೀನ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಈ ವಾಸ್ತವ ಬಯಲಾದಾಗ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾರ್ಮಿಕರ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದರು.

ಕೋನಾಪುರದ ಗ್ರಾಮಸ್ಥರು ಕೆಲಸ ಅರಸಿ ವಲಸೆ ಹೋಗುತ್ತಿರುವುದನ್ನು ಅಧಿಕಾರಿಗಳು ನಿರಾಕರಿಸಿದರು. ಪೋಷಕರೊಂದಿಗೆ ವಲಸೆ ಹೋಗಿರುವ ಮಕ್ಕಳು ಪಶ್ಚಿಮ ಘಟ್ಟದ ಕಾಫಿ ತೋಟಗಳಲ್ಲಿ ಕೂಲಿ ಮಾಡುತ್ತಿರುವ ವಿಷಯವನ್ನು ಮಕ್ಕಳ ಹಕ್ಕು ಹೋರಾಟಗಾರರು ಅಂಕಿ–ಅಂಶಗಳ ಸಮೇತ ಬಿಚ್ಚಿಟ್ಟಾಗ ಆಯೋಗದ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು.

‘ಕೋನಾಪುರದಲ್ಲಿ ಜೂನ್‌ 24ರಂದು ಗ್ರಾಮ ವಾಸ್ತವ್ಯ ಮಾಡಿದ್ದ ಅಂದಿನ ಜಿಲ್ಲಾಧಿಕಾರಿ ಜ್ಯೋತ್ಸ್ನಾ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರುವ ಅಭಿಯಾನ ಕೈಗೊಂಡಿದ್ದರು. ಬೇವಿನ ಬೀಜ ಆರಿಸಲು ಆಂಧ್ರಪ್ರದೇಶಕ್ಕೆ ತೆರಳಿದ್ದ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸಿದ್ದರು. ಆದರೆ, ಅವರಲ್ಲಿ 15 ಮಕ್ಕಳು ಈಗ ಶಾಲೆಗೆ ಬರುತ್ತಿಲ್ಲ. ಈ ಸಂಗತಿಯನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಮಕ್ಕಳ ಹಕ್ಕು ಹೋರಾಟಗಾರರೊಬ್ಬರು ಸಭೆಯ ಗಮನ ಸೆಳೆದರು.

ತಂಬೇನಹಳ್ಳಿಯ 12 ಮಕ್ಕಳು ಕೂಡ ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ 8 ಹಳ್ಳಿಯಲ್ಲಿ ನಡೆದ ಸಮೀಕ್ಷೆಯಲ್ಲಿ 95 ಮಕ್ಕಳು ಶಾಲೆ ಬಿಟ್ಟಿರುವ ವಿಷಯವನ್ನು ಮತ್ತೊಬ್ಬರು ಬಿಡಿಸಿಟ್ಟರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಯೋಗದ ಸದಸ್ಯ ರೂಪಾನಾಯ್ಕ್‌, ‘ವಲಸೆ ಹೋಗುವ ಪೋಷಕರ ಮಕ್ಕಳಿಗೆ ಋತುಮಾನ ಶಾಲೆ ತೆರೆಯಲು ಅವಕಾಶವಿದೆ. ಈ ಬಗ್ಗೆ ಏಕೆ ಆಲೋಚನೆ ನಡೆಸಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಬುಡಕಟ್ಟು ಕುಟುಂಬಗಳೇ ಹೆಚ್ಚಾಗಿರುವ ಕೋನಾಪುರ ಗ್ರಾಮದ ಜನರಿಗೆ ಉದ್ಯೋಗವಿಲ್ಲ. ಕೆಲಸ ಅರಸಿ ಆಂಧ್ರಪ್ರದೇಶಕ್ಕೆ ಆಗಾಗ ವಲಸೆ ಹೋಗುವುದು ರೂಢಿ. ಉದ್ಯೋಗ ಖಾತರಿ ಯೋಜನೆಯಡಿ ಅವರಿಗೆ ಕೆಲಸ ನೀಡುವ ಪ್ರಯತ್ನ ಏಕೆ ನಡೆದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಆಯೋಗ ಆಕ್ಷೇಪ ವ್ಯಕ್ತಪಡಿಸಿತು.

‘ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಹಾಜರಿ ಪುಸ್ತಕದಲ್ಲಿ ಗೈರು ಎಂದು ನಮೂದಿಸುತ್ತಿಲ್ಲ. ಬಿಸಿಯೂಟದ ಅನುದಾನಕ್ಕಾಗಿ ಎಲ್ಲ ಮಕ್ಕಳು ಹಾಜರಾಗುತ್ತಿದ್ದಾರೆ ಎಂದು ನಮೂದಿಸಿ ವಂಚಿಸಲಾಗುತ್ತಿದೆ. ಪರಶುರಾಂಪುರ ಶಾಲೆಗೆ ದಿಢೀರ್‌ ಭೇಟಿ ನೀಡಿದಾಗ ಈ ಸತ್ಯ ಬೆಳಕಿಗೆ ಬಂದಿದೆ’ ಎಂದು ಮರಿಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಅಧ್ಯಯನ ಸಮಿತಿ ರಚನೆ

ಮೊಳಕಾಲ್ಮೂರು ತಾಲ್ಲೂಕಿನ ಕೋನಾಪುರದಲ್ಲಿ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳು ಹಾಗೂ ಅವರ ಪೋಷಕರ ಜೀವನ ಶೈಲಿಯ ಅಧ್ಯಯನಕ್ಕೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಮಿತಿಯೊಂದನ್ನು ರಚಿಸಿದೆ. ಗ್ರಾಮಕ್ಕೆ ಭೇಟಿ ನೀಡಿ ಅಧ್ಯಯನ ವರದಿ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿದೆ.

ಬುಡಕಟ್ಟು ಕಲ್ಯಾಣಾಧಿಕಾರಿ, ಮಕ್ಕಳ ರಕ್ಷಣಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಮಿಕ ಇಲಾಖೆಯ ಅಧಿಕಾರಿ ಹಾಗೂ ಸರ್ಕಾರೇತರ ಸಂಸ್ಥೆಯ ಮುಖಂಡರೊಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ತಿಂಗಳಾಂತ್ಯಕ್ಕೆ ಮಕ್ಕಳನ್ನು ಶಾಲೆಗೆ ಕರೆತರುವಂತೆಯೂ ಆಯೋಗ ಸೂಚನೆ ನೀಡಿದೆ.

ಶಾಲೆ ವಿರುದ್ಧ ಕ್ರಮಕ್ಕೆ ಸೂಚನೆ

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಯಮಗಳನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಡಿಡಿಪಿಐ ಆಂಥೋಣಿ ಅವರಿಗೆ ಆಯೋಗ ತಾಕೀತು ಮಾಡಿತು.

‘ಮಕ್ಕಳ ಹಕ್ಕುಗಳ ನೀತಿಗೆ ಪೂರಕವಾದ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ರೂಪಿಸಬೇಕು. ಜಿಲ್ಲೆಯ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವಿಲ್ಲ. ಕಾಂಪೌಂಡ್, ಶೌಚಾಲಯ, ಕೊಠಡಿ ಸೌಲಭ್ಯಗಳು ಇಲ್ಲ. ಇಂತಹ ಶಾಲೆಗಳ ವಿರುದ್ಧ ಯಾವ ಕ್ರಮ ಜರುಗಿಸಿದ್ದೀರಿ’ ಎಂದು ಆಯೋಗದ ಸದಸ್ಯ ರೂಪಾನಾಯ್ಕ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT