ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌; ದಾನಿಗಳ ನೆರವಿಗೆ ಪ್ರಯತ್ನಿಸಿ: ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ,
Last Updated 26 ನವೆಂಬರ್ 2022, 4:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಡಯಾಲಿಸಿಸ್ ಹಾಗೂ ಕ್ಯಾನ್ಸರ್ ರೋಗಗಳ ಚಿಕಿತ್ಸೆಗೆ ಅಗತ್ಯವಿರುವ ಉಪಕರಣ ಖರೀದಿಸಲು ಸರ್ಕಾರದ ಅನುದಾನದ ಜತೆಗೆ ದಾನಿಗಳ ನೆರವು ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಸಿ.ಜಾಫರ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಒಬ್ಬ ರೋಗಿ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‍ಗೆ ಒಳಗಾಗಬೇಕು. ಇದಕ್ಕೆ ಅಗತ್ಯ ಇರುವ ಉಪಕರಣ ವ್ಯವಸ್ಥೆ ಮಾಡಬೇಕು. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ‘ಡಯಾಲಿಸಿಸ್‌ಗೆ ಅಳವಡಿಸಿದ ಉಪಕರಣಗಳು ದುರಸ್ತಿಗೆ ಬರುತ್ತಿವೆ. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆ ಉಂಟಾಗುತ್ತಿದೆ. ಜಿಲ್ಲಾ ಪಂಚಾಯಿತಿ ಅನುದಾನದಡಿ ಡಯಾಲಿಸಿಸ್ ಉಪಕರಣ ಖರೀದಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಕಲಿಕಾ ಕೊರತೆ ನಿವಾರಿಸಿ: ‘ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಮಕ್ಕಳು ಸರಿಯಾಗಿ ಶಾಲೆಗೆ ಹೋಗಿಲ್ಲ. ಇದರಿಂದ ಸಮರ್ಪಕವಾಗಿ ಕಲಿಕೆಯಾಗಿಲ್ಲ. ಪಠ್ಯಕ್ರಮ ಪೂರ್ಣಗೊಳಿಸುವುದಕ್ಕಿಂತ ವಿದ್ಯಾರ್ಥಿಗಳಿಗೆ ಕಲಿಕಾಂಶಗಳ ಕೊರತೆ ನಿವಾರಣೆಗೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಪರಿಹಾರ ಬೋಧನೆ ಕುರಿತು ಪರಿಶೀಲನೆ ನಡೆಸಬೇಕು’ ಎಂದು ಪಿ.ಸಿ.ಜಾಫರ್ ಸೂಚನೆ ನೀಡಿದರು.

‘ಆದರ್ಶ ವಿದ್ಯಾಲಯಗಳಲ್ಲಿ ಉತ್ತಮ ಕಟ್ಟಡ, ಪ್ರಯೋಗದ ಸೌಲಭ್ಯ ಇದೆ. ಮೂಲಸೌಲಭ್ಯ ಇಲ್ಲದೇ ಇರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪಟ್ಟಿ ತಯಾರಿಸಿ. ಅಂತಹ ಕಾಲೇಜುಗಳನ್ನು ಆದರ್ಶ ವಿದ್ಯಾಲಯಕ್ಕೆ ಸ್ಥಳಾಂತರಿಸಲು ಕ್ರಮವಹಿಸಬೇಕು’ ಎಂದರು.

ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ‘ಕಲಿಕಾ ಚೇತರಿಕೆಯ ಉಪಕ್ರಮಗಳನ್ನು ತಿಂಗಳುವಾರು ಪರಾಮರ್ಶೆ ಮಾಡಲಾಗುತ್ತಿದೆ. ಕಲಿಕಾ ಚೇತರಿಕೆಯ ಜೊತೆಗೆ ಪಠ್ಯಕ್ರಮ ಬೋಧನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ: ‘ರಾಜ್ಯದಲ್ಲಿ ಒಂದು ಸಾವಿರ ಪ್ರೌಢ ಶಾಲಾ ಅತಿಥಿ ಶಿಕ್ಷಕರು ಹಾಗೂ ಮೂರು ಸಾವಿರ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರು ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ವಾರದೊಳಗೆ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದರೆ ಸಾಕಾಗುವುದಿಲ್ಲ. ಇದರ ಜೊತೆಗೆ ವಸತಿ ಶಾಲೆಯ ವಿದ್ಯಾರ್ಥಿಗಳನ್ನು 6ನೇ ತರಗತಿಯಿಂದಲೇ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದರ ಮೂಲಕ ಜೆಇಇ, ನೀಟ್ ಸೇರಿದಂತೆ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ್ ಇದ್ದರು.

863 ಹಸು ಸಾವು: ಡಾ.ಕಲ್ಲಪ್ಪ

ಚರ್ಮಗಂಟು ರೋಗದಿಂದ ಜಿಲ್ಲೆಯಲ್ಲಿ 863 ರಾಸುಗಳು ಮೃತಪಟ್ಟಿವೆ. ಈ ಜಾನುವಾರು ಮಾಲೀಕರಿಗೆ ಪರಿಹಾರ ವಿತರಿಸಲು ₹ 1.93 ಕೋಟಿ ಅನುದಾನದ ಅಗತ್ಯವಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಸಭೆಗೆ ಮಾಹಿತಿ ನೀಡಿದರು.

‘ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ದಾಸ್ತಾನು ಇದೆ. ನಿರಂತರವಾಗಿ ಲಸಿಕೆ ಕಾರ್ಯ ನಡೆಯುತ್ತಿರುವುದರಿಂದ ಚರ್ಮಗಂಟು ರೋಗ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದರು.

ಸಿರಿಧಾನ್ಯ ಸಂಶೋಧನಾ ಕೇಂದ್ರಕ್ಕೆ ಪ್ರಸ್ತಾವ: ಜಾಫರ್‌ ಭರವಸೆ
ಸಿರಿಧಾನ್ಯ ತಳಿ ಸಂಶೋಧನಾ ಕೇಂದ್ರದ ಅಗತ್ಯತೆ ಕುರಿತು ಸಮಗ್ರ ವಿವರದೊಂದಿಗೆ ಪ್ರಸ್ತಾವ ಸಲ್ಲಿಸಿ. ಬಜೆಟ್‌ನಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಪಿ.ಸಿ.ಜಾಫರ್‌ ಭರವಸೆ ನೀಡಿದರು.

ಜಂಟಿಕೃಷಿ ನಿರ್ದೇಶಕ ರಮೇಶ್‍ಕುಮಾರ್ ಮಾತನಾಡಿ, ‘ರಾಣೆಬೆನ್ನೂರು ಹಾಗೂ ಹೈದರಾಬಾದ್‌ನಲ್ಲಿ ಮಾತ್ರ ಸಿರಿಧಾನ್ಯ ತಳಿ ಸಂಶೋಧನೆ ನಡೆಯುತ್ತಿದೆ. ಅಲ್ಲಿನ ತಳಿಗಳು ಜಿಲ್ಲೆಯ ವಾತಾವರಣಕ್ಕೆ ಹೊಂದುವುದಿಲ್ಲ. ಸಿರಿಧಾನ್ಯ ತಳಿ ಸುಧಾರಣೆ, ಸಂಸ್ಕರಣೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರದ ಅಗತ್ಯವಿದೆ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT