ಶುಕ್ರವಾರ, ಜೂನ್ 25, 2021
29 °C

ಚಿತ್ರದುರ್ಗ ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕೊರೊನಾ ಸೋಂಕಿನ ಆತಂಕದ ನಡುವೆಯೇ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈವರೆಗೆ ಜಿಲ್ಲೆಯಲ್ಲಿ 130 ಡೆಂಗಿ ಪ್ರಕರಣಗಳು ಬೆಳಕಿಗೆ ಬಂದಿವೆ.

ವಿಶ್ವ ಸೊಳ್ಳೆಗಳ ದಿನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಅಂಕಿ–ಅಂಶ ಇದನ್ನು ಖಚಿತಪಡಿಸಿದೆ. 2018ರಲ್ಲಿ 108 ಹಾಗೂ 2019ರಲ್ಲಿ 152 ಪ್ರಕರಣ ಬೆಳಕಿಗೆ ಬಂದಿದ್ದವು. ಪ್ರಸಕ್ತ ವರ್ಷ ಎಂಟು ತಿಂಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ 2020 ರ ಆ.20ರ ವರೆಗೆ 1.82 ಲಕ್ಷ ರಕ್ತಲೇಪನ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 2 ಮಲೇರಿಯಾ, 130 ಡೆಂಗಿ ಹಾಗೂ 57 ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

‘ಸೊಳ್ಳೆ ನಿಯಂತ್ರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. 2025ಕ್ಕೆ ಮಲೇರಿಯಾ ರೋಗ ನಿವಾರಣೆ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕು’ ಎಂದು ವಿಶ್ವ ಸೊಳ್ಳೆ ದಿನಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮನವಿ ಮಾಡಿದ್ದಾರೆ.

‘ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಬರುತ್ತದೆ. ಕ್ಯೂಲೆಕ್ಸ್ ಸೊಳ್ಳೆ ಮೆದಳು ಜ್ವರ ಮತ್ತು ಆನೆಕಾಲು ರೋಗಕ್ಕೆ ಕಾರಣವಾಗುತ್ತದೆ. ಈಡಿಸ್ ಈಜಿಪ್ತೈ ಎಂಬ ಪ್ರಭೇದದ ಸೊಳ್ಳೆಯಿಂದ ಡೆಂಗಿ, ಚಿಕುನ್‌ ಗುನ್ಯಾ ಮತ್ತು ಜೀಕಾ ರೋಗ ಬರುತ್ತವೆ’ ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಜಯಮ್ಮ, ಜಿಲ್ಲಾ ಕೀಟಶಾಸ್ತ್ರ ತಜ್ಞೆ ನಂದಿನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಆಬುಸಾಲೇಹ, ಎಂ.ಬಿ. ಹನುಮಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು