ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಗೆ ಹಿನ್ನಡೆಯಾದರೆ ಶಿಸ್ತು ಕ್ರಮ: ಶಶಿಕಲಾ ಸುರೇಶ್‌ಬಾಬು

ಪ್ರಗತಿ ಪರೀಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು
Last Updated 23 ನವೆಂಬರ್ 2020, 17:28 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಗತಿ ಸಾಧಿಸುವಲ್ಲಿ ಹಿನ್ನಡೆಯಾಗಿದೆ. ಪಿಡಿಒಗಳು, ಎಂಜಿನಿಯರ್‌ಗಳು ಕಚೇರಿಯಲ್ಲಿ ಸಿಗುವುದೇ ಕಷ್ಟವಾಗಿದೆ. ವಿವಿಧ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ನಿರೀಕ್ಷಿತ ಗುರಿ ಸಾಧಿಸಿಲ್ಲ.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ 2020- 21ನೇ ಸಾಲಿನ ಅಕ್ಟೋಬರ್ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುರಿತು ಈ ಬಗ್ಗೆ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎನ್‌ಆರ್‌ಇಜಿಪಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಕೆಲ ಪಂಚಾಯಿತಿಗಳು ಉತ್ತಮ ಸಾಧನೆ ಮಾಡಿವೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಅಭಿವೃದ್ಧಿ ಕೈಗೊಳ್ಳಬೇಕು. ಕೂಲಿಕಾರರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗಬೇಕು. ಪ್ರಗತಿಗೆ ಹಿನ್ನಡೆಯಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಅಧಿಕಾರಿಗಳು ಯಾವಾಗ ಸಿಗುತ್ತೀರಾ ಎಂಬುದಾಗಿ ಕಚೇರಿ ಮುಂಭಾಗದ ನಾಮಫಲಕದಲ್ಲಿ ಹಾಕಿ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ, ಅಲೆದಾಡುವುದು ತಪ್ಪುವುದಿಲ್ಲ. ಎಂಜಿನಿಯರ್‌ಗಳು ಮಾಡುತ್ತಿರುವ ಕೆಲಸಗಳ ಬಗ್ಗೆಯೂ ಮಾಹಿತಿ ಇಲ್ಲವಾಗಿದೆ. ಕರ್ತವ್ಯ ಪ್ರಜ್ಞೆ ಅರಿತು ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು, ‘ಅಧಿಕಾರಿಗಳು ಮನಸು ಮಾಡಿ ಕೆಲಸ ನಿರ್ವಹಿಸಿದರೆ ಉತ್ತಮ ಪಂಚಾಯಿತಿಯನ್ನಾಗಿ ಮಾಡುವುದು ಕಷ್ಟವಲ್ಲ. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಅರಿತು ಅಸಕ್ತಿಯಿಂದ ಕರ್ತವ್ಯ ಮಾಡಿದಾಗ ಮಾತ್ರ ಪಂಚಾಯಿತಿಗಳು ಪ್ರಗತಿ ಹೊಂದಲು ಸಾಧ್ಯ’ ಎಂದು ಸಲಹೆ ನೀಡಿದರು.

ಸದಸ್ಯೆ ಸೌಭಾಗ್ಯ ಬಸವರಾಜನ್, ‘ಕೆಲ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಆಪರೇಟರ್‌ಗಳ ಸಮಸ್ಯೆ ಇದೆ. ಅದನ್ನು ಮೊದಲು ಸರಿಪಡಿಸಬೇಕಿದೆ. ಕೆಲವೆಡೆ ಪಿಡಿಒಗಳಿಗೆ ಎರಡು ಪಂಚಾಯಿತಿಗಳ ಉಸ್ತುವಾರಿ ನೀಡಲಾಗಿದೆ. ಇದರಿಂದಲೂ ಕೆಲ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸದಸ್ಯ ಗುರುಮೂರ್ತಿ, ‘ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ತಯಾರಿಸಲು ನಿರ್ಮಿಸಿರುವ ಸೋಲಾರ್ ಹಾಗೂ ಪವನಯಂತ್ರ ಕಂಪನಿಗಳು ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ. ಇದರಿಂದ ಪಂಚಾಯಿತಿಗಳಿಗೆ ನಷ್ಟವಾಗುತ್ತಿದೆ. ತೆರಿಗೆ ವಸೂಲಿಗೆ ಕ್ರಮ ಕೈಗೊಂಡರೆ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ’ ಎಂದು ಸಭೆಯ ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ್, ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT