ಗುರುವಾರ , ಜನವರಿ 27, 2022
21 °C
ರಾಜ್ಯಪಾಲರಿಗೆ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರ ಒತ್ತಾಯ

ಚಿತ್ರದುರ್ಗ | ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದೇಶದ್ರೋಹದ ಕೃತ್ಯಗಳಲ್ಲಿ ನಿರತವಾಗಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಭಯೋತ್ಪಾದಕರ ಮಾದರಿಯಲ್ಲಿ ರಾಷ್ಟ್ರದ್ರೋಹದ ಕೃತ್ಯ ಎಸಗುತ್ತಿದ್ದಾರೆ. ಆದ್ದರಿಂದ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಮೈಸೂರಿನ ಹುಣಸೂರಿನಲ್ಲಿ ಮುಗ್ಧ ಮಕ್ಕಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಹತ್ಯೆ ಮಾಡಿದ್ದಾರೆ. ಇದನ್ನು ವಿರೋಧಿಸಿ ಅಲ್ಲಿ ಪ್ರತಿಭಟಿಸಿದ ವೇಳೆ ಡಿವೈಎಸ್‌ಪಿ ಮೇಲೆ ಹತ್ಯೆ ಯತ್ನ ನಡೆಸಿದ್ದಾರೆ. ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದರು.

ಟಿಪ್ಪು ಜಯಂತಿ ಹೆಸರಿನಲ್ಲಿ ಕೇರಳದಿಂದ ಕೊಡಗಿಗೆ ದುಷ್ಕರ್ಮಿಗಳನ್ನು ಕರೆಸಿ ಕುಟ್ಟಪ್ಪನ ಹತ್ಯೆ ಮಾಡಿರುವವರು ಇದೇ ಪಿಎಫ್‌ಐ ಸಂಘಟನೆ ಕಾರ್ಯಕರ್ತರು. ಶರತ್ ಮಡಿವಾಳ್, ರುದ್ರೇಶ್, ರಾಜು ಹೀಗೆ ಅನೇಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿದರು.

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಮಂಗಳೂರಿನ ಬಂದರಿನಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ್ದಾರೆ. ರಾಜ್ಯದ ಶಿವಮೊಗ್ಗ, ತುಮಕೂರು ಇತರ ಕಡೆಗಳಲ್ಲಿ ದೊಂಬಿ–ಗಲಭೆಗೆ ಕಾರಣರಾಗಿದ್ದಾರೆ. ಬೆಂಗಳೂರಿನ ಡಿ.ಜಿ.ಹಳ್ಳಿ, ಕೆ.ಜಿ.ಹಳ್ಳಿಗಳಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಶಾಸಕರ ಮನೆಗೂ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕೋರಿದರು.

ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್, ವಿಶ್ವ ಹಿಂದೂ ಪರಿಷತ್ ಮತ್ತು ಜಿಲ್ಲಾ ಗೋರಕ್ಷಕ್ ಪ್ರಮುಖ್ ರುದ್ರೇಶ್, ನಗರ ಸಂಚಾಲಕ ರಂಗಸ್ವಾಮಿ, ಗ್ರಾಮಾಂತರ ಸಂಚಾಲಕ ಕೇಶವ್, ಮುಖಂಡರಾದ ಹನುಮಂತಣ್ಣ, ತೇಜು, ರೇಣು, ಉಮೇಶ್, ಅಕಿಲೇಶ್, ಸ್ವಾಮಿ, ಕಿರಣ್, ದಿನೇಶ್, ಮಂಜಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.