ಚಿತ್ರದುರ್ಗ ಜಿಲ್ಲೆ ಬರಪೀಡಿತ ಘೋಷಣೆಗೆ ಆಗ್ರಹ

7

ಚಿತ್ರದುರ್ಗ ಜಿಲ್ಲೆ ಬರಪೀಡಿತ ಘೋಷಣೆಗೆ ಆಗ್ರಹ

Published:
Updated:
Deccan Herald

ಹಿರಿಯೂರು: ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳಲ್ಲಿ ಹಿಂದಿನ ಐದಾರು ವರ್ಷದಿಂದ ಸಕಾಲದಲ್ಲಿ ಮಳೆಯಾಗದ ಕಾರಣ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯನ್ನು ಶಾಶ್ವತ ಬರಪೀಡಿತ ಎಂದು ಘೋಷಿಸಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ತಾಲ್ಲೂಕು ರೈತಸಂಘ ಹಾಗು ಹಸಿರುಸೇನೆ ಅಧ್ಯಕ್ಷ ಹೊರಕೇರಪ್ಪ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘದ ವಿಶೇಷ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಣಿವಿಲಾಸ ಜಲಾಶಯದ ತೂಬುಗಳು ಕಾಣುವಷ್ಟು ನೀರು ಖಾಲಿಯಾಗಿದೆ. 15–20 ದಿನಗಳಿಗೆ ಕುಡಿಯಲು ಮಾತ್ರ ಸಾಕಾಗುವಷ್ಟು ನೀರು ಉಳಿದಿದೆ. ರಾಜ್ಯದ ಬಹುತೇಕ ಜಲಾಶಯಗಳು ತುಂಬಿರುವಾಗ ನಮಗೆ ಮಾತ್ರ ಬರ ಆವರಿಸಿದೆ. ಜಿಲ್ಲಾಡಳಿತ ನೀರಿನ ನಿರ್ವಹಣೆಯನ್ನು ಎಚ್ಚರಿಕೆಯಿಂದ ನಿರ್ವಹಿಸದೇ ಹೋದಲ್ಲಿ ಅಪಾಯ ಖಚಿತ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದೊಂದೆ ಈ ಭಾಗದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿಸಿದರು.

‘ಶೇಂಗಾ ಬೆಳೆಗೆ ₹ 10 ಸಾವಿರ, ಈರುಳ್ಳಿಗೆ ₹ 4 ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಜಿಲ್ಲೆಯ ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ಬೆಳೆ ವಿಮೆ ಪಾವತಿಸುವ ಅವಧಿಯನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಬೇಕು. ಜಿಲ್ಲೆಗೆ ₹ 25 ಕೋಟಿ ಬೆಳೆ ವಿಮಾ ಪರಿಹಾರ ಬಿಡುಗಡೆ ಆಗಿದ್ದು, ನಮ್ಮ ತಾಲ್ಲೂಕಿಗೆ ಬಿಡುಗಡೆ ಆಗಿಲ್ಲ. ಧರ್ಮಪುರ ಹೋಬಳಿಯಲ್ಲಿ ಶೇಂಗಾ ಹಾನಿಯಾಗಿರುವ ರೈತರಿಗೆ ವಿಮೆ ಹಣ ಬಂದಿಲ್ಲ. ಸಂಬಂಧಪಟ್ಟವರು ತಕ್ಷಣ ಪರಿಹಾರದ ಹಣ ಕೊಡಿಸಲು ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.

ಸಂಘದ ಕಾರ್ಯಾಧ್ಯಕ್ಷ ಸಿ. ಸಿದ್ಧರಾಮಣ್ಣ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದ ಕೊಳೆಗೇರಿ ಪ್ರದೇಶದಲ್ಲಿರುವ ಮನೆ, ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕ್ರಮ ಕೈಗೊಳ್ಳುವಲ್ಲಿ ಅಬಕಾರಿ ಇಲಾಖೆ ವಿಫಲವಾಗಿದೆ’ ಎಂದು ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ಕೃಷ್ಣಸ್ವಾಮಿ, ದಸ್ತಗೀರ್ ಸಾಬ್, ಕೃಷಿ ಅಧಿಕಾರಿ ಡಾ. ಅಸ್ಲಂ, ಉಷಾರಾಣಿ, ನಗರಠಾಣೆ ಪಿಎಸ್ಐ ಮಂಜುನಾಥ್, ಅಬಕಾರಿ ಇನ್‌ಸ್ಪೆಕ್ಟರ್ ನಟರಾಜ್, ಸುಧೀಂದ್ರ, ಕೀರ್ತನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !