ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 400 ಕೋಟಿ ವೆಚ್ಚದಲ್ಲಿ ವಿವಿ ಸಾಗರದಿಂದ ಕುಡಿಯುವ ನೀರು

ಹೊಳಲ್ಕೆರೆ ಕ್ಷೇತ್ರದ 490 ಹಳ್ಳಿಗಳಿಗೆ ನೀರು ಸರಬರಾಜು
Last Updated 21 ನವೆಂಬರ್ 2020, 14:01 IST
ಅಕ್ಷರ ಗಾತ್ರ

ಹೊಳಲ್ಕೆರೆ: ₹ 400 ಕೋಟಿ ವೆಚ್ಚದಲ್ಲಿ ವಾಣಿವಿಲಾಸ ಸಾಗರದಿಂದ ಕ್ಷೇತ್ರದ 490 ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ವಿತರಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ಶನಿವಾರ ರೈತ ಉತ್ಪಾದಕ ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿ ವಿಲಾಸ ಸಾಗರದ ಹಿನ್ನೀರು ಬಳಸಿಕೊಂಡು ಭರಮಸಾಗರ ಸೇರಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. ಘಟ್ಟಿ ಹೊಸಹಳ್ಳಿಯ ಗುಡ್ಡದಲ್ಲಿ ದೊಡ್ಡ ಟ್ಯಾಂಕ್ ನಿರ್ಮಿಸಿ ಅಲ್ಲಿ ನೀರನ್ನು ಶುದ್ಧೀಕರಿಸಿ ಎಲ್ಲಾ ಹಳ್ಳಿಗಳಿಗೆ ವಿತರಿಸಲಾಗುವುದು. ಕೆರೆಯಾಗಳಹಳ್ಳಿ ಸೇರಿ ತಾಳ್ಯ ಹೋಬಳಿಯ ಎಲ್ಲಾ ಕೆರೆಗಳಿಗೆ ಭದ್ರಾ ನೀರು ತುಂಬಿಸಲಾಗುವುದು. ಮುಂದಿನ ತಿಂಗಳು ಶಿವಗಂಗಾ ಕೆರೆಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಚಿತ್ರಹಳ್ಳಿ ಸರ್ಕಲ್ ನಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಂದ ರೈತರಿಗೆ ಅನ್ಯಾಯ ಆಗುವುದಿಲ್ಲ. ಈ ಕಾಯ್ದೆಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ರೈತರಿಗೆ ಅನುಕೂಲ ಆಗದಿದ್ದರೆ ಬದಲಾವಣೆ ಮಾಡುತ್ತಾರೆ. ಯಾವುದೇ ಕಾಯ್ದೆಗಳು ಜನರ ಏಳಿಗೆಗೆ ಜಾರಿಯಾಗುತ್ತವೆ ಎಂದು ಹೇಳಿದರು.

‘ಕ್ಷೇತ್ರದ ಅಭಿವೃದ್ಧಿಗೆ ₹ 2 ಸಾವಿರ ಕೋಟಿ ಅನುದಾನ ತಂದಿದ್ದೇನೆ. ವಿದ್ಯುತ್ ಸುಧಾರಣೆಗೆ ₹ 500 ಕೋಟಿ, ರಸ್ತೆಗಳಿಗೆ ₹ 300 ಕೋಟಿ, ಚೆಕ್ ಡ್ಯಾಂ, ಹೊಸಕೆರೆ ನಿರ್ಮಾಣಕ್ಕೆ ₹ 300 ಕೋಟಿ, ನೀರಾವರಿಗೆ ₹1,000 ಕೋಟಿ ಅನುದಾನ ನೀಡಿದ್ದೇನೆ. ಈ ಬಗ್ಗೆ ಯಾರಿಗಾದರೂ ಅನುಮಾನ ಇದ್ದರೆ ಶೀಘ್ರ ಶ್ವೇತಪತ್ರ ಹೊರಡಿಸುವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಕೆ. ಶಿವಮೂರ್ತಿ, ‘ಒಂದು ಸಂಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಮುಂದುವರಿಸುವುದು ಸವಾಲಿನ ಕೆಲಸ. ರೈತರು ರೈತ ಉತ್ಪಾದಕ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ನಬಾರ್ಡ್ ವ್ಯವಸ್ಥಾಪಕ ನಿರ್ದೇಶಕಿ ಕವಿತಾ, ‘ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬೇಕು. ಮಧ್ಯವರ್ತಿಗಳ ನೆರವು ಪಡೆಯದೆ ನೇರವಾಗಿ ಮಾರಾಟ ಮಾಡಿದರೆ ಹೆಚ್ಚು ಲಭ ಗಳಿಸಲು ಸಾಧ್ಯ’ ಎಂದು ಸಲಹೆ ನೀಡಿದರು.

ಗೊಲ್ಲರ ಹಳ್ಳಿ, ಮುಗಳಿ ಕಟ್ಟೆ, ಸಂಗೇನಹಳ್ಳಿ, ನಗರಘಟ್ಟ, ಬೋರನಹಳ್ಳಿ, ಕಣಿವೆ ಜೋಗಿಹಳ್ಳಿ, ತೇಕಲವಟ್ಟಿ ಗ್ರಾಮಗಳ ಸಮೀಪ ಹರಿಯುವ ಹಳ್ಳಗಳಿಗೆ ₹ 7.5 ಕೋಟಿ ವೆಚ್ಚದ ಚೆಕ್ ಡ್ಯಾಂ, ಬ್ಯಾರೇಜ್ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಶಂಕುಸ್ಥಾಪನೆ ನೆರವೇರಿಸಿದರು.

ಕೊಳಾಳು, ಮದ್ದಪ್ಪನ ಹಟ್ಟಿ, ತೇಕಲವಟ್ಟಿ, ಉಪ್ಪರಿಗೇನಹಳ್ಳಿ, ಗೊಲ್ಲರಹಳ್ಳಿ, ಹಾಲೇನಹಳ್ಳಿ, ಎಂ.ಜಿ.ಕಟ್ಟೆ, ಹೊರಕೆರೆ ದೇವರ ಪುರ, ಸಂಗೇನಹಳ್ಳಿ, ಕಣಿವೆ ಜೋಗಿಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಶಾಲಾ ಕೊಠಡಿ, ಯಾತ್ರಿನಿವಾಸ ಕಾಮಗಾರಿಗಳಿಗೆ ಚಾಲನೆ ನೀಡಿದರು.

ರೈತ ಸಂಘದ ಮುಖಂಡ ಈಚಘಟ್ಟದ ಸಿದ್ದವೀರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಪರಮೇಶ್ವರಪ್ಪ, ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬಿ.ಸಿ.ನಾಗರಾಜ್, ಚಂದ್ರಣ್ಣ, ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ ನಾಯ್ಕ್, ಪ್ರಗತಿಪರ ರೈತ ದಿನೇಶ್, ಕೆಂಚಪ್ಪ, ಎಚ್.ಡಿ.ರಂಗಯ್ಯ, ಸಣ್ಣಸಿದ್ದಪ್ಪ, ಶೇಷಣ್ಣ, ಎಂಜಿನಿಯರ್ ಮಹಾಬಲೇಶ್ವರ, ವೆಂಕಟರಮಣ್, ಪಣಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT