ಭಾನುವಾರ, ಜುಲೈ 25, 2021
22 °C
ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಭೆಯಲ್ಲಿ ಚರ್ಚೆ

ಬಳಸಿದ ಮಾಸ್ಕ್‌ ಬಿಸಾಡಿದರೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಬಳಸುವ ಮಾಸ್ಕ್‌ ಮೇಲೆ ವೈರಸ್‌ 72 ಗಂಟೆ ಜೀವಂತವಾಗಿ ಇರಬಲ್ಲದು. ಹೀಗಾಗಿ, ಮುಖಗವಸುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ ಎಂದು ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಎಚ್ಚರಿಕೆ ನೀಡಿದೆ.

ಘನ ತ್ಯಾಜ್ಯ ನಿರ್ವಹಣೆ ನಿಯಮಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿದ ಆದೇಶದ ಅನುಷ್ಠಾನದ ಕುರಿತು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಾರ್ಯಪಡೆ ಸಭೆ ನಡೆಯಿತು.

ಮಾಸ್ಕ್‌ ಬಳಕೆ ಮಾಡಿದ ನಂತರ ಸಣ್ಣದಾಗಿ ಕತ್ತರಿಸಿ ಮನೆಯಲ್ಲಿಯೇ ಸುರಕ್ಷಿತವಾಗಿ ಇಡಿ. 72 ಗಂಟೆ ಬಳಿಕ ನಗರಸಭೆಯ ಕಸದ ವಾಹನಕ್ಕೆ ಹಾಕಿರಿ. ಮಾಸ್ಕ್ ವಿಲೇವಾರಿ ಮಾಡಿದ ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ ಎಂದು ಸಭೆ ಸಲಹೆ ನೀಡಿತು.

‘ಕೋವಿಡ್‌ ಚಿಕಿತ್ಸೆಯಿಂದ ಸೃಷ್ಟಿಯಾಗುವ ತ್ಯಾಜ್ಯದ ವಿಲೇವಾರಿ ಹೊಣೆಯನ್ನು ವಿ.ವಿ.ಇನ್‌ಸೈನ್‌ ಸಂಸ್ಥೆಗೆ ವಹಿಸಲಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಹೆಲ್ತ್‌ ಕೇರ್‌ ಕೇಂದ್ರಗಳಲ್ಲಿ ಬಳಸಿದ ಮಾಸ್ಕ್‌ ಹಾಗೂ ಪಿಪಿಇ ಕಿಟ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌ ಸಭೆಗೆ ಮಾಹಿತಿ ನೀಡಿದರು.

ಹೊಸದುರ್ಗ ಪುರಸಭೆಗೆ ಮೆಚ್ಚುಗೆ

‘ಘನ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಹೊಸದುರ್ಗ ಪುರಸಭೆ ಉತ್ತಮ ಕಾರ್ಯ ಕೈಗೊಂಡಿದೆ. ಜಿಲ್ಲೆಯ ಉಳಿದ ನಗರ ಸ್ಥಳೀಯ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸಬಹುದು. ತ್ಯಾಜ್ಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ತೋರಬಾರದು’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್ ಪ್ರಿಯಾ ಎಚ್ಚರಿಕೆ ನೀಡಿದರು.

ಮನೆ–ಮನೆ ಕಸ ಸಂಗ್ರಹ, ಹಸಿ ಮತ್ತು ಒಣ ಕಸ ವಿಂಗಡಣೆ, ಕಾಂಪೋಸ್ಟ್‌ ಹಾಗೂ ಎರೆಹುಳು ಗೊಬ್ಬರ ತಯಾರಿಕೆ, ಸ್ವಚ್ಛತೆ ಕಾಪಾಡುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಇ-ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ, ಪ್ಲಾಸ್ಟಿಕ್ ನಿರ್ಮೂಲನೆ ಕುರಿತು ಚರ್ಚೆ ನಡೆಸಲಾಯಿತು. ಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಯ ಪರಿಸರ ಎಂಜಿನಿಯರುಗಳನ್ನು ಜಿಲ್ಲಾಧಿಕಾರಿ ತರಾಟೆ ತೆಗೆದುಕೊಂಡರು.

ಇ-ತ್ಯಾಜ್ಯ ಸಂಗ್ರಹಕ್ಕೆ ಸೂಚನೆ

ಇ–ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಕೇಂದ್ರ ತೆರೆಯಲು ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ವಾರದ ಗಡುವು ನೀಡಿದರು. ಚಿತ್ರದುರ್ಗ ಹಾಗೂ ಹೊಸದುರ್ಗ ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನಿರುಪಯುಕ್ತ ಟಿವಿ, ರೇಡಿಯೊ, ಮೊಬೈಲ್, ಫ್ರಿಜ್, ಕಂಪ್ಯೂಟರ್ ಸೇರಿ ಎಲೆಕ್ಟ್ರಾನಿಕ್‌ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಸಾರ್ವಜನಿಕರು ಸಾಮಾನ್ಯ ಕಸದೊಂದಿಗೆ ಹಾಕುವುದು ಅತ್ಯಂತ ಅಪಾಯಕಾರಿ. ಇಂತಹ ಇ-ತ್ಯಾಜ್ಯ ಸಂಗ್ರಹಣೆಗೆ ಕಚೇರಿ ಆವರಣದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಲಾಗಿತ್ತು. ಈ ಸೂಚನೆಯನ್ನು ಹೊಸದುರ್ಗ, ಚಿತ್ರದುರ್ಗ ಹೊರತುಪಡಿಸಿ ಉಳಿದೆಡೆ ಪಾಲನೆ ಆಗಿಲ್ಲ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೆರೆ ಒಡಲಿಗೆ ಮಾಂಸದ ತ್ಯಾಜ್ಯ

ಕುರಿ, ಕೋಳಿ ಹಾಗೂ ಮೀನಿನಂತಹ ಮಾಂಸದ ತ್ಯಾಜ್ಯ ವೈಜ್ಞಾನಿಕ ವಿಲೇವಾರಿಯ ಬದಲಾಗಿ, ಕೆರೆಯ ಒಡಲು ಸೇರುತ್ತಿರುವ ಸಂಗತಿ ಸಭೆಯಲ್ಲಿ ಚರ್ಚೆಯಾಯಿತು.

ಮಾಂಸದ ತ್ಯಾಜ್ಯವನ್ನು ಕೆರೆಯ ಮೀನುಗಳಿಗೆ ನೀಡುತ್ತಿರುವ ಬಗ್ಗೆ ದೂರು ಕೇಳಿಬರುತ್ತಿವೆ ಎಂದು ಯೋಜನಾ ನಿರ್ದೇಶಕ ರಾಜಶೇಖರ್‌ ಪ್ರಸ್ತಾಪಿಸಿದರು.

ಇದಕ್ಕೆ ಅಸಮಾಧಾನ ಹೊರಹಾಕಿದ ಜಿಲ್ಲಾಧಿಕಾರಿ, ‘ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ನಗರ ಸ್ಥಳೀಯ ಸಂಸ್ಥೆಗಳು ಮಾಂಸ ತ್ಯಾಜ್ಯ ಸಂಗ್ರಹಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಬೇಕು. ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಹೆಚ್ಚುವರು ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಕಾರ್ಯಪಾಲಕ ಎಂಜಿನಿಯರ್‌ ಕಾಳಪ್ಪ, ಸಹಾಯಕ ಎಂಜಿನಿಯರ್ ಕೆ.ಎನ್.ಸ್ವಾಮಿ, ಪರಿಸರ ಅಧಿಕಾರಿ ಪ್ರಕಾಶ್ ಸಭೆಯಲ್ಲಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.