ಗುರುವಾರ , ಆಗಸ್ಟ್ 18, 2022
25 °C
ರೈತ ರುದ್ರಮುನಿಗೆ ಲಾಭ ನೀಡುತ್ತಿರುವ ಡ್ರ್ಯಾಗನ್‌ ಫ್ರೂಟ್‌

ಪಗಡಲಬಂಡೆಯಲ್ಲಿ ಪುಷ್ಕಳ ಆದಾಯ; ಲಾಭ ನೀಡುತ್ತಿರುವ ಡ್ರ್ಯಾಗನ್‌ ಫ್ರೂಟ್‌

ತಿಮ್ಮಯ್ಯ ಜೆ. Updated:

ಅಕ್ಷರ ಗಾತ್ರ : | |

Prajavani

ಪರಶುರಾಂಪುರ: ಬಯಲುಸೀಮೆಯಲ್ಲಿ ಡ್ರ್ಯಾಗನ್‌ ಫ್ರೂಟ್ ಬೆಳೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ ಪಗಡಲಬಂಡೆಯ ರೈತ ಕೆ. ರುದ್ರಮುನಿ.

ಕೃಷಿಯಲ್ಲಿ ಹೊಸ ಪ್ರಯೋಗದ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಇವರು 2020ರ ಅಕ್ಟೋಬರ್‌ನಲ್ಲಿ ಗುಜರಾತ್‌ನಿಂದ ₹ 52ಕ್ಕೆ ಒಂದು ಸಸಿಯಂತೆ ಒಟ್ಟು 6,400 ಸಸಿಗಳನ್ನು ತಂದು ನಾಟಿ ಮಾಡಿ 9 ತಿಂಗಳ ಕಾಲ ಗೊಬ್ಬರ, ನೀರು ಹಾಕಿ ಆರೈಕೆ ಮಾಡಿದರು. ಫಸಲಿಗೆ ಬಂದ ಡ್ರ್ಯಾಗನ್‌ ಫ್ರೂಟ್‌ ಮೊದಲ ಬಾರಿಗೆ 2021ರಲ್ಲಿ 3 ಟನ್ ಹಣ್ಣು ಇಳುವರಿ ನೀಡಿತು. ಅದರಿಂದ ₹ 6 ಲಕ್ಷ ಆದಾಯ ದೊರೆಯಿತು.

‘2022ರ ಜೂನ್‌ನಲ್ಲಿ 2ನೇ ಬಾರಿಗೆ  ಸಲಿಗೆ ಬಂದಿದೆ. ಈ ಬಾರಿ 20ರಿಂದ 25 ಟನ್ ಇಳುವರಿ ಬರುವ ನಿರೀಕ್ಷೆಯಿದೆ. ಕೆ.ಜಿ.ಗೆ ₹ 170 ಬೆಲೆಯಿದ್ದು, ಈ ಬಾರಿ ₹ 35 ಲಕ್ಷ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎನ್ನುತ್ತಾರೆ ರೈತ ಕೆ. ರುದ್ರಮುನಿ.

‘ಡ್ರಾಗ್ಯನ್ ಫ್ರೂಟ್ ಬೆಳೆಯನ್ನು ಒಂದು ಬಾರಿ ಖರ್ಚು ಮಾಡಿ ನಾಟಿ ಮಾಡಿದರೆ 20 ವರ್ಷಗಳ ಕಾಲ ನಿರಂತರ ಆದಾಯ ದೊರೆಯುತ್ತದೆ. ಈ ಬೆಳೆಗೆ ವೈರಸ್ ಕಾಟವೂ ಕಡಿಮೆ. ಈ ಬೆಳೆಯು ಆದಾಯ ದುಪ್ಪಟ್ಟು ಮಾಡಲೂ ನೆರವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಮಾರುಕಟ್ಟೆ ವ್ಯವಸ್ಥೆ ಹೇಗೆ?: ಡ್ರ್ಯಾಗನ್‌ಫ್ರೂಟ್‌ಗೆ ಮುಂಬಯಿಯಲ್ಲಿ ಬೇಡಿಕೆ ಇದೆ. ಅಲ್ಲಿಂದ ಬೆರೆ ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೂ ಕಳುಹಿಸುವ ವ್ಯವಸ್ಥೆ ಇದೆ. ಅಲ್ಲದೇ ರಾಜ್ಯದ ಮಂಗಳೂರು, ಬೆಂಗಳೂರು, ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬೇಡಿಕೆಯಿದೆ ಎಂದೂ ಅವರು ತಿಳಿಸುತ್ತಾರೆ. ಮೈಸೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪುತ್ರ ಭಾನುಪ್ರಕಾಶ್ ಈಗ ಕೆಲಸಕ್ಕೆ ರಾಜೀನಾಮೆ ನೀಡಿ
ಕೃಷಿಯಲ್ಲಿ ತೊಡಗಿಸಿಕೊಂಡು ಹಣ್ಣುಗಳ ಮಾರಾಟ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಕೃಷಿ ಜೊತೆಗೆ ಮೇಕೆ ಸಾಕಣೆ: ಕೃಷಿ ಜೊತೆಗೇ ದಕ್ಷಿಣ ಆಫ್ರಿಕಾ ತಳಿಯ ಬೋಯಾರ್ ತಳಿಯ ಗಂಡು ಮತ್ತು ಕೇರಳದ ತಲಸ್ಸೇರಿ ತಳಿಯ ಹೆಣ್ಣು ಮೇಕೆಗಳನ್ನು ಸಾಕಣೆ ಮಾಡುತ್ತಿದ್ದು ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ.

* ಕೃಷಿಯಲ್ಲಿ ಆಸಕ್ತಿ ಇದ್ದು, ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಈ ಬೆಳೆ ಬೆಳೆದೆ. ಈಗ ಹಲವರು ಬಂದು ಬೆಳೆಯನ್ನು ವೀಕ್ಷಿಸುತ್ತಿದ್ದಾರೆ. ಬಹಳ ಖುಷಿಯಾಗುತ್ತಿದೆ.

-ಕೆ. ರುದ್ರಮುನಿ, ರೈತ, ಪಗಡಲಬಂಡೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು