ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದನಗಳ ಓಟದ ವಿಶಿಷ್ಟ ಆಚರಣೆ

ಆಧುನೀಕರಣಕ್ಕೆ ಮಾಸದ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ
Last Updated 28 ಅಕ್ಟೋಬರ್ 2022, 7:21 IST
ಅಕ್ಷರ ಗಾತ್ರ

ಚಳ್ಳಕೆರೆ: ದೀಪಾವಳಿ ಹಾಗೂ ದನಗಳ ಗೂಡಿನ ಹಬ್ಬದ ಪ್ರಯುಕ್ತ ತಾಲ್ಲೂಕಿನ ನನ್ನಿವಾಳ ಕಟ್ಟೆಮನೆ ವ್ಯಾಪ್ತಿಯ ಬೊಮ್ಮದೇವರಹಟ್ಟಿ ಗ್ರಾಮದ ಬಳಿ ಬಯಲು ಪ್ರದೇಶದಲ್ಲಿ ಗುರುವಾರ ಮ್ಯಾಸಬೇಡ ಸಮುದಾಯದ ದೇವರ ಗೂಡಿನ ದನಗಳ ಓಟದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು.

ಸಮುದಾಯದ ಒಳಿತಿಗೆ ಮತ್ತು ಪಶು ಸಂಪತ್ತಿನ ರಕ್ಷಣೆಗೆ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿ ಕುಲ ಹಾಗೂ ಕಳ್ಳುಬಳ್ಳಿಗೆ ಸಾಂಸ್ಕೃತಿಕ ಅನನ್ಯತೆಯನ್ನು ತಂದುಕೊಟ್ಟ ಗಾದ್ರಿಪಾನಾಯಕ, ಜಗಲೂರು ಪಾಪನಾಯಕ, ಯರಗಂಟನಾಯಕ, ದಡ್ಡಿಸೂರನಾಯಕ, ಬಂಗಾರದೇವರು, ಓಬಳದೇವರು, ಬೋಸೆದೇವರು ಮುಂತಾದ ಪಶುಪಾಲಕರನ್ನೇ ಮನೆದೇವರನ್ನಾಗಿ ಮಾಡಿಕೊಂಡು ಆರಾಧಿಸುತ್ತ ಬಂದಿದ್ದಾರೆ ಮ್ಯಾಸಬೇಡ ಸಮುದಾಯದವರು.

ದೀಪಾವಳಿ ಸಂದರ್ಭದಲ್ಲಿ ನಡೆಯುವ ದೇವರದನಗಳ ಗೂಡಿನ ಓಟದ ವಿಶಿಷ್ಟ ಆಚರಣೆ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಗೂಡಿನ ಹಬ್ಬದ ಆಚರಣೆಗೆ ಹೊರಡುವಾಗ ಕಿಲಾರಿಗಳು, ದೇವರ ಎತ್ತುಗಳು ಹಾಗೂ ಕಟ್ಟೆಮನೆಯ ದೊರೆ, ಸಮುದಾಯದ ಮುಖಂಡರನ್ನು ನಡೆಮುಡಿಯ ಮೇಲೆ ಕರೆದುಕೊಂಡು ಹೋಗುವ ಪದ್ಧತಿ ಇದೆ.

ಬಯಲು ಪ್ರದೇಶದಲ್ಲಿ ಬಂದ್ರೆ, ತುಗ್ಗಲಿ, ಎಕ್ಕೆ, ಕಾರೆ ಮತ್ತು ತಂಗಟೆ ಹಸಿರು ಸೊಪ್ಪಿನಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಮನೆದೈವ– ಅಮಾಸೆ ದೈವಗಳ ಗುಬ್ಬ, ಗುಡ್ಲುಗಳಿಗೆ (ಪದಿ) ಚೆಂಡುಹೂವು, ಸೇವಂತಿಗೆ, ತಂಗಟೆ, ಮಲ್ಲಿಗೆ ಹಲವು ಬಗೆಯ ಹೂವುಗಳಿಂದ ಅಲಂಕಾರ ಮಾಡಿದ ಗುಬ್ಬಗಳಿಗೆ ಬಾಳೆಹಣ್ಣು ಮತ್ತು ಬೆಲ್ಲದಿಂದ ಪೂಜಿಸಿದರು.

ಬೆಳಿಗ್ಗೆ 9 ಗಂಟೆಯ ನಂತರ ಸೂರ್ಯ ಏರಿಬರುವ ಹೊತ್ತಲ್ಲೇ ಕಿಲಾರಿಗಳು, ಬೊಮ್ಮದೇವರು, ಬಂಗಾರು ದೇವರು, ಗಾದ್ರಿದೇವರು, ಓಬಳದೇವರ ಹಾಗೂ ಮುತ್ತೇಗಾರರ ದನಗಳನ್ನು ಉರುಮೆ ವಾದ್ಯದೊಂದಿಗೆ ಕೇಕೆ ಹಾಕುತ್ತ ಉತ್ತರ–ದಕ್ಷಿಣವಾಗಿ ಮೂರು ಬಾರಿ ನಾ ಮುಂದು ತಾ ಮುಂದು ಎಂದು (ಮೆರೆಸು) ಓಡಿಸಿದರು.

ಬೆಲ್ಲ, ಮಂಡಕ್ಕಿ, ಬಾಳೆಹಣ್ಣು ಬೆರೆಸಿದ ‘ಚೂರುಬೆಲ್ಲ’ದ ಪ್ರಸಾದವನ್ನು ಭಕ್ತರು ಮೇಲೆ ಎಸೆದು ಆ ದನಗಳನ್ನು ಮುಟ್ಟಿ ನಮಸ್ಕಾರ ಮಾಡಿದರು.

ತಂದಿದ್ದ ಮೀಸಲು ಬಾಳೆಹಣ್ಣು ಮತ್ತು ನೈವೇದ್ಯವನ್ನು ದನಗಳ ಕಿಲಾರಿಗಳಿಗೆ ಕೊಟ್ಟು ಕೈ ಮುಗಿದರು. ಹಸಿರು ಗುಬ್ಬದ ಮುಂಭಾಗದಲ್ಲಿ ಹಾಸಿದ ಕರಿಕಂಬಳಿ ಜಾಡಿಗೆ ಪೂಜಾರಿ ಹಾಗೂ ದಾಸಯ್ಯಗಳು ಪೂಜೆ ಸಲ್ಲಿಸಿದ ನಂತರ, ತೆಂಗಿನಕಾಯಿ ಒಡೆದು ಬಾಳೆಹಣ್ಣಿನ ರಾಶಿ ಹಾಕಿ, ಭಕ್ತರಿಗೆ ಪ್ರಸಾದವಾಗಿ ಹಂಚಿದರು.

ಕಾರೆ, ಜಂಬೆ ಕಟ್ಟಿಗೆ ಮತ್ತು ಒಣಗಿದ ಸಗಣಿ (ಕುರುಳು) ಸುಟ್ಟು ಕೆಂಡ ಮಾಡಿ ದೈಗಳಿಗೆ ದೂಪ ಹಾಕುತ್ತಾರೆ. ಸುಟ್ಟ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುವ ಪರಂಪರೆ ಈ ಆಚರಣೆಯಲ್ಲಿ ಈಗಲೂ ಇದೆ.

ಶಾಸ್ತ್ರೋಕ್ತವಾಗಿ ಉಪವಾಸ ವ್ರತಹಿಡಿದ ಪೂಜಾರಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಹಸುವಿನಿಂದ ಕರೆದ ಮೀಸಲು ಹಾಲನ್ನು ಹೊಸ ಮಣ್ಣಿನ ಮಡಿಕೆಯಲ್ಲಿ ಕಾಯಿಸಬೇಕು. ನಂತರ ಹೆಪ್ಪು ಹಾಕಿ ಆ ಕೆನೆ ಮೊಸರಿನಿಂದ ಬೆಣ್ಣೆ ತೆಗೆದು ಅದನ್ನು ಕಾಯಿಸಿ ಮೀಸಲು ತುಪ್ಪದ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ದೇವರ ದನಗಳ ಓಟವನ್ನು ನೋಡಲು ನನ್ನಿವಾಳ ಕಟ್ಟೆಮನೆ ವ್ಯಾಪ್ತಿಯ ನೂರಾರು ಭಕ್ತರು ಸೇರಿದ್ದರು. ಸಾಮೂಹಿಕ ದಾಸೋಹದ ಮೂಲಕ ಈ ಆಚರಣೆ ಅಂತ್ಯಗೊಂಡಿತು.

ಈ ದೇವರ ದನಗಳ ಓಟದ ಆಚರಣೆ ಆಧುನಿಕತೆಗೆ ಮಾಸದೆ ಹಾಗೆಯೇ ಉಳಿದುಕೊಂಡು ಬಂದಿರುವುದು ವಿಶೇಷ.

ತಹಶೀಲ್ದಾರ್ ಎನ್.ರಘುಮೂರ್ತಿ, ಗ್ರಾಮದ ಮುಖಂಡ ದೊರೆಬೈಯಣ್ಣ, ದೊರೆ ನಾಗರಾಜ, ಬಿಜೆಪಿ ಮುಖಂಡ ರಾಮದಾಸ್, ಜಯರಾಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT