ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಅಭಿವೃದ್ಧಿ ಕಡೆಗಣನೆ ಸಲ್ಲದು

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ. ಮಹೇಶ್
Last Updated 20 ಜನವರಿ 2020, 16:33 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದಲಿತ, ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಕಡೆಗಣನೆ ಸಲ್ಲದು. ಸರ್ಕಾರ ನೀಡುವಂಥ ಸೌಲಭ್ಯ ಸಮುದಾಯಗಳಿಗೆ ತಲುಪಿಸಿ’ ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ. ಮಹೇಶ್ ಅಧಿಕಾರಿಗಳಿಗೆ ಒತ್ತಾಯಿಸಿದರು.

ಬಂಜಾರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ, ನಗರಸಭೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಸ್ಪೃಶ್ಯತೆ ನಿವಾರಣೆ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

‘ದಲಿತರು ವಾಸಿಸುವ ಕಾಲೊನಿ, ಹಟ್ಟಿಗಳಿಗೆ ಹೈಮಾಸ್ಟ್ ದೀಪ ಅಳವಡಿಸಲಿಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಬಹುತೇಕ ದಲಿತರೇತರ ಕಾಲೊನಿ, ಹಟ್ಟಿಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸುವ ಮೂಲಕ ದಲಿತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಂತಹ ಅನೇಕ ಯೋಜನೆಗಳ ಅನುದಾನ ದಲಿತ ಸಮುದಾಯಗಳಿಗೆ ತಲುಪುತ್ತಿಲ್ಲ. ಆದ್ದರಿಂದ ಈ ಕುರಿತು ಎಚ್ಚರವಹಿಸಿ’ ಎಂದು ಸಮುದಾಯದವರಿಗೆ ಸಲಹೆ ನೀಡಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯಗಳ ಕಲ್ಯಾಣಾಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸಬಾರದು ಎಂಬ ನಿಯಮವಿದೆ. ಹೀಗಿದ್ದರೂ ಗ್ರಾಮ ಪಂಚಾಯಿತಿ ಪಿಡಿಒ ಸೇರಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಬಳಸುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಈ ಹಿಂದೆಯಷ್ಟೇ ಅಲ್ಲದೆ, ಈಗಲೂ ಹಲ್ಲೆ, ದೌರ್ಜನ್ಯ, ಜಾತಿನಿಂದನೆ ಸೇರಿ ಸಾಕಷ್ಟು ನೋವು ಅನುಭವಿಸುತ್ತಲೇ ಇದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾದ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ’ ಎಂದು ವಿಷಾದಿಸಿದರು.

‘ಸರ್ಕಾರದ ಅಂಕಿ-ಅಂಶದ ಪ್ರಕಾರ 2018ರಲ್ಲಿ 2,140 ಪ್ರಕರಣ ದಾಖಲಾಗಿದ್ದು, ಕೇವಲ 46 ಪ್ರಕರಣಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹರಾಜು, ಪ್ರಕಾಶ್‌ಮೂರ್ತಿ, ಡಿವೈಎಸ್‌ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಜಿ.ಟಿ. ಹನುಮಂತರಾಜು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಮ್ಮ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ನರೇನಹಳ್ಳಿ ಅರುಣ್‌ಕುಮಾರ್, ಕೆ. ಕೃಷ್ಣಪ್ಪ, ಭಕ್ತಪ್ರಹ್ಲಾದ್, ಸಿದ್ದಮ್ಮ, ಫಾದರ್ ಎಂ.ಎ. ರಾಜು ಅವರೂ ಇದ್ದರು.

ಜಿಲ್ಲಾಡಳಿತದ ವಿರುದ್ಧ ಘೋಷಣೆ:ದೌರ್ಜನ್ಯ ತಡೆ ಕಾಯ್ದೆ ಯಥಾವತ್ತಾಗಿ ಅನುಷ್ಠಾನವಾಗಬೇಕು. ನಾಮಕಾವಸ್ಥೆಗೆ ಇಂತಹ ಕಾರ್ಯಕ್ರಮ ಮಾಡಬಾರದು ಎಂದು ಆಗ್ರಹಿಸಿ ದಲಿತ ಮುಖಂಡ ಟಿ.ಡಿ. ರಾಜಗಿರಿ ಸೇರಿ ಕೆಲವರು ವೇದಿಕೆ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದರು.

ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಪ್ರೊ.ಸಿ.ಕೆ. ಮಹೇಶ್ ಸೇರಿ ಅಧಿಕಾರಿಗಳು ಸಮಾಧಾನಪಡಿಸಲು ಮುಂದಾದರೂ ಅವರ ಮಾತಿಗೆ ಕಿವಿಗೊಡದ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದು ಪ್ರತಿಭಟಿಸುವ ಸ್ಥಳವಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಎಂದು ಉಪವಿಭಾಗಾಧಿಕಾರಿ ಮನವೊಲಿಸಲು ಯತ್ನಿಸಿದರು. ಆದರೂ ದಲಿತ ವಿರೋಧಿ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂಬುದಾಗಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಪೊಲೀಸರು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗಡೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT