ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿಬಿ) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಬೆಂಬಲಿಗರೇ ಆಯ್ಕೆಯಾಗಿದ್ದಾರೆ. ಈಗಾಗಲೇ ನಾಲ್ಕು ಬಾರಿ ಅಧ್ಯಕ್ಷರಾಗಿರುವ ಸುಧಾಕರ್ ಮತ್ತೊಮ್ಮೆ ಬ್ಯಾಂಕ್ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.
12 ಸ್ಥಾನಗಳಿಗೆ ಚುನಾವಣೆ ನಿಗದಿಯಾದ ನಂತರ ಸಚಿವ ಸುಧಾಕರ್ ಸೇರಿ 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 5 ಸ್ಥಾನಗಳಿಗೆ ಗುರುವಾರ ನಡೆದ ಮತದಾನದಲ್ಲಿ ಸಚಿವರ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಸಚಿವರು 5ನೇ ಬಾರಿಗೆ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿವೆ.
ಅವಿರೋಧ ಆಯ್ಕೆ: ಎ ಕ್ಷೇತ್ರದಿಂದ ಚಳ್ಳಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಸಚಿವ ಸುಧಾಕರ್, ಹೊಳಲ್ಕೆರೆ ಸಂಘದಿಂದ ಎಸ್.ಆರ್.ಗಿರೀಶ್, ಹಿರಿಯೂರು ಸಂಘದಿಂದ ಒ.ಮಂಜುನಾಥ್, ಬಿ ಕ್ಷೇತ್ರ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಎಚ್.ಬಿ.ಮಂಜುನಾಥ್, ಇ ಕ್ಷೇತ್ರ, ನೇಕಾರಿಕೆ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಕೆ.ಜಗಣ್ಣ, ಸಿ ಕ್ಷೇತ್ರ, ಪಟ್ಟಣ ಸಹಕಾರ ಬ್ಯಾಂಕ್ ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ರಘುರಾಮ ರೆಡ್ಡಿ, ಡಿ ಕ್ಷೇತ್ರ, ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ಸ್ಪರ್ಧಿಸಿದ್ದ ಪಿ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣೆ ಮೂಲಕ ಆಯ್ಕೆ: 5 ಸ್ಥಾನಗಳಿಗೆ ಗುರುವಾರ ನಡೆದ ಮತದಾನದಲ್ಲಿ ಎ ಕ್ಷೇತ್ರ, ಚಿತ್ರದುರ್ಗ ಪ್ರಾಥಮಿಕ ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಎಚ್.ಎಂ.ದ್ಯಾಮಣ್ಣ 10 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಟಿ.ಪಿ.ಅನೂಪ್ 4 ಮತ ಪಡೆದಿದ್ದರೆ, ಬಿ.ಮಂಜುನಾಥ್ ಯಾವುದೇ ಮತ ಪಡೆಯದೇ ಠೇವಣಿ ಕಳೆದುಕೊಂಡರು.
ಹೊಸದುರ್ಗ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ಕೆ.ಅನಂತ್ 10 ಮತ ಪಡೆದು ಗೆದ್ದರು. ಪ್ರತಿಸ್ಪರ್ಧಿ ಎಚ್.ಬಸವರಾಜ್ 6 ಮತ ಪಡೆಯಲಷ್ಟೇ ಯಶಸ್ವಿಯಾದರು. ಮೊಳಕಾಲ್ಮೂರು ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಎಚ್.ಟಿ.ನಾಗರೆಡ್ಡಿ 6 ಮತ ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಬಿ.ಬಸವರಾಜ್ 5 ಮತ ಪಡೆದು ಸೋಲೊಪ್ಪಿದರು.
ಡಿ ಕ್ಷೇತ್ರ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು ತಾಲ್ಲೂಕುಗಳ ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ಸ್ಪರ್ಧಿಸಿದ್ದ ಪಿ.ವಿನೋದಸ್ವಾಮಿ 3 ಮತ ಪಡೆದು ಗೆದ್ದರು, ಪ್ರತಿಸ್ಪರ್ಧಿ ಎಂ.ಭಾರತಿ 2 ಮತ ಪಡೆದು ಸೋತರು. ಎಫ್ ಕ್ಷೇತ್ರ, ಇನ್ನಿತರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ಎಂ.ನಿಶಾನಿ ಜಯಣ್ಣ 8 ಮತ ಪಡೆದು ಗೆಲವು ಸಾಧಿಸಿದರು. ಪ್ರತಿಸ್ಪರ್ಧಿ ಬಿ.ಸಿ.ಸಂಜೀವಮೂರ್ತಿ 2 ಮತ ಪಡೆದು ಸೋಲೊಪ್ಪಿಕೊಂಡರು.
ಡಿಸಿಸಿ ಬ್ಯಾಂಕ್ ಆವರಣದಲ್ಲಿ 5 ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಸಂಜೆಯ ವೇಳೆಗೆ ಫಲಿತಾಂಶ ಘೋಷಣೆಯಾಯಿತು. ಗೆಲುವು ಸಾಧಿಸಿದವರು, ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಸಚಿವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು. ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ‘ನೂತನ ನಿರ್ದೇಶಕರ ಅವಧಿ 5 ವರ್ಷಗಳವರೆಗೆ ಇರಲಿದ್ದು, ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದಿದೆ’ ಎಂದು ಚುನಾವಣಾಧಿಕಾರಿ ತಿಳಿಸಿದರು.
ನಿಯಮಾನುಸಾರ ಚುನಾವಣೆ: ಸಚಿವ
ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್ ‘ಆಡಳಿತ ಮಂಡಳಿಗೆ ಆಯ್ಕೆಯಾದ ಎಲ್ಲಾ ನಿರ್ದೇಶಕರೆಲ್ಲರೂ ನಮ್ಮವರೇ ಆಗಿದ್ದಾರೆ. ನಮ್ಮ ಆಯ್ಕೆಗೆ ಸಹಕರಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು. ‘ನಿಯಮಾನುಸಾರ ಚುನಾವಣೆ ಪ್ರಕ್ರಿಯೆ ನಡೆದಿದೆ. ಆರೂವರೆ ತಿಂಗಳ ಹಿಂದೆಯೇ ಅರ್ಹ ಅನರ್ಹ ಸಹಕಾರ ಸಂಘಗಳ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ವಹಿವಾಟು ನಡೆಸದ ಸಾಮಾನ್ಯ ಸಭೆಯಲ್ಲಿ ಭಾಗಿಯಾಗದ 200 ಸಂಘಗಳನ್ನು ಅನರ್ಹಗೊಳಿಸಲಾಗಿದೆ. ಅನರ್ಹ ಸಂಘಗಳ ಪಟ್ಟಿಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘವೂ ಸೇರಿದೆ. ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.