ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಡಿಸಿಸಿ ಬ್ಯಾಂಕ್‌; ಹೈಕೋರ್ಟ್‌ ತೀರ್ಪಿನತ್ತ ಚಿತ್ತ

ಸಚಿವ ಸುಧಾಕರ್‌ ಸೇರಿ 6 ಮಂದಿ ಅವಿರೋಧ ಆಯ್ಕೆ, ಷರತ್ತಿಗೆ ಒಳಪಟ್ಟು ರಘುಮೂರ್ತಿ ನಾಮಪತ್ರ ತಿರಸ್ಕೃತ
Published : 6 ಸೆಪ್ಟೆಂಬರ್ 2024, 15:30 IST
Last Updated : 6 ಸೆಪ್ಟೆಂಬರ್ 2024, 15:30 IST
ಫಾಲೋ ಮಾಡಿ
Comments

ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿಬಿ) ನಿರ್ದೇಶಕ ಸ್ಥಾನಗಳಿಗೆ ಸೆ.12ರಂದು ನಡೆಯಲಿರುವ ಚುನಾವಣೆ ಕುತೂಹಲ ಕೆರಳಿಸಿದೆ.

ಅನರ್ಹಗೊಂಡಿರುವ ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾನದ ಹಕ್ಕಿಗಾಗಿ ಹೈಕೋರ್ಟ್‌ ಬಾಗಿಲು ತಟ್ಟಿದ್ದು, ಸೆ.9ರಂದು ತೀರ್ಪು ಹೊರಬೀಳಲಿದೆ. ಹೀಗಾಗಿ ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.

ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಶುಕ್ರವಾರ ಮುಗಿದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿ 6 ಜನರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರತಿನಿಧಿಸುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಆದರೆ, ಸೆ.9ರಂದು ಬರಲಿರುವ ಹೈಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟು ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಕಾರ್ತಿಕ್‌ ಹೇಳಿದ್ದಾರೆ.

‘ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮ ಪಾಲನೆಯಲ್ಲಿ ಆಗಿರುವ ವ್ಯತ್ಯಯಗಳ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಹಿಂದೆಯೇ ಪತ್ರ ಬರೆಯಲಾಗಿದ್ದು ಪತ್ರವನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಹೀಗಾಗಿ ರಘುಮೂರ್ತಿ ಅವರು ಮತದಾನಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆದರೆ, ಡಿಸಿಸಿ ಬ್ಯಾಂಕ್‌ ಅಧಿಕಾರಿಗಳು ಕೇವಿಯಟ್‌ ಹಾಕಿರುವುದು ಅವೈಜ್ಞಾನಿಕ ಎಂಬುದನ್ನೂ ಕೋರ್ಟ್‌ ಗಮನಕ್ಕೆ ತರಲಾಗಿದೆ’ ಎಂದು ವಕೀಲರೊಬ್ಬರು ತಿಳಿಸಿದರು.

ನಾಲ್ವರ ನಾಮಪತ್ರ ತಿರಸ್ಕೃತ: ಟಿ.ರಘುಮೂರ್ತಿ ಸೇರಿ ಚಿತ್ರದುರ್ಗ ತಾಲ್ಲೂಕು ಫ್ಯಾಕ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಪಿ.ಮಂಜುನಾಥ್, ಅರುಣ್‌ಕುಮಾರ್ ಹಾಗೂ ಹಾಲು ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಎಸ್.ಶಶಿಧರ್ ಅವರ ನಾಮಪತ್ರಗಳೂ ತಿರಸ್ಕೃತವಾಗಿವೆ. ನಾಲ್ವರ ನಾಮಪತ್ರಗಳ ತಿರಸ್ಕಾರದ ಕ್ರಮ ಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟಿರುತ್ತದೆ. ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ರಾಮರೆಡ್ಡಿ ಅವರ ನಾಮಪತ್ರ ತಿರಸ್ಕೃತವಾಗಿದೆ. ಆದರೆ, ರಾಮರೆಡ್ಡಿ ಅವರು ಅನರ್ಹ ಮತಪಟ್ಟಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿಲ್ಲ. ಹೀಗಾಗಿ ಷರತ್ತು ಇವರಿಗೆ ಅನ್ವಯವಾಗುವುದಿಲ್ಲ ಎಂದು ಚುನಾವಣಾಧಿರಿ ತಿಳಿಸಿದ್ದಾರೆ.

ಅವಿರೋಧ ಆಯ್ಕೆ: ಸಚಿವ ಸುಧಾಕರ್ ಸೇರಿ ಹೊಳಲ್ಕೆರೆಯಿಂದ ಎಸ್.ಆರ್.ಗಿರೀಶ್, ಹಿರಿಯೂರಿನಿಂದ ಮಂಜುನಾಥ್, ಟಿಎಪಿ ಸಿಎಂಎಸ್‌ನಿಂದ ಎಚ್.ಬಿ.ಮಂಜುನಾಥ್, ನೇಕಾರಿಕೆ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಜಗಣ್ಣ, ಪಟ್ಟಣ ಸಹಕಾರ ಬ್ಯಾಂಕ್ ಕ್ಷೇತ್ರದಿಂದ ರಘುರಾಮರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆರು ನಿರ್ದೇಶಕರ ಅವಿರೋಧ ಆಯ್ಕೆಯಾಗಿದ್ದು ಮತ್ತೊಬ್ಬರ ಫಲಿತಾಂಶ ತಡೆ ಹಿಡಿಯಲಾಗಿದೆ. ಕೋರ್ಟ್ ತೀರ್ಪು ಆಧರಿಸಿ ಇನ್ನುಳಿದ ಸ್ಥಾನಗಳಿಗೆ 12ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಂದು ಸಂಜೆಯೇ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

22 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಸಚಿವ ಸುಧಾಕರ್‌ ಅವರು ಮತ್ತೆ ಗದ್ದುಗೆ ಪಡೆಯಲು ಎಲ್ಲಾ ರೀತಿಯ ಕಸರತ್ತು ಮುಂದುವರಿಸಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಬದಿಗೊತ್ತಿ ಡಿಸಿಸಿ ಬ್ಯಾಂಕ್‌ ಅಂಗಳದಲ್ಲೇ ಬೀಡು ಬಿಟ್ಟಿದ್ದಾರೆ. ಗೆಲುವಿಗಾಗಿ ಕಾರ್ಯಸೂಚಿ ರೂಪಿಸುತ್ತಿದ್ದಾರೆ. ಹೀಗಾಗಿ ಡಿಸಿಸಿ ಬ್ಯಾಂಕ್‌ ಅಂಗಳ ಕುತೂಹಲದ ತಾಣವಾಗಿದೆ. ಸೆ.9ರಂದು ಹೊರಬೀಳಲಿರುವ ತೀರ್ಪಿನಿಂದ ಬಹುತೇಕ ಫಲಿತಾಂಶವೂ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಡಿಸಿಸಿ ಬ್ಯಾಂಕ್‌ನಲ್ಲೇ ಬೀಡುಬಿಟ್ಟ ಸಚಿವ ಸುಧಾಕರ್‌ 6 ಮಂದಿ ನಿರ್ದೇಶಕ ಅವಿರೋಧ ಆಯ್ಕೆ ಐವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT