ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ದೌಡಾಯಿಸಿದರೆ ಹಾಸಿಗೆ ಕೊರತೆ

ಮನೆಯಲ್ಲೇ ಚಿಕಿತ್ಸೆ ಸೂಕ್ತ, ಹಾಸಿಗೆ ಆಕ್ರಮಿಸಿಕೊಳ್ಳದಂತೆ ಜಿಲ್ಲಾಧಿಕಾರಿ ಸಲಹೆ
Last Updated 28 ಏಪ್ರಿಲ್ 2021, 13:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ರೋಗಲಕ್ಷಣಗಳು ಕಡಿಮೆ ಇರುವವರು ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಸೂಕ್ತ. ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದೌಡಾಯಿಸಿದರೆ ಹಾಸಿಗೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಕಳವಳ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಂಕು ಪತ್ತೆಯಾದಾಗ ಹಾಗೂ ಕಡಿಮೆ ರೋಗ ಲಕ್ಷಣ ಇರುವಾಗ ಗಾಬರಿ ಆಗುವ ಅಗತ್ಯವಿಲ್ಲ. ಗಾಬರಿ ಉಂಟಾದರೆ ಉಸಿರಾಟದ ತೊಂದರೆ ಹೆಚ್ಚಾಗಬಹುದು. ಸರಿಯಾದ ಚಿಕಿತ್ಸೆಯನ್ನು ಮನೆಯಲ್ಲೇ ಪಡೆದು ಗುಣಮುಖರಾಗಲು ಪ್ರಯತ್ನಿಸಿ’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕು ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸೋಂಕು ಅಂಟದಂತೆ ಎಚ್ಚರಿಕೆ ವಹಿಸಿ. ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಅನಗತ್ಯ ಸಂಚಾರ ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಅಗತ್ಯ ವಸ್ತು ಖರೀದಿಗೆ ನಿತ್ಯ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆ, ಹಾಲಿನ ಬೂತ್‌, ಸೆಲೂನ್‌ ಶಾಪ್‌ ಈ ಅವಧಿಯಲ್ಲಿ ತೆರೆದಿರುತ್ತವೆ. ಕೃಷಿ ಪರಿಕರ, ಬೀಜ ಹಾಗೂ ರಸಗೊಬ್ಬರದ ಅಂಗಡಿಗಳು ಇದೇ ಅವಧಿಯಲ್ಲಿ ಸೇವೆ ಒದಗಿಸಬಹುದು’ ಎಂದು ಹೇಳಿದರು.

ವಿಚಕ್ಷಣಾ ದಳ ರಚನೆ:ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾ ಇಡಲು ವಿಚಕ್ಷಣಾ ದಳ ರಚಿಸಲಾಗುತ್ತಿದೆ. ಲಾಕ್‌ಡೌನ್‌ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧವೂ ವಿಚಕ್ಷಣಾ ದಳ ಕ್ರಮಕೈಗೊಳ್ಳಲಿದೆ. ದಿನಸಿ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆಯೂ ನಿಗಾ ಇರಲಿದೆ’ ಎಂದು ವಿವರಿಸಿದರು.

‘ನಿಗದಿತ ಅವಧಿ ಮುಗಿದ ಬಳಿಕವೂ ದಿನಸಿ ಅಂಗಡಿ ತೆರೆಯುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಆದರೆ, ಗ್ರಾಹಕರ ಮನೆಗಳಿಗೆ ತೆರಳಿ ಸೇವೆ ಒದಗಿಸಲು ಯಾವುದೇ ವಿರೋಧವಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೇವೆ ಲಭ್ಯ ಇರುತ್ತದೆ. ಬಟ್ಟೆ, ಚಿನ್ನಾಭರಣ ಅಂಗಡಿಯಲ್ಲಿ ನಿಯಮ ಬಾಹಿರವಾಗಿ ವಹಿವಾಟು ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸ್ವಯಂ ಕ್ವಾರಂಟೈನ್‌ಗೆ ಸೂಚನೆ:ಬೆಂಗಳೂರಿನಿಂದ ಗ್ರಾಮಗಳಿಗೆ ಮರಳಿದವರು ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸೂಚನೆ ನೀಡಿದರು.

14 ದಿನಗಳ ಲಾಕ್‌ಡೌನ್‌ ಕಾರಣಕ್ಕೆ ಬಹುತೇಕರು ಗ್ರಾಮೀಣ ಪ್ರದೇಶಗಳಿಗೆ ಮರಳಿದ್ದಾರೆ. ಇವರಿಂದ ಸೋಂಕು ಹರಡುವ ಆತಂಕ ಮೂಡಿದೆ. ರೋಗ ಲಕ್ಷಣ ಕಾಣಿಸಿಕೊಂಡವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಲಸೆ ಬಂದವರ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಹಿತಿ ಕಲೆಹಾಕಲಿದ್ದಾರೆ ಎಂದು ಹೇಳಿದರು.

ಡಾ.ಸಿ.ಎಲ್‌.ಫಾಲಾಕ್ಷ, ‘ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ವಲಸೆ ಬಂದವರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಸಾಧ್ಯವಿದೆ. ಕಳೆದ ವರ್ಷದಂತೆ ಈ ಬಾರಿಯೂ ಗ್ರಾಮಗಳಿಗೆ ಮರಳಿದವರ ವಿವರಗಳನ್ನು ಸಂಗ್ರಹಿಸಲಾಗುವುದು’ ಎಂದು ಹೇಳಿದರು.

50 ಸಾವಿರ ಲಸಿಕೆಗೆ ಪ್ರಸ್ತಾವ:ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಮಾತನಾಡಿ, ‘ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕಾಗಿದೆ. ಸುಮಾರು 50 ಸಾವಿರ ಲಸಿಕೆ ಅಗತ್ಯವಿದ್ದು, ಪ್ರಸ್ತಾವ ಸಲ್ಲಿಸಲಾಗಿದೆ. ಈವರೆಗೆ ಲಸಿಕೆಗೆ ಕೊರತೆ ಉಂಟಾಗಿಲ್ಲ. ಮಂಗಳವಾರ ನಾಲ್ಕು ಸಾವಿರ ಲಸಿಕೆ ಬಂದಿದ್ದು, ಜಿಲ್ಲೆಯ 191 ಕೇಂದ್ರಗಳಿಗೆ ರವಾನಿಸಲಾಗಿದೆ’ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್‌, ‘ಜಿಲ್ಲಾ ಆಸ್ಪತ್ರೆ ಮತ್ತು ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಸಿ.ಟಿ.ಸ್ಕ್ಯಾನ್‌ ಸೇವೆ ಲಭ್ಯ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ 50 ಸಿ.ಟಿ. ಸ್ಕ್ಯಾನ್‌ ಮಾಡಲಾಗುತ್ತಿದೆ. ಬೆಂಗಳೂರಿನ ಕಂಪನಿ ಸೇವೆ ಒದಗಿಸುತ್ತಿರುವ ಕಾರಣಕ್ಕೆ ಪ್ರತಿಯೊಂದು ಸ್ಕ್ಯಾನ್‌ಗೆ ₹ 500 ನಿಗದಿ ಮಾಡಲಾಗುತ್ತಿದೆ. ಈ ಶುಲ್ಕವನ್ನು ರೋಗಿಯಿಂದ ವಸೂಲಿ ಮಾಡುವ ಬದಲು ಕೋವಿಡ್‌ ನಿಧಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದರು.

ಐದು ಕಡೆ ಚೆಕ್‌ಪೋಸ್ಟ್‌

ವಾಹನ ಸಂಚಾರದ ಮೇಲೆ ನಿಗಾ ಇಡಲು ಜಿಲ್ಲೆಯ ಐದು ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದರು.

ಮೊಳಕಾಲ್ಮರು ತಾಲ್ಲೂಕಿನ ಎದ್ದಲಬೊಮ್ಮಯ್ಯನಹಟ್ಟಿ ಹಾಗೂ ತಮ್ಮೇನಹಳ್ಳಿ, ಹಿರಿಯೂರು ತಾಲ್ಲೂಕಿನ ಜೆ.ಜಿ. ಹಳ್ಳಿ, ಹೊಸದುರ್ಗ ತಾಲ್ಲೂಕಿನ ತರೀಕೆರೆ ರಸ್ತೆ ಹಾಗೂ ಬೆಲಗೂರಿನಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಇನ್ನಷ್ಟು ಚೆಕ್‌ಪೋಸ್ಟ್‌ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಇದರೊಂದಿಗೆ ಪೊಲೀಸ್‌ ವಾಹನಗಳು ಜಿಲ್ಲೆಯಲ್ಲಿ ಸಂಚರಿಸಿ ನಿಗಾ ಇಡಲಿವೆ ಎಂದು ವಿವರಿಸಿದರು.

‘ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ನಡುವಿನ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ, ಅನಗತ್ಯ ಸಂಚಾರವನ್ನು ನಿರ್ಬಂಧಿಸುವ ಉದ್ದೇಶದಿಂದ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಪ್ರಯಾಣಿಕ ವಾಹನಗಳನ್ನು ಮಾತ್ರ ತಪಾಸಣೆ ಮಾಡಲಾಗುವುದು’ ಎಂದು ಹೇಳಿದರು.

ಕಣ್ಣು ಕೆಂಪಾದರೂ ಕಷ್ಟ

ಕೆಮ್ಮು, ಶೀಥ, ನೆಗಡಿ, ಗಂಟಲು ಕೆರೆತ ಹಾಗೂ ಜ್ವರವನ್ನು ಕೋವಿಡ್ ಲಕ್ಷಣಗಳೆಂದು ಗುರುತಿಸಲಾಗುತ್ತಿತ್ತು. ಆದರೆ, ಎರಡನೇ ಅಲೆಯಲ್ಲಿ ಭಿನ್ನವಾದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಡಾ.ಸಿ.ಎಲ್‌.ಫಾಲಾಕ್ಷ ವಿವರಿಸಿದರು.

‘ಕಣ್ಣು ಕೆಂಪಾಗುವುದು ಕೂಡ ಕೋವಿಡ್‌ ಲಕ್ಷಣ. ಇಂತಹ ವ್ಯಕ್ತಿಗಳನ್ನು ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿದೆ. ಸುಸ್ತು, ಭೇದಿಯಂತಹ ಭಿನ್ನ ಲಕ್ಷಣಗಳು ಕಾಣಿಸಿಕೊಂಡಿವೆ. ಇಂತಹ ಸಮಸ್ಯೆ ಇದ್ದರೆ ಕೂಡಲೇ ಪರೀಕ್ಷಿಸಿಕೊಳ್ಳಿ. ಅಪಾಯದಿಂದ ಪಾರಾಗಿ’ ಎಂದು ಅವರು ಮನವಿ ಮಾಡಿದರು.

ಸಹಾಯವಾಣಿ ಆರಂಭ

ಕೋವಿಡ್‌ ನಿರ್ವಹಣೆಗಾಗಿ ವಾರ್‌ರೂಂ ಸ್ಥಾಪಿಸಿರುವ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಹಾಸಿಗೆ, ಆಕ್ಸಿಜನ್‌, ರೆಮ್‌ಡಿಸಿವಿರ್‌ ಚುಚ್ಚುಮದ್ದು ಹಾಗೂ ಲಸಿಕೆ ಸೇರಿ ಇತರ ಮಾಹಿತಿಗೆ ಸಾರ್ವಜನಿಕರು ಸಹಾಯವಾಣಿ ಸಂಪರ್ಕಿಸಬಹುದು. ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆ– 7760022142, 7760057142.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT