ಲೋಕಸಭಾ ಚುನಾವಣೆಗೆ 19 ಅಭ್ಯರ್ಥಿಗಳು ಸ್ಪರ್ಧೆ: ಇವಿಎಂ ಒಂದು, ಬ್ಯಾಲೆಟ್‌ ಎರಡು

ಗುರುವಾರ , ಏಪ್ರಿಲ್ 25, 2019
31 °C

ಲೋಕಸಭಾ ಚುನಾವಣೆಗೆ 19 ಅಭ್ಯರ್ಥಿಗಳು ಸ್ಪರ್ಧೆ: ಇವಿಎಂ ಒಂದು, ಬ್ಯಾಲೆಟ್‌ ಎರಡು

Published:
Updated:
Prajavani

ಚಿತ್ರದುರ್ಗ: ಮೀಸಲು ಕ್ಷೇತ್ರದ ಲೋಕಸಭಾ ಚುನಾವಣೆಯ ಕಣದಲ್ಲಿ 19 ಅಭ್ಯರ್ಥಿಗಳು ಉಳಿದಿದ್ದರಿಂದ ಪ್ರತಿ ಮತಗಟ್ಟೆಯ ವಿದ್ಯುನ್ಮಾನ ಮತಯಂತ್ರಕ್ಕೆ (ಇವಿಎಂ) ಎರಡು ಬ್ಯಾಲೆಟ್‌ಗಳನ್ನು ಅಳವಡಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಒಂದು ಬ್ಯಾಲೆಟ್‌ನಲ್ಲಿ 16 ಅಭ್ಯರ್ಥಿಗಳಿಗೆ ಅವಕಾಶವಿದೆ. ಹೆಚ್ಚುವರಿ ಅಭ್ಯರ್ಥಿಗಳು ಇರುವುದರಿಂದ ಮತ್ತೊಂದು ಬ್ಯಾಲೆಟ್‌ ಅಳವಡಿಸುವುದು ಅನಿವಾರ್ಯವಾಗಿದೆ. ಬ್ಯಾಲೆಟ್‌ ಹೊಂದಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 1,648 ಮತಗಟ್ಟೆಗಳಿವೆ. ಶೇ 20ರಷ್ಟು ಯಂತ್ರಗಳು ಮಾತ್ರ ದಾಸ್ತಾನು ಇವೆ. ಅಗತ್ಯ ಯಂತ್ರಗಳನ್ನು ಶಿವಮೊಗ್ಗ, ಕಲಬುರ್ಗಿ ಹಾಗೂ ಬಾಗಲಕೋಟೆಯಿಂದ ತರಲು ಆಯೋಗ ಅನುಮತಿ ನೀಡಿದೆ. ಸಿಬ್ಬಂದಿ ಈಗಾಗಲೇ ಆ ಜಿಲ್ಲೆಗಳಿಗೆ ತೆರಳಿದ್ದಾರೆ’ ಎಂದು ವಿವರಿಸಿದರು.

‘ಚುನಾವಣಾ ಕರ್ತವ್ಯಕ್ಕೆ ಸುಮಾರು 8,400 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾರ್ಚ್‌ 31ರಂದು ಮೊದಲ ಹಂತದ ತರಬೇತಿ ನೀಡಲಾಗಿದೆ. ಎರಡನೇ ಹಂತದ ತರಬೇತಿಯನ್ನು ಏ.9 ರಂದು ಹಮ್ಮಿಕೊಳ್ಳಲಾಗಿದೆ. ಇವಿಎಂ ಕ್ರಮಬದ್ಧವಾಗಿ ಇಡುವ ಬಗ್ಗೆ ಹೇಳಿಕೊಡಲಾಗುತ್ತದೆ. ಜಾಗೃತಿ ಮೂಡಿಸಲು ವಿಡಿಯೊ ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು.

12 ಸಖಿ ಮತಗಟ್ಟೆ: ‘ಮಹಿಳಾ ಮತದಾರರ ಜಾಗೃತಿಗಾಗಿ ಜಿಲ್ಲೆಯಲ್ಲಿ 12 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಈ ಮತಗಟ್ಟೆಗಳಿಗೆ ಆಕರ್ಷಕ ರೂಪ ನೀಡಲಾಗುವುದು. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.

‘ಬ್ಯಾಲೆಟ್‌ ಪೇಪರ್‌ನಲ್ಲಿ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಲು ಆಯೋಗ ನಿಯಮಾವಳಿ ರೂಪಿಸಿದೆ. ಕನ್ನಡ ವರ್ಣಮಾಲೆಯ ಪ್ರಕಾರ ಹೆಸರುಗಳಿಗೆ ಆದ್ಯತೆ ದೊರೆಯಲಿದೆ. ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷ, ನೋಂದಣಿಯಾಗದ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಕ್ರಮಬದ್ಧವಾಗಿ ಸ್ಥಾನ ನೀಡಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

₹ 1.21 ಕೋಟಿ ವಶ: ‘ನೀತಿ ಸಂಹಿತೆ ಜಾರಿಯಾದ ಬಳಿಕ ಅಕ್ರಮವಾಗಿ ಹಣ, ಮದ್ಯ, ಮಾದಕವಸ್ತು ಸಾಗಣೆಯ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ 40 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಒಟ್ಟು ₹ 1.21 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹೊಸದುರ್ಗದ ಅಹಮ್ಮದ್ ನಗರದ ಬಳಿ ₹ 50 ಲಕ್ಷ, ಚಿತ್ರದುರ್ಗದ ಕೆಳಗಳಹಟ್ಟಿಯಲ್ಲಿ ₹ 70 ಲಕ್ಷ ಹಾಗೂ ಬೊಗಳೇರಹಟ್ಟಿ ಸಮೀಪ ₹ 1 ಲಕ್ಷ ದಾಖಲೆ ಇಲ್ಲದ ಹಣ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ತನಿಖೆ ಪ್ರಗತಿಯಲ್ಲಿದೆ. ₹ 59 ಲಕ್ಷ ಮೌಲ್ಯದ 1,01,43 ಲೀಟರ್‌ ಮದ್ಯ, ₹ 1 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !