ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಯ್ಯನಹಟ್ಟಿ ಗ್ರಾಮಸ್ಥರ ಗೋಳು ಕೇಳೋರಿಲ್ಲ!

ಕಲುಷಿತ ನೀರು ಸೇವನೆಯಿಂದ ಅನಾರೋಗ್ಯ, ಪಿಡಿಒ ನಿರ್ಲಕ್ಷ್ಯ,
Last Updated 6 ಜುಲೈ 2018, 14:06 IST
ಅಕ್ಷರ ಗಾತ್ರ

ಹೊಳಲ್ಕೆರೆ:ತಾಲ್ಲೂಕಿನ ಸಣ್ಣಯ್ಯನಹಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮಕ್ಕಳು, ವೃದ್ಧರೂ ಸೇರಿದಂತೆ ಹೆಚ್ಚು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಒಂದು ತಿಂಗಳಿನಿಂದ ಗ್ರಾಮದಲ್ಲಿ ಕಲುಷಿತ ನೀರು ಬರುತ್ತಿದ್ದು, ಗ್ರಾಮಸ್ಥರು ಅನಿವಾರ್ಯವಾಗಿ ಇದೇ ನೀರು ಕುಡಿಯುತ್ತಿದ್ದಾರೆ. ಇದರಿಂದ ಗ್ರಾಮದ ಸಿದ್ದೇಶ, ಸ್ವಾತಿ, ಯಶೋದಮ್ಮ, ಗಂಗಮ್ಮ, ರಂಗನಾಥ, ಸಹನಾ, ಭೈರಪ್ಪ, ರಂಗಪ್ಪ, ಸಾಕ್ಷಿ, ನಾಗಪ್ಪ, ಮಲ್ಲಿ ನಾಗಪ್ಪ, ಲೋಕೇಶ, ಗಂಗಮ್ಮ, ತಿಮ್ಮಜ್ಜಿ, ರಾಜಪ್ಪ ಮತ್ತಿತರರು ಕಾಯಿಲೆಗೆ ತುತ್ತಾಗಿದ್ದಾರೆ.

‘ಗ್ರಾಮಕ್ಕೆ ನೀರು ಸರಬರಾಜಾಗುತ್ತಿದ್ದ ಕೊಳವೆಬಾವಿ ಬೇಸಿಗೆಯಲ್ಲಿ ಬತ್ತಿ ಹೋಗಿತ್ತು. ಆಗ ಬೇರೊಂದು ಕೊಳವೆ ಬಾವಿಯಿಂದ ನೀರು ಬಿಟ್ಟರು. ಈಗ ನಿಂತು ಹೋಗಿದ್ದ ಕೊಳವೆ ಬಾವಿಗೆ ಮೋಟಾರ್ ಬಿಟ್ಟಿದ್ದು, ನೀರು ಸರಬರಾಜು ಮಾಡಲಾಗುತ್ತಿದೆ. ಕೊಳವೆಬಾವಿಯಿಂದ ನೀರು ಸಂಗ್ರಹಿಸುವ ಮಿನಿಟ್ಯಾಂಕ್ ಸುತ್ತ ಹುಲ್ಲು, ಗಿಡ-ಗಂಟಿಗಳು ಬೆಳೆದಿದ್ದು, ಜನ ಕಸದಲ್ಲೇ ನೀರು ಹಿಡಿದುಕೊಳ್ಳುವ ಪರಿಸ್ಥಿತಿ ಇದೆ. ಗ್ರಾಮದಲ್ಲಿನ ಚರಂಡಿಗಳು ತುಂಬಿದ್ದು, 2 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಒಂದು ತಿಂಗಳಿನಿಂದ ಗ್ರಾಮದ 50ಕ್ಕೂ ಹೆಚ್ಚು ಜನ ಹೊಳಲ್ಕೆರೆ, ಎನ್.ಜಿ. ಹಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಂತಿ, ಭೇದಿ ಬಂದು ಚಿಕಿತ್ಸೆ ಪಡೆದಿದ್ದಾರೆ’ ಎಂದು ಗ್ರಾಮದ ಮುಖಂಡ ರಘು ಹೇಳಿದರು.

‘ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ಇದ್ದರೂ, ಅದಕ್ಕೆ ನೀರು ತುಂಬಿಸುತ್ತಿಲ್ಲ. ಕೊಳವೆ ಬಾವಿಯಿಂದ ನೇರವಾಗಿ ಮಿನಿ ಟ್ಯಾಂಕಿಗೆ ನೀರು ಹರಿಸುತ್ತಿದ್ದು, ಇದು ನಿರಂತರ ಜ್ಯೋತಿ ಸಂಪರ್ಕ ಹೊಂದಿಲ್ಲ. 3 ಫೇಸ್ ವಿದ್ಯುತ್ ಇದ್ದಾಗ ಮಾತ್ರ ನೀರು ಬಿಡುತ್ತಾರೆ. ವಿದ್ಯುತ್ ಕೈ ಕೊಟ್ಟರೆ, ಕುಡಿಯುವ ನೀರಿಗಾಗಿ ದೂರದ ಉಗಣೆಕಟ್ಟೆ ವಡ್ಡರ ಹಟ್ಟಿ, ಎನ್.ಜಿ. ಹಳ್ಳಿ ಗೇಟ್ ಗೆ ಹೋಗಬೇಕು’ ಎನ್ನುತ್ತಾರೆ ಅವರು.

‘ಗ್ರಾಮದಲ್ಲಿರುವ ಮತ್ತೊಂದು ಕೊಳವೆಬಾವಿಯ ಮೋಟಾರ್ ಸುಟ್ಟುಹೋಗಿದ್ದು, ಒಂದು ತಿಂಗಳ ಹಿಂದೆ ಕೊಳವೆಬಾವಿಯಿಂದ ಪೈಪ್ ತೆಗೆದು ಹೊರಗೆ ಹಾಕಿದ್ದು, ಎನ್.ಜಿ. ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ್ ಈ ಕಡೆ ತಿರುಗಿ ನೋಡಿಲ್ಲ. ಅವರಿಗೆ ಫೋನ್ ಮಾಡಿ ಸಮಸ್ಯೆ ಹೇಳಿದರೆ ‘ನೀವು ಏನಾದ್ರೂ ಮಾಡಿಕೊಳ್ಳಿ. ನಾನು ನಿಮ್ಮ ಊರಿಗೆ ಬರುವುದಿಲ್ಲ’ ಎನ್ನುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗ್ರಾಮದ ಮಧ್ಯದಲ್ಲೇ ಆಳವಾದ ತೆರೆದ ಬಾವಿ ಇದ್ದು, ಅಪಾಯಕಾರಿಯಾಗಿದೆ. ಕಳೆದ ವಾರವಷ್ಟೇ 2 ಮೇಕೆಗಳು ಬಾವಿಯಲ್ಲಿ ಬಿದ್ದಿದ್ದವು. ಬಾವಿಯ ಪಕ್ಕದಲ್ಲಿ ಮಣ್ಣು ಇರುವುದರಿಂದ ಸುಲಭವಾಗಿ ಬಾವಿಕಟ್ಟೆ ಹತ್ತಬಹುದು. ಮೊನ್ನೆ 2 ವರ್ಷದ ಮಗುವೊಂದು ಬಾವಿಕಟ್ಟೆ ಏರಿ ಕುಳಿತಿತ್ತು. ತಕ್ಷಣವೇ ನೋಡಿಕೊಂಡಿದ್ದರಿಂದ ಅನಾಹುತ ತಪ್ಪಿತು. ಬಾವಿಯನ್ನು ಮುಚ್ಚಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪಿಡಿಒ ಗಮನ ಹರಿಸುತ್ತಿಲ್ಲ. ನಮ್ಮ ಊರಿನಲ್ಲಿ 35 ಮನೆಗಳಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಲ್ಲ. ಇದರಿಂದ ಗ್ರಾಮ ಪಂಚಾಯಿತಿಯವರು ನಮ್ಮ ಊರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಗ್ರಾಮದ ನವೀನ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT