ಬುಧವಾರ, ನವೆಂಬರ್ 25, 2020
19 °C
ಲಕ್ಷ್ಮೀ ಪೂಜೆ, ಹಿರಿಯರ ಪೂಜೆ ನಂತರ ಪಟಾಕಿಗಳಿಂದ ಮೂಡಿದ ಬೆಳಕಿನ ಚಿತ್ತಾರ

ದೀಪಾವಳಿ ಸಂಭ್ರಮಾಚರಣೆ: ಕಳೆಗಟ್ಟಲಿದೆ ಬಲಿಪಾಡ್ಯಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಾದ್ಯಂತ ಅನೇಕರು ಭಾನುವಾರ ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸಿದರು. ಆದರೆ, ಹಿಂದಿನ ವರ್ಷದ ಸಂಭ್ರಮ ಹಲವೆಡೆ ಕಾಣಲಿಲ್ಲ. ಬಲಿಪಾಡ್ಯಮಿ ದಿವಸ ಆಚರಿಸುವವರ ಸಂಖ್ಯೆ ಹೆಚ್ಚು. ಹೀಗಾಗಿ ಸೋಮವಾರ ಕಳೆಗಟ್ಟುವ ಸಾಧ್ಯತೆ ಇದೆ.

ರಾತ್ರಿ ಆಗುವುದನ್ನು ಕಾತರದಿಂದ ಕಾಯುತ್ತಿದ್ದ ಅನೇಕ ಮಂದಿ ಕತ್ತಲು ಆವರಿಸುತ್ತಿದ್ದಂತೆ ಮನೆಯಂಗಳದಲ್ಲಿ ಪುಟ್ಟ ಹಣತೆಗಳನ್ನು ಸಾಲು ಸಾಲಾಗಿ ಹಚ್ಚಿದರು. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಎತ್ತ ನೋಡಿದರತ್ತ ದೀಪಗಳೇ ಮಿನುಗತೊಡಗಿದವು. ‘ಹಸಿರು ಪಟಾಕಿ’ಗಳಿಗೆ ಮಾತ್ರ ಅನುಮತಿ ನೀಡಿದ್ದರಿಂದ ಈ ಬಾರಿ ಹೆಚ್ಚು ಶಬ್ದ ಮಾಡುವಂಥ ಪಟಾಕಿಗಳನ್ನೂ ಹಲವರು ಹಚ್ಚಲಿಲ್ಲ.

ಬಾನು ಕೆಂಪೇರುತ್ತಿದ್ದಂತೆ ಮಕ್ಕಳು ಪಟಾಕಿಗಳನ್ನು ಹಚ್ಚಲು ಉತ್ಸುಕರಾದರು. ಮನೆಯ ಮುಂಭಾಗ, ಖಾಲಿ ಜಾಗಗಳಲ್ಲಿ ಸುರ್‌ ಸುರ್‌ ಬತ್ತಿ, ಮಸಿ ಕುಡಿಕೆ, ಭೂಚಕ್ರ ಹಚ್ಚಿ ಸಂಭ್ರಮಿಸಿದರು. ವಿವಿಧ ಬಗೆಯ ಪಟಾಕಿಗಳು ಕತ್ತಲೆಯಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಹಬ್ಬವನ್ನು ಜಿಲ್ಲೆಯ ಜನತೆ ಆಚರಿಸಿದ ಪರಿ ಇದು.

ಮುಖ್ಯ ರಸ್ತೆ ಮಾರ್ಗದ ಬಹುತೇಕ ಕಟ್ಟಡಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಆಕಾಶ ಬುಟ್ಟಿಗಳು ಮನೆಯ ಮುಂಭಾಗದಲ್ಲಿ ರಾರಾಜಿಸುತ್ತಿದ್ದವು. ಬಣ್ಣ ಬಣ್ಣದ ದೀಪದ ಸರಮಾಲೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿದವು. ಬೆಳಕಿನ ಮೋಡಿ ಮಕ್ಕಳ ಮೊಗವನ್ನು ಅರಳಿಸಿತು.

ಬಲಿಪಾಡ್ಯಮಿ ದಿನ ಮನೆಯ ಎದುರು ಹೆಂಗಳೆಯರು ರಂಗೋಲಿ ಬಿಡಿಸಿದ್ದರು. ಪೂಜೆಗೆ ಮಂಟಪ ನಿರ್ಮಿಸಿ ಕಳಸ ಸ್ಥಾಪಿಸಿದರು. ದ್ವಾರ ಹಾಗೂ ದೇವರ ಬಾಗಿಲುಗಳಿಗೆ ಬಾಳೆಕಂದು, ಮಾವಿನ ತೋರಣ ಕಟ್ಟಿ, ಪುಷ್ಪಾಲಂಕಾರ ಮಾಡಿದರು.

ಲಕ್ಷ್ಮೀ, ಹಿರಿಯರ ಪೂಜೆ ವಿಶೇಷ: ಲಕ್ಷ್ಮೀದೇವಿ ಪೂಜೆ, ಕುಲದೇವತೆ ಪೂಜೆ, ಹಿರಿಯರ ಪೂಜೆಗಾಗಿ ನೈವೇದ್ಯ ಸಮರ್ಪಿಸಲು ಮನೆಗಳಲ್ಲಿ ತರಹೇವಾರಿ ಖಾದ್ಯಗಳನ್ನು ತಯಾರಿಸಲು ಮಧ್ಯಾಹ್ನದಿಂದಲೇ ಮಹಿಳೆಯರು ಮುಂದಾದರು. ಇನ್ನು ಹಿರಿಯರು, ಯುವಕರು ಸಗಣಿಯಲ್ಲಿ ಗಣಪತಿ, ಗೊಲ್ಲಮ್ಮ ದೇವಿಯನ್ನು ನಿರ್ಮಿಸಿ, ಕಾಚಿಕಡ್ಡಿ, ಬ್ರಹ್ಮದಂಡೆ ಗಿಡ, ತಂಗಟೆ ಹೂಗಳೊಂದಿಗೆ ಮನೆಯಲ್ಲಿರುವ ಬಾಗಿಲುಗಳ ಎರಡೂ ಬದಿಗಳಲ್ಲಿಟ್ಟು ಪೂಜೆಗೆ ಸಿದ್ಧತೆ ಮಾಡಿಕೊಂಡರು. ಸಂಜೆಯಾಗುತ್ತಿದ್ದಂತೆ ಹೂ, ಹಣ್ಣು ಸಮರ್ಪಣೆಯೊಂದಿಗೆ ಅನೇಕರ ಮನೆಗಳಲ್ಲಿ ಪೂಜೆಗಳು ನೆರವೇರಿದವು.

ದೇವಿರಮ್ಮ ದೇವಿಗೂ ಪೂಜೆ: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಬಿಂಡಿಗ ಮಲ್ಲೇನಹಳ್ಳಿಯ ಶಕ್ತಿದೇವತೆ ದೇವಿರಮ್ಮ ದೇವಿಗೂ ಕೋಟೆನಾಡಿನ ಅನೇಕ ಭಕ್ತರು ತುಪ್ಪದ ದೀಪದಿಂದ ಇಲ್ಲಿಂದಲೇ ಮಂಗಳಾರತಿ ಸಮರ್ಪಿಸಿದರು. ಮನೆಯಲ್ಲಿರುವ ‘ಮಕ್ಕಳ ಆರೋಗ್ಯ ರಕ್ಷಿಸುತ್ತಾಳೆ’ ಎಂಬ ನಂಬಿಕೆಯೊಂದಿಗೆ ದೇವಿ ದೇಗುಲದ ದಿಕ್ಕಿನೆಡೆ ನಿಂತು ಹಲವರು ಪೂಜೆ ಸಲ್ಲಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಗೋಪೂಜೆ: ಭಕ್ತಿ, ಭಾವದಿಂದ ಸಮ್ಮಿಳಿತಗೊಂಡಿದ್ದ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ವಿಶೇಷ ಅಲಂಕಾರ ಮಾಡಲಾಯಿತು. ಗೋಪೂಜೆ ನೆರವೇರಿಸಿ ಹಬ್ಬ ಆಚರಿಸಲಾಯಿತು. ಅಲ್ಲದೆ, ಕೊಟ್ಟಿಗೆಯಿಂದ ಮನೆಗೆ ಕರೆತಂದು ಪೂಜೆ ಸಲ್ಲಿಸಲಾಯಿತು. ದೀಪಾವಳಿ ಅಂಗವಾಗಿ ಜಿಲ್ಲೆಯ ಹಲವು ದೇಗುಲಗಳಲ್ಲೂ ವಿಶೇಷ ಪೂಜೆ ನೆರವೇರಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು