ಹೋಟೆಲ್ ಉದ್ಯಮದ ಲಾಭಾಂಶ ಕುಸಿತ

7
ಜಿಎಸ್‌ಟಿ ಪಾವತಿಗೆ ಗ್ರಾಹಕರ ತಕರಾರು

ಹೋಟೆಲ್ ಉದ್ಯಮದ ಲಾಭಾಂಶ ಕುಸಿತ

Published:
Updated:
Deccan Herald

ಚಿತ್ರದುರ್ಗ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಉಂಟಾದ ಆರ್ಥಿಕ ಹೊರೆಯನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸದ ಹೋಟೆಲ್‌ ಮಾಲೀಕರು ಉದ್ಯಮವನ್ನು ಉಳಿಸಿಕೊಳ್ಳಲು ಲಾಭಾಂಶ ಬಿಟ್ಟುಕೊಟ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಜಿಲ್ಲೆಯ ಹೋಟೆಲ್‌ ಉದ್ಯಮವನ್ನು ಜಿಎಸ್‌ಟಿ ನಲುಗುವಂತೆ ಮಾಡಿದೆಯಾದರೂ ದಿನಕಳೆದಂತೆ ಚೇತರಿಕೆ ಕಾಣುತ್ತಿದೆ. ವರ್ಷದ ಹಿಂದಿನ ಲಾಭಾಂಶಕ್ಕೆ ಮರಳಲು ಹವಣಿಸುತ್ತಿರುವ ಹೋಟೆಲ್‌ ಮಾಲೀಕರು ತೆರಿಗೆಯ ಭಾರವನ್ನು ನಿಧಾನವಾಗಿ ಗ್ರಾಹಕರಿಗೆ ವರ್ಗಾಯಿಸುವ ಆಲೋಚನೆಯಲ್ಲಿದ್ದಾರೆ.

ಚಿತ್ರದುರ್ಗ ನಗರದಲ್ಲಿ 70ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಲಾಡ್ಜ್‌ ಮತ್ತು ರೆಸ್ಟೊರೆಂಟ್‌ ವ್ಯವಸ್ಥೆ ಹೊಂದಿರುವ ಹೋಟೆಲ್‌ಗಳು 12 ಮಾತ್ರ. ಹೋಟೆಲ್‌ ತಿನಿಸುಗಳ ಮೇಲೆ ವಿಧಿಸಿದ್ದ ಸರಕು ಮತ್ತು ಸೇವಾ  ತೆರಿಗೆಯನ್ನು ಶೇ 5ಕ್ಕೆ ಇಳಿಸಲಾಗಿದೆ. ಈ ಹಿಂದೆ ಹೋಟೆಲ್‌ಗಳ ಮೇಲೆ ಶೇ 4ರಷ್ಟು ವ್ಯಾಟ್‌ ತೆರಿಗೆ ಇದ್ದರಿಂದ ಇದು ಹೆಚ್ಚು ಹೊರೆ ಎನಿಸಿಲ್ಲ. ಆದರೂ, ಜಿಎಸ್‌ಟಿ ನೆಪದಲ್ಲಿ ಕೆಲ ಪ್ರತಿಷ್ಠಿತ ಹೋಟೆಲ್‌ಗಳು ತಿನಿಸುಗಳ ಬೆಲೆಯನ್ನು ಹೆಚ್ಚಿಸಿ ಗ್ರಾಹಕರ ಮನವೊಲಿಸುವಲ್ಲಿ ಯಶಸ್ವಿಯಾಗಿವೆ.

ಲಾಡ್ಜ್‌ ಮತ್ತು ರೆಸ್ಟೊರೆಂಟ್‌ ವ್ಯವಸ್ಥೆ ಹೊಂದಿದ ಹೋಟೆಲ್‌ಗಳಿಗೆ ಭಿನ್ನ ರೀತಿಯ ತೆರಿಗೆ ಇದೆ. ಕೊಠಡಿ ದರ ₹ 2,500 ಇರುವ ಹೋಟೆಲ್‌ಗಳಿಗೆ ಶೇ 12ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ದರ ಹೊಂದಿದ ಹೋಟೆಲ್‌ಗಳಿಗೆ ಶೇ 18ರಷ್ಟು ತೆರಿಗೆ ಇದೆ. ನಗರದ ಬಹುತೇಕ ಲಾಡ್ಜ್‌ಗಳ ಕೊಠಡಿ ದರ ₹ 2,500ಕ್ಕಿಂತ ಕಡಿಮೆ ಇರುವುದರಿಂದ ಎಲ್ಲೆಡೆ ತೆರಿಗೆ ದರ ಏಕರೂಪದಲ್ಲಿದೆ.

‘ಲಾಡ್ಜ್‌ಗಳಿಗೆ ಬರುವ ಗ್ರಾಹಕರಲ್ಲಿ ಪ್ರವಾಸಿಗರೇ ಹೆಚ್ಚು. ಇವರಿಗೆ ಜಿಎಸ್‌ಟಿ ಬಗ್ಗೆ ತಿಳುವಳಿಕೆ ಇದೆ. ಕೊಠಡಿಯ ದರದೊಂದಿಗೆ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸಲು ಯಾರೊಬ್ಬರೂ ತಕರಾರರು ತೆಗೆದಿಲ್ಲ. ಆದರೆ, ಹೋಟೆಲ್‌ ತಿನಿಸುಗಳ ಮೇಲೆ ತೆರಿಗೆ ಪ್ರಮಾಣವನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಗ್ರಾಹಕರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಆತಂಕವಿದೆ’ ಎನ್ನುತ್ತಾರೆ ಐಶ್ವರ್ಯ ಫೋರ್ಟ್‌ ಮಾಲೀಕ ಅರುಣ್‌ ಕುಮಾರ್‌.

ಜಿಎಸ್‌ಟಿ ಜಾರಿಯಾದ ಆರಂಭದಲ್ಲಿ ರಾಜ್ಯದ ಇತರೆಡೆಗಳಲ್ಲಿ ಬಿಲ್‌ನೊಂದಿಗೆ ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 4ರ ಆಸುಪಾಸಿನಲ್ಲಿರುವ ಹೋಟೆಲ್‌ ಹೊರತುಪಡಿಸಿ ಜಿಲ್ಲೆಯ ಉಳಿದೆಡೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಹೋಟೆಲ್‌ ಮಾಲೀಕರಿಗೆ ಸಾಧ್ಯವಾಗಿಲ್ಲ. ಗ್ರಾಹಕರಿಂದ ತೀವ್ರ ಸ್ವರೂಪದ ಪ್ರತಿರೋಧ ಎದುರಾಗುವುದನ್ನು ನಿರೀಕ್ಷಿಸಿದ ಬಹುತೇಕ ಹೋಟೆಲ್‌ ಮಾಲೀಕರು, ತೆರಿಗೆಯ ಹೊರೆಯನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ.

‘ಹೋಟೆಲ್‌ಗೆ ಬರುವ ಬಹುಪಾಲು ಗ್ರಾಹಕರು ಸ್ಥಳೀಯರು. ಹಲವು ವರ್ಷಗಳ ನಿರಂತರ ಬರ ಪರಿಸ್ಥಿತಿಯಿಂದ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಕೃಷಿಯು ರೈತರ ಕೈಹಿಡಿಯುತ್ತಿಲ್ಲ. ಕೈತುಂಬ ಸಂಬಳ ನೀಡುವ ಉದ್ಯೋಗವೂ ಸಿಗುತ್ತಿಲ್ಲ. ಹೀಗಾಗಿ, ಜನರ ಕೈಯಲ್ಲಿ ಹಣ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ತೆರಿಗೆಯ ಹೊರೆಗೆ ನಿಜಕ್ಕೂ ಗ್ರಾಹಕರು ನಲುಗುತ್ತಾರೆ. ಹೀಗಾಗಿ, ತಿನಿಸುಗಳ ಬೆಲೆಯನ್ನು ಹೆಚ್ಚಿಸುವ ಸಾಹಸಕ್ಕೆ ಕೈಹಾಕಲಿಲ್ಲ’ ಎಂದು ಎನ್ನುತ್ತಾರೆ ಅರುಣ್‌ ಕುಮಾರ್‌.

ಬೀದಿ ಬದಿ ಹೋಟೆಲ್‌ಗೆ ಒಲವು

ಕೋಟೆ ನಾಡಿನ ಗ್ರಾಹಕರು ದೊಡ್ಡ ಹೋಟೆಲ್‌ಗಳ ಬದಲಿಗೆ ತಳ್ಳುವ ಗಾಡಿಯಂತಹ ಬೀದಿ ಬದಿ ಹೋಟೆಲ್‌ಗಳತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ, ಹೋಟೆಲ್‌ ಉದ್ಯಮದ ಶೇ 60ರಷ್ಟು ವಹಿವಾಟು ಬೀದಿ ಬದಿಯಲ್ಲಿಯೇ ನಡೆಯುತ್ತಿದೆ ಎಂಬುದು ಉದ್ಯಮಿಗಳ ಅಭಿಪ್ರಾಯ.

‘ಒಂದು ಇಡ್ಲಿ ಬೀದಿ ಬದಿಯಲ್ಲಿ ₹ 5ಕ್ಕೆ ಸಿಗುತ್ತದೆ. ಇಷ್ಟೇ ಬೆಲೆಗೆ ನಾವೂ ನೀಡಲು ಸಾಧ್ಯವಿದೆ. ಆದರೆ, ಜಿಎಸ್‌ಟಿ ಹಾಗೂ ನಿರ್ವಹಣಾ ವೆಚ್ಚವನ್ನು ಈ ಇಡ್ಲಿಯಿಂದಲೂ ವಸೂಲಿ ಮಾಡಬೇಕು. ಸಹಜವಾಗಿ ಇದರ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ, ಗ್ರಾಹಕರು ಕಡಿಮೆ ಬೆಲೆಗೆ ಆದ್ಯತೆ ನೀಡುತ್ತಾರೆ’ ಎಂಬುದು ಪ್ರತಿಷ್ಠಿತ ಹೋಟೆಲ್‌ ಮಾಲೀಕರೊಬ್ಬರ ವಿಶ್ಲೇಷಣೆ.

ಜಿಎಸ್‌ಟಿ ಜಾರಿಯಾದ ಬಳಿಕ ತಿಂಡಿ–ತಿನಿಸುಗಳ ಬೆಲೆಯನ್ನು ಏರಿಕೆ ಮಾಡಲಿಲ್ಲ. ಗ್ರಾಹಕರು ಕೈತಪ್ಪಿದರೆ ಕಷ್ಟವೆಂಬ ಆತಂಕ ಕಾಡುತ್ತಿದೆ. ತೆರಿಗೆ ಹೊರೆಯನ್ನು ನಾವೇ ಭರಿಸುತ್ತಿದ್ದೇವೆ.
- ಅರುಣ್‌ ಕುಮಾರ್‌, ಮಾಲೀಕರು, ಐಶ್ವರ್ಯ ಫೋರ್ಟ್‌

ಬದುಕಿಗೆ ಅಗತ್ಯವಿರುವ ಆಹಾರವನ್ನು ಎಲ್ಲರಿಗೂ ಒದಗಿಸುತ್ತಿದ್ದೇವೆ. ಹೀಗಾಗಿ ತೆರಿಗೆಯ ಪ್ರಮಾಣವನ್ನು ಶೇ 5ಕ್ಕಿಂತಲೂ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಂಡಿದ್ದೇವೆ.
- ಕೆ.ಎಸ್.ಅರುಣಕುಮಾರ್, ಅಧ್ಯಕ್ಷರು, ಜಿಲ್ಲಾ ಹೊಟೇಲ್ ಮಾಲೀಕರ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !