ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಸಾಗರದ ನೀರು ಇನ್ನೂ ಮರೀಚಿಕೆ

ಕೊಳವೆ ಮಾರ್ಗದಲ್ಲಿ ಕಾಣಿಸಿಕೊಂಡ ಸಮಸ್ಯೆ, ಕುಡಿಯುವ ನೀರಿಗೆ ತತ್ವಾರ
Last Updated 12 ಡಿಸೆಂಬರ್ 2020, 5:36 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಶಾಂತಿಸಾಗರ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿ ಕಳಪೆಯಾದ ಪರಿಣಾಮ ಹಲವು ಹಳ್ಳಿಗಳಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಚಿಕ್ಕಜಾಜೂರು ಸೇರಿ ಕೆಲ ಗ್ರಾಮಗಳಿಗೆ ಎರಡು ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ.

ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಎಂಟು ಗ್ರಾಮ ಮಂಚಾಯಿತಿಗಳಿವೆ. ಬಿ. ದುರ್ಗ, ಅಂದನೂರು, ಮುತ್ತುಗದೂರು, ಗುಂಜಿಗನೂರು, ಚಿಕ್ಕಜಾಜೂರು, ಚಿಕ್ಕಎಮ್ಮಿಗನೂರು, ಹಿರೇಎಮ್ಮಿಗನೂರು ಹಾಗೂ ಆಡನೂರು ಗ್ರಾಮಗಳಲ್ಲಿ ರಾಜಕೀಯ ರಂಗೇರಿದೆ.

ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಶಾಂತಿಸಾಗರದ ನೀರು ಪೂರೈಕೆಗೆ ಎರಡೂವರೆ ವರ್ಷದ ಹಿಂದೆ ಯೋಜನೆ ರೂಪಿಸಲಾಗಿತ್ತು. ಅಂದನೂರು, ಮುತ್ತುಗದೂರು ಹಾಗೂ ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿತ್ತು.

‘ಕಾಮಗಾರಿ ಕಳಪೆಯಾಗಿದ್ದರಿಂದ ಹಲವು ಕೊಳವೆಗಳು ಒಡೆದುಹೋಗಿವೆ. ಎಲ್ಲೆಂದರಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ಬಹುತೇಕ ಗ್ರಾಮಗಳಿಗೆ ಇನ್ನೂ ನೀರಿನ ಸೌಲಭ್ಯ ಸಿಕ್ಕಿಲ್ಲ. ಈ ಬಾರಿ ಸ್ವಲ್ಪ ಮಳೆ ಆಗಿದ್ದು, ಕೊಳವೆಬಾವಿಗಳಲ್ಲಿ ಸಿಗುವ ನೀರನ್ನೇ ಗ್ರಾಮಸ್ಥರು ಸರತಿ ಸಾಲಲ್ಲಿ ನಿಂತು ಪಡೆಯುತ್ತಿದ್ದೇವೆ’ ಎನ್ನುತ್ತಾರೆ ಬಂಡೆಬೊಮ್ಮೇನಹಳ್ಳಿ ಗ್ರಾಮಸ್ಥ ನಾಗರಾಜ್‌.

ಅಂದನೂರು ಗ್ರಾಮದಲ್ಲಿ ನೀರು ಶೇಖರಣೆ ಮಾಡಿ ವಿತರಣೆ ಮಾಡುವ ವ್ಯವಸ್ಥೆಯೂ ಅವೈಜ್ಞಾನಿಕವಾಗಿದೆ. ಗುಂಡಿ ನಿರ್ಮಿಸಿ ಅದಕ್ಕೆ ತಾಡಪಾಲ್‌ ಹಾಕಲಾಗಿದೆ. ಅದರಲ್ಲಿ ಶಾಂತಿಸಾಗರದ ನೀರು ಸಂಗ್ರಹಿಸಲಾಗುತ್ತಿದೆ. ಅಲ್ಲಿಂದ ಅಂದನೂರು, ಇಂಗಳದಹಳ್ಳಿ, ಬಂಡೆಬೊಮ್ಮೆನಹಳ್ಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರಿನ ಪರಿಶುದ್ಧತೆಯ ಬಗ್ಗೆ ಜನರಲ್ಲಿ ಅನುಮಾನಗಳಿವೆ.

‘ಶಾಂತಿಸಾಗರದಿಂದ ಸರಬ ರಾಜು ಮಾಡಲಾಗುವ ನೀರು ಪರಿಶುದ್ಧವಾಗಿಲ್ಲ. ಕುಡಿಯುವ ಉದ್ದೇಶದಿಂದ ಪೂರೈಕೆ ಮಾಡುವ ನೀರಿನಲ್ಲಿ ಮುಖ ತೊಳೆಯಲು ಸಾಧ್ಯವಿಲ್ಲ. ತೆರೆದ ಗುಂಡಿಯಲ್ಲಿ ಹಲವು ದಿನ ಶೇಖರಿಸಿ ಪೂರೈಸುವುದರಿಂದ ನೀರು ಕಲುಷಿತವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂಬುದು ನಾಗಭೂಷಣ್‌ ಎಂಬುವರ ಆರೋಪ.

ಶಾಂತಿಸಾಗರದಿಂದ ಹೊಳಲ್ಕೆರೆಗೆ ಸಂಪರ್ಕ ಕಲ್ಪಿಸಿದ ಮಾರ್ಗದಲ್ಲಿ ಚಿಕ್ಕಜಾಜೂರು ಗ್ರಾಮ ಪಂಚಾಯಿತಿಯ ಹಳ್ಳಿಗಳಿಗೆ ನೀರು ಒದಗಿಸಲಾಗುತ್ತಿದೆ. ಮಳೆಗಾಲದಲ್ಲಿಯೂ 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ಜನರು ಕೊಳವೆಬಾವಿ ನೀರನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಜಲಾಶಯದಲ್ಲಿ ನೀರಿನ ಕೊರತೆ ಇಲ್ಲ. ಆದರೆ, ನಿರ್ವಹಣೆ ಹಾಗೂ ಹಂಚಿಕೆಯಲ್ಲಿ ಆಗುತ್ತಿರುವ ಸಮಸ್ಯೆ ಗ್ರಾಮೀಣ ಪ್ರದೇಶದ ಜನರನ್ನು ಹೈರಾಣ ಮಾಡಿದೆ.

‘ಶಾಂತಿಸಾಗರದಿಂದ ಪೂರೈಕೆ ಮಾಡುವ ನೀರು ಪರಿಶುದ್ಧವಾಗಿದೆ. ನೀರು ಕಲುಷಿತವಾಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (‍ಪಿಡಿಒ) ಅಥವಾ ಜನರು ದೂರು ನೀಡಿಲ್ಲ’ ಎಂಬುದು ಎಂಜಿನಿಯರ್‌ ಗುರುರಾಜ್‌ ಅವರ ಸ್ಪಷ್ಟನೆ.

ಅನೇಕ ಗ್ರಾಮಗಳಲ್ಲಿ ಚರಂಡಿ, ರಸ್ತೆಗಳು ಸಮರ್ಪಕವಾಗಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ಕೆಲವೆಡೆ ಅಂಗನವಾಡಿ ಕೇಂದ್ರಗಳಿಗೆ ಕೊಠಡಿಗಳಿಲ್ಲ. ಗುಡಿಸಲು, ಚಪ್ಪರ, ಬಾಡಿಗೆ ಮನೆಗಳಲ್ಲಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ.

ಗಡಿ ಗ್ರಾಮಗಳಾದ ಚಿಕ್ಕನಕಟ್ಟೆ, ಕೆಂಗುಂಟೆ, ಶಿವಪುರ, ಹೊಸಹಳ್ಳಿ, ಹುಲೇಮಳಲಿ, ಅಬ್ರದಾಸಕಟ್ಟೆ, ದಾಸರಹಳ್ಳಿ ಮೊದಲಾದ ಗ್ರಾಮಗಳಿಗೆ ಸರಿಯಾದ ಬಸ್‌ ಸೌಕರ್ಯವಿಲ್ಲ. ಪಟ್ಟಣಗಳಿಗೆ ಸಂಚರಿಸಲು ಜನರು ನಿತ್ಯ ಪರದಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT