ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ವಾಣಿವಿಲಾಸ ಜಲಾಶಯ ಬಳಸಬೇಡಿ: ಶಾಸಕಿ ಪೂರ್ಣಿಮಾ

Last Updated 26 ಅಕ್ಟೋಬರ್ 2022, 4:16 IST
ಅಕ್ಷರ ಗಾತ್ರ

ಹಿರಿಯೂರು: ಚುನಾವಣೆಯಲ್ಲಿ ಗೆಲುವು–ಸೋಲು ಸಹಜ. ಆದರೆ ಚುನಾವಣೆ ಸಮೀಪಿಸಿರುವ ಹೊಸ್ತಿಲಲ್ಲಿ ವಾಣಿವಿಲಾಸ ಜಲಾಶಯದ ಕೋಡಿಯನ್ನು ಇಳಿಸುವ ಪ್ರಸ್ತಾವ ಸರಿಯಲ್ಲ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಾಕೀತು ಮಾಡಿದ್ದಾರೆ.

ಪ್ರಸ್ತುತ ಜರ್ಮನಿಯಲ್ಲಿರುವ ಶಾಸಕರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಮೈಸೂರು ಒಡೆಯರ್ ಇಚ್ಛಾಶಕ್ತಿಯ ಫಲವಾಗಿ ನಿರ್ಮಾಣಗೊಂಡಿರುವ ವಾಣಿವಿಲಾಸ ಜಲಾಶಯ ಬಯಲುಸೀಮೆಯ ಜನರ ಜಲಪಾತ್ರೆ ಇದ್ದಂತೆ. 89 ವರ್ಷದ ನಂತರ ಎರಡನೇ ಬಾರಿಕೆ ಜಲಾಶಯ ಕೋಡಿ ಬಿದ್ದಿದ್ದು, ಇಡೀ ಜಿಲ್ಲೆಯ ಜನ ಸಂತಸಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಜಲಾಶಯದ ಕೋಡಿಯನ್ನು 124 ಅಡಿಗೆ ಇಳಿಸಬೇಕೆಂಬ ಪ್ರಸ್ತಾವ ಇಟ್ಟಿರುವುದು ಖಂಡನೀಯ ಎಂದು ಶಾಸಕರು ತಿಳಿಸಿದರು.

ಜಲಾಶಯ ನಿರ್ಮಾಣದಿಂದ 32 ಹಳ್ಳಿಗಳು ಜಮೀನು ಸಹಿತ ಮುಳುಗಡೆಯಾಗಿದ್ದರೆ, 18 ಹಳ್ಳಿಗಳು ಭಾಗಶ: ಮುಳುಗಡೆಯಾಗಿತ್ತು. ಜಲಾಶಯ ನಿರ್ಮಿಸುವ ಮೊದಲು, ಅಚ್ಚು ಕಟ್ಟು ಪ್ರದೇಶ, ಕೋಡಿ ಬಿದ್ದಲ್ಲಿ ಮುಳುಗಡೆಯಾಗುವ ಹಿನ್ನೀರಿನ ಪ್ರದೇಶ, ಗಡಿಗಳನ್ನು ಕರಾರುವಕ್ಕಾಗಿ ಗುರುತಿಸಲಾಗಿದೆ. ಹಿನ್ನೀರು ಹೆಚ್ಚಿರುವ ಕಾರಣಕ್ಕೆ ಸಂತ್ರಸ್ತರಾದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಹಾಗೂ ಪರ್ಯಾಯ ಭೂಮಿ ಕೊಡಿಸುವ ವಿಚಾರಕ್ಕೆ ನನ್ನ ಸಹಮತವಿದೆ. ಆದರೆ ಜಲಾಶಯದ ಕೋಡಿ ಇಳಿಸುವ ಮೂಲಕ ಸಂತ್ರಸ್ತರ ರಕ್ಷಣೆ ಮಾಡುತ್ತೇವೆಂಬ ಮತಬ್ಯಾಂಕ್ ರಾಜಕೀಯಕ್ಕೆ ತೀವ್ರ ವಿರೋಧವಿದೆ ಎಂದು ಪೂರ್ಣಿಮಾ ಹೇಳಿದರು.

ಕೋಡಿಯ ಮಟ್ಟವನ್ನು 124 ಅಡಿಗಳಿಗೆ ಇಳಿಸಿದಲ್ಲಿ 10 ಟಿಎಂಸಿ ಅಡಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತದೆ. ಇಂತಹ ಅವೈಜ್ಞಾನಿಕ ಪ್ರಸ್ತಾವವನ್ನು ಗೋವಿಂದಪ್ಪ ಅವರಂತಹ ಹಿರಿಯರಿಂದ ನಿರೀಕ್ಷಿಸಿರಲಿಲ್ಲ. 2008 ರಿಂದ 2018 ರವರೆಗಿನ ಹತ್ತು ವರ್ಷದಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನೇ ನಡೆಸಿದ್ದೆ ಎಂದು ಹೇಳಿಕೊಳ್ಳುವ ಮಾಜಿ ಸಚಿವ ಡಿ. ಸುಧಾಕರ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಅದೇ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಗೋವಿಂದಪ್ಪನವರ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸದೇ ಇರುವುದು ನೀರಾವರಿ ಕ್ಷೇತ್ರದ ಬಗೆಗಿನ ಅವರ ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಕಾಳಜಿಗೆ ನಿದರ್ಶನವಾಗಿದೆ ಎಂದು ಶಾಸಕರು ಆರೋಪಿಸಿದರು.

ಗೋವಿಂದಪ್ಪ ಎರಡು ತಾಲ್ಲೂಕುಗಳ ರೈತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಚಳ್ಳಕೆರೆ, ಚಿತ್ರದುರ್ಗ, ಡಿಆರ್‌ಡಿಒ ಯೋಜನೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಗಳ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬೇಕಿದೆ. ವಾಣಿವಿಲಾಸ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇಲ್ಲದೇ ಹೋದರೆ ಇದೆಲ್ಲ ಹೇಗೆ ಸಾಧ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಜನರಮುಂದೆ ಹೋಗಿ ಮತ ಯಾಚಿಸಲು ಸಾಕಷ್ಟು ವಿಷಯಗಳಿವೆ. ಹೀಗಾಗಿ ಗೋವಿಂದಪ್ಪ ಕೋಡಿ ಇಳಿಸುವ ಪ್ರಸ್ತಾವದಿಂದ ಹಿಂದೆ ಸರಿಯಬೇಕು ಎಂದು ಶಾಸಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT