ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 7.5 ಮೀಸಲಾತಿ ಬೇಡಿಕೆ ಈಡೇರಲಿ

ನಾಯಕ ಸಮುದಾಯದ ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
Last Updated 25 ಡಿಸೆಂಬರ್ 2019, 16:26 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 7.5 ರಷ್ಟು ಮೀಸಲಾತಿ ಸೌಲಭ್ಯ ಸಿಗಬೇಕೆಂಬ ನಾಯಕ ಸಮುದಾಯದ ಬೇಡಿಕೆ ಈಡೇರಲಿ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆಶಯ ವ್ಯಕ್ತಪಡಿಸಿದರು.

ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೀಸಲಾತಿ ಹೆಚ್ಚಳ ಪರಿಶಿಷ್ಟ ಪಂಗಡದ ಬಹುದಿನಗಳ ಬೇಡಿಕೆಯಾಗಿದೆ. ಈ ಸಂಬಂಧ ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವ ವಹಿಸಿದ್ದಾರೆ. ವಾಲ್ಮೀಕಿ ಶ್ರೀಗಳು ಪಾದಯಾತ್ರೆ ಮೂಲಕ ಹೋರಾಟ ಮಾಡಿದ್ದಾರೆ. ಸರ್ಕಾರವೂ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

‘ಅವಕಾಶ ವಂಚಿತ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಅಧ್ಯಯನ ಕೈಗೊಂಡು, ತಜ್ಞರನ್ನು ನೇಮಿಸಿ, ಮೀಸಲಾತಿ ಸೌಲಭ್ಯ ಕಲ್ಪಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ’ ಎಂದ ಅವರು, ‘ಪ್ರತಿಭಾವಂತರಿಗೆ ಉತ್ತಮ ಅವಕಾಶ ಲಭಿಸಲಿ ಎಂಬ ಕಾರಣಕ್ಕಾಗಿ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ನಿಜಕ್ಕೂ ಶ್ಲಾಘನೀಯ’ ಎಂದರು.

ಶ್ರೀಗಳ ತೀರ್ಮಾನಕ್ಕೆ ಬದ್ಧ:‘2020ರ ಫೆಬ್ರುವರಿ 8 ಮತ್ತು 9ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಮುಖ್ಯಮಂತ್ರಿಗಳು ನಾಯಕ ಸಮುದಾಯಕ್ಕೆ ಶೇ 7.5 ಮೀಸಲಾತಿ ಹೆಚ್ಚಳ ಘೋಷಿಸಬೇಕು ಎಂಬುದು ಶ್ರೀಗಳ ಆಶವಾಗಿದೆ. ಇದು ಈಡೇರಿದರೆ ಮಾತ್ರ ನಾಯಕ ಸಮುದಾಯಕ್ಕೆ ನ್ಯಾಯ ಸಿಗಲಿದೆ’ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.

‘ಒಂದು ವೇಳೆ ಮೀಸಲಾತಿ ಹೆಚ್ಚಳ ಘೋಷಣೆ ಆಗದಿದ್ದರೆ ಶ್ರೀಗಳು ಸಮುದಾಯದ ಶಾಸಕರಿಗೆ ಎಲ್ಲ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸೂಚನೆ ನೀಡಿದಲ್ಲಿ ಶ್ರೀಗಳ ಹಾಗೂ ಸಮುದಾಯದ ಶಾಸಕರು ಕೈಗೊಳ್ಳುವ ತೀರ್ಮಾನಕ್ಕೆ ನಾನೂ ಬದ್ಧ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್. ಗುಡ್ಡದೇಶ್ವರಪ್ಪ, ‘ಎಲ್‌.ಜಿ. ಹಾವನೂರು ಅವರಿಂದ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಸೌಲಭ್ಯ ಸಿಕ್ಕಿದೆ. ಆದರೆ, ರಾಜ್ಯದಲ್ಲಿ 68ಲಕ್ಷ ಜನಸಂಖ್ಯೆಯಿದ್ದರೂ ವಾಲ್ಮೀಕಿ ಸಮುದಾಯಕ್ಕೆ ಶೇ 3ರಷ್ಟು ಮೀಸಲಾತಿ ಇದೆ. ಆದ್ದರಿಂದ ಶೇ 7.5 ಮೀಸಲಾತಿ ಕೇಳುತ್ತಿದ್ದೇವೆ’ ಎಂದು ಹೇಳಿದರು.

ಡಿವೈಎಸ್‌ಪಿಗಳಾದ ಜಿ.ಎಂ. ತಿಪ್ಪೇಸ್ವಾಮಿ, ಟಿ. ಮಂಜುನಾಥ್, ಜೀವಮಾನ ಸಾಧನೆಗಾಗಿ ಬರಗೇರಮ್ಮ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ. ಚಿನ್ನಪ್ಪ, ಭದ್ರಾ ಮೇಲ್ದಂಡೆ ಯೋಜನೆ ನಿವೃತ್ತ ಮುಖ್ಯ ಎಂಜಿನಿಯರ್ ಆರ್. ಚಲುವರಾಜು, ಐಎಎಸ್ ಸಾಧಕ ಡಿ. ಶ್ರೀಕಾಂತ್ ಹಾಗೂ ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೂ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಾಯಕ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಜೆ. ಕೃಷ್ಣಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಕಾಂತರಾಜು, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್, ಸಂಘದ ಗೌರವಾಧ್ಯಕ್ಷ ಡಾ.ಎನ್.ಬಿ. ಪ್ರಹ್ಲಾದ್, ಡಿಎಚ್‌ಒ ಸಿ.ಎಲ್. ಫಾಲಾಕ್ಷ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಬಿ. ಪ್ರಸನ್ನಕುಮಾರ್, ಪ್ರಾಂಶುಪಾಲ ಟಿ.ಎಲ್. ಸುಧಾಕರ್, ಮುಖಂಡರಾದ ಪಿ.ಕೆ. ಸದಾನಂದ, ಎಸ್.ವೀರಣ್ಣ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT