ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಹೂ ಬೆಳೆಗಾರರು, ವ್ಯಾಪಾರಸ್ಥರಿಗೆ ಬೆಳಕಾದ ದೀಪಾವಳಿ

ದಾಖಲೆಯ ಏರಿಕೆ ಕಂಡ ಹಳದಿ, ಕಲರ್ ಸೇವಂತಿ * ರೈತರಲ್ಲಿ ಮೂಡಿದ ಸಂತಸ
Last Updated 15 ನವೆಂಬರ್ 2020, 3:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಳಕಿನ ಹಬ್ಬ ದೀ‍ಪಾವಳಿಗೆ ಪುಷ್ಪಗಳ ದರ ದಾಖಲೆಯ ಏರಿಕೆ ಕಂಡಿದೆ. ಇದು ಹೂ ಬೆಳೆಗಾರರಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿದೆ. ವ್ಯಾಪಾರಸ್ಥರು, ಸಣ್ಣ ಮಾರಾಟಗಾರರಲ್ಲೂ ಉತ್ಸಾಹ ಹೆಚ್ಚಿದೆ.

ಇಲ್ಲಿನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಹೂವಿನ ಮಾರುಕಟ್ಟೆ ಬಳಿ ಶನಿವಾರ ನೂರಾರು ಹೂ ಬೆಳೆಗಾರರು ಹೂವಿನ ಮೂಟೆಗಳನ್ನು ತಲೆಯ ಮೇಲೆ ಹೊತ್ತು ಒಬ್ಬರ ನಂತರ ಮತ್ತೊಬ್ಬರು ಬರುತ್ತಿದ್ದರು. ಮಾರುಕಟ್ಟೆಗೆ ತಂದಾಗ ವ್ಯಾಪಾರದ ಭರಾಟೆ ಜೋರಾಗಿತ್ತು. ಖರೀದಿಗೆ ಅನೇಕರು ಮುಗಿಬಿದ್ದರು.

ಹಬ್ಬದ ಅಂಗವಾಗಿ ಹೂಗಳ ದರ ಈ ಬಾರಿ ಎಂದಿಗಿಂತಲೂ ದುಪ್ಪಟ್ಟು ಹೆಚ್ಚಳವಾಗಿರುವ ಕಾರಣ ಹೂ ಬೆಳೆಗಾರರು ಹಾಗೂ ಮಾರಾಟಗಾರರ ಪಾಲಿಗೆ ದೀಪಾವಳಿ ಬೆಳಕು ಮೂಡಿಸಿದೆ. ಈ ಹಬ್ಬಕ್ಕಾಗಿ ಪುಷ್ಪ ಬೆಳೆದ ಬೆಳೆಗಾರರಿಗೆ ನಿರೀಕ್ಷೆಗೂ ಮೀರಿ ಬೆಲೆ ಸಿಕ್ಕಿದ್ದರಿಂದಾಗಿ ಬಹುತೇಕ ರೈತರು ಹರ್ಷಗೊಂಡಿದ್ದಾರೆ. ಖರೀದಿಸುವ ಗ್ರಾಹಕರಿಗೆ ಮಾತ್ರ ಹೆಚ್ಚಿನ ಹೊರೆಯಾಗಿದೆ. ಕೊಳ್ಳುವ ಪ್ರಮಾಣ ಕಡಿಮೆಗೊಳಿಸಿ ಖರೀದಿಸಲು ಮುಂದಾಗಿದ್ದಾರೆ.

ಹಬ್ಬಕ್ಕೂ ಮುನ್ನ ಶುಕ್ರವಾರದಿಂದಲೇ ಗುಣಮಟ್ಟದ ಹಳದಿ ಮತ್ತು ಕಲರ್‌ ಸೇವಂತಿ ಚಿಲ್ಲರೆ ವ್ಯಾಪಾರಸ್ಥರ ಬಳಿ ತಲಾ ಒಂದು ಮಾರು ₹ 100ರಿಂದ ₹ 120ರಂತೆ ಮಾರಾಟವಾಗುವ ಪ್ರಕ್ರಿಯೆ ಆರಂಭವಾಯಿತು. ಆದರೆ, ಶನಿವಾರ ನಡೆದ ನರಕ ಚತುದರ್ಶಿ, ಲಕ್ಷ್ಮಿ-ಕುಬೇರ ಪೂಜೆ ದಿನವೂ ಬೆಲೆ ಇಳಿಕೆ ಆಗಲಿಲ್ಲ. ಆದರೂ ಖರೀದಿ ಭರಾಟೆ ಜೋರಾಗಿಯೇ ನಡೆದಿದೆ. ಚೆಂಡು ಹೂ ಮಾರೊಂದಕ್ಕೆ ₹100ರಂತೆ ಮಾರಾಟವಾಯಿತು.

ಭಾನುವಾರ ನಡೆಯಲಿರುವ ದೀಪಾವಳಿ ಅಮಾವಾಸ್ಯೆ, ಲಕ್ಷ್ಮಿ ಪೂಜೆ ಹಾಗೂ ಸೋಮವಾರ ನಡೆಯುವ ಬಲಿಪಾಡ್ಯಮಿಗೂ ಹೂವಿನ ದರ ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಸೋಮವಾರ ಹಬ್ಬ ಆಚರಿಸುವವರು ಬೆಲೆ ಏರಿಕೆ ಇನ್ನಷ್ಟು ಹೆಚ್ಚಾಗಬಹುದು ಎಂದು ಕೆಲವರು ಮುಂಚಿತವಾಗಿಯೇ ಖರೀದಿಯಲ್ಲಿ ತೊಡಗಿದ್ದಾರೆ. ಲಕ್ಷ್ಮಿದೇವಿ ಪೂಜೆ ಹಾಗೂ ಅಂಗಡಿಗಳ ಪೂಜೆಗಾಗಿ ಆರ್ಯವೈಶ್ಯ, ಜೈನ್‌ ಸೇರಿ ಇತರೆ ಸಮುದಾಯದವರು ಹೆಚ್ಚಾಗಿ ಖರೀದಿಸಿದರು.

ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಧರ್ಮಸ್ಥಳ, ಹೊರನಾಡು ಸೇರಿ ಬೆಂಗಳೂರಿಗೂ ಜಿಲ್ಲೆಯಿಂದ ಹೂಗಳು ರಫ್ತಾಗಿವೆ. ಇದರಿಂದಾಗಿ ಬೆಳೆಗಾರರು, ಮಾರಾಟಗಾರರು ಅಷ್ಟೇ ಅಲ್ಲ. ಪುಷ್ಪ ವಿತರಕರು ಒಂದಿಷ್ಟು ಲಾಭ ಕಂಡಿದ್ದಾರೆ.

ಮನೆಗಳಲ್ಲಿ ಪ್ರತಿಷ್ಠಾಪಿಸುವ ಲಕ್ಷ್ಮಿದೇವಿ ಮೂರ್ತಿ, ಹಿರಿಯರ ಗದ್ದಿಗೆ, ಕಳಶಕ್ಕೆ ಹಾಕುವ ಹಾರ ₹ 200ರಿಂದ ₹ 500 ಹಾಗೂ ದೇಗುಲಗಳಲ್ಲಿನ ದೇವರ ಮೂರ್ತಿಗಳಿಗಾಗಿ ₹ 500ರಿಂದ ₹ 3ಸಾವಿರದವರೆಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT