ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ಗಲಿ ಕೆರೆ; ಉಳಿಯಲಿ ಜಲ

ನಮ್ಮ ಜನ
Last Updated 20 ಅಕ್ಟೋಬರ್ 2018, 19:47 IST
ಅಕ್ಷರ ಗಾತ್ರ

ಚಿತ್ರದುರ್ಗದ ಜಲತಜ್ಞ ಎನ್‌.ಜೆ.ದೇವರಾಜ ರೆಡ್ಡಿ ನೀರಿನ ಮಹತ್ವದ ಕುರಿತು ರೂಪಿಸಿದ ವಿಡಿಯೊವೊಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯ ‘ಜಲ್‌ ಬಚಾವೊ– ವಿಡಿಯೊ ಬನಾವೊ– ಪುರಸ್ಕಾರ್‌ ಪಾವೊ’ ಅಭಿಯಾನದ ಪುರಸ್ಕಾರಕ್ಕೆ ಭಾಜನವಾಗಿದೆ. ಇಂತಹ ಪುರಸ್ಕಾರ ಪಡೆದ ರಾಜ್ಯದ ಮೊದಲಿಗರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಜಲಸಂರಕ್ಷಣೆಯ ಆಂದೋಲದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತು–ಕತೆ ನಡೆಸಿದ್ದಾರೆ.

* ‘ಜಲ್‌ ಬಚಾವೊ’ ಆಂದೋಲನದಲ್ಲಿ ನೀವು ತೊಡಗಿಸಿಕೊಂಡಿದ್ದು ಹೇಗೆ?

ಕೇಂದ್ರ ಜಲಸಂಪನ್ಮೂಲ ಇಲಾಖೆ ನಡೆಸುತ್ತಿರುವ ಆಂದೋಲನದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ನೋಡಿದ್ದೆ. ಜಲ ಸಂರಕ್ಷಣೆ ಅರಿವು ಮೂಡಿಸುವಲ್ಲಿ ತೊಡಗಿಕೊಂಡಿದ್ದರಿಂದ ಗಮನ ಸೆಳೆಯಿತು. ಇಲಾಖೆಯ ಜಾಲತಾಣ ವೀಕ್ಷಿಸಿದಾಗ ಇನ್ನಷ್ಟು ಮಾಹಿತಿ ಲಭ್ಯವಾಯಿತು. ಆದರೆ, ಅದಾಗಲೇ ಅನೇಕರು ವಿಡಿಯೊಗಳನ್ನು ರೂಪಿಸಿ ಅಪ್‌ಲೋಡ್ ಮಾಡಿದ್ದರು. ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಭಾವನೆ ಮೂಡಿತು. ನನ್ನ ಪರಿಕಲ್ಪನೆಯನ್ನು ಹಂಚಿಕೊಂಡರೆ ಜನ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಸ್ಪರ್ಧೆಗೆ ಸಜ್ಜಾದೆ.

* ನೀರಿನ ಮಹತ್ವ ಸಾರುವಂತಹ ವಿಡಿಯೊ ಹೇಗೆ ರೂಪಿಸಿದಿರಿ?

ಕೊಳವೆ ಬಾವಿಯನ್ನು ಮರುಪೂರಣ ಮಾಡುವ ಪರಿಕಲ್ಪನೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿದ್ದೇನೆ. ಸಾಮಾನ್ಯ ಕ್ಯಾಮೆರಾದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ವಿಡಿಯೊ 10 ನಿಮಿಷದ ಒಳಗೆ ಇರಬೇಕು ಎಂಬುದು ಸ್ಪರ್ಧೆಯ ಷರತ್ತು. ಹೀಗಾಗಿ, 30 ನಿಮಿಷದ ವಿಡಿಯೊವನ್ನು 7 ನಿಮಿಷಕ್ಕೆ ಇಳಿಸಿದೆ. ಸ್ಥಳೀಯವಾಗಿ ಲಭ್ಯವಿರುವ ಸಲಕರಣೆಗಳನ್ನು ಬಳಸಿಕೊಂಡು ಮರುಪೂರಣ ಮಾಡುವುದು ಹೇಗೆ ಎಂಬುದನ್ನು ತೋರಿಸಿದೆ. ಹಲವು ವರ್ಷಗಳ ಹಿಂದೆ ಈ ಮಾದರಿ ಅಳವಡಿಸಿಕೊಂಡಿದ್ದ ಮೆದೆಹಳ್ಳಿಯ ರೈತ ಪ್ರಹ್ಲಾದ್‌ ಅವರ ಅಭಿಪ್ರಾಯವೂ ಇದರಲ್ಲಿತ್ತು. ಆ.9ರಂದು ಯುಟ್ಯೂಬ್‌ಗೆ ಹಾಕಿದೆ. ಕಡಿಮೆ ಅವಧಿಯಲ್ಲಿ ಸಾವಿರಾರು ಜನರನ್ನು ಇದು ತಲುಪಿತು.

* ದಿನ ಕಳೆದಂತೆ ಜಲ ಸಂರಕ್ಷಣೆ ಏಕೆ ಮಹತ್ವ ಪಡೆದುಕೊಳ್ಳುತ್ತಿದೆ?

ಬರ ನಮ್ಮ ಬೆನ್ನು ಬಿದ್ದಿದೆ. ಮಳೆ ಬೀಳುವ ದಿನಗಳು ಕಡಿಮೆಯಾಗುತ್ತಿವೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಜಲಕ್ಷಾಮ ತಲೆದೋರುತ್ತಿದೆ. ಕೊಳವೆ ಬಾವಿ ನಿರ್ಮಿಸಿ ತೋಟ ಮಾಡಿಕೊಂಡ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂತರ್ಜಲ ನಿಕ್ಷೇಪವಲ್ಲ ಎಂಬುದು ಅರಿವಾಗುತ್ತಿದೆ. ಜಲಸಂರಕ್ಷಣೆ ಅನಿವಾರ್ಯವಾಗಿದ್ದು, ಸರ್ಕಾರವೂ ಮಹತ್ವ ನೀಡುತ್ತಿದೆ.

* ಮಳೆ ಕೊರತೆಯಿಂದ ಅಂತರ್ಜಲ ಕುಸಿಯುತ್ತಿದೆ. ಇದನ್ನು ತಡೆಯುವುದು ಹೇಗೆ?

ಅಂತರ್ಜಲವೂ ಖಾಲಿಯಾಗುತ್ತದೆ ಎಂಬುದು ತಡವಾಗಿ ಅರಿವಾಗಿದೆ. ಕೊಳವೆ ಬಾವಿಯ ಮರುಪೂರಣಕ್ಕೆ ಒತ್ತು ನೀಡುವ ಅಗತ್ಯವಿದೆ. ಆದರೆ, ಇದೊಂದೇ ಪರಿಹಾರವಾಗದು. ತೋಟಗಾರಿಕೆ ಬೆಳೆ, ಕೃಷಿಗೆ ಕೊಳವೆ ಬಾವಿ ಕೊರೆಯುವುದು ನಿಲ್ಲಬೇಕಿದೆ. ಮಳೆ ನೀರು ಇಂಗುವಂತೆ ಕೃಷಿ ಭೂಮಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಬದು, ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು. ಕಡಿಮೆ ನೀರು ಬಯಸುವ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

* ಜಿಲ್ಲೆಯ ನೀರಿನ ಸಮಸ್ಯೆಗಳಿಗೆ ಪರಿಹಾರವೇನು? ಭದ್ರಾ ಮೇಲ್ದಂಡೆ ಯೋಜನೆಯು ಬರ ನೀಗಿಸಬಹುದೇ?

ಭದ್ರಾ ಮೇಲ್ದಂಡೆ ಯೋಜನೆ ದೂರದ ಬೆಟ್ಟದಂತೆ ಕಾಣುತ್ತಿದೆ. ನಾಲೆಯಲ್ಲಿ ನೀರು ಹರಿದು, ಭೂಮಿಗೆ ಇಂಗಿ ಅಂತರ್ಜಲ ಹೆಚ್ಚಾಗಲು ಎಷ್ಟು ಸಮಯ ಬೇಕು ಎಂಬುದು ಗೊತ್ತಿಲ್ಲ. ಜಲಾಶಯಗಳ ಪಕ್ಕದಲ್ಲಿಯೇ ಕೊಳವೆ ಬಾವಿಗಳು ವಿಫಲವಾಗುತ್ತಿವೆ.

ಭದ್ರಾ ನೀರು ಬಂದ ತಕ್ಷಣ ಭತ್ತ ಬೆಳೆಯಲು ಆರಂಭಿಸಿದರೆ ಪರಿಸ್ಥಿತಿ ಸುಧಾರಣೆ ಆಗದು. ಹೆಚ್ಚು ನೀರು ಬೇಡುವ ಬೆಳೆಗಳನ್ನು ಕೈಬಿಡಬೇಕು. ಕೆರೆಗಳ ಗಾತ್ರವನ್ನು ಹಿಗ್ಗಿಸಿ ಮಳೆ ನೀರು ಹಿಡಿದಿಟ್ಟುಕೊಳ್ಳುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT