ಶುಕ್ರವಾರ, ಸೆಪ್ಟೆಂಬರ್ 24, 2021
24 °C
ನೀರಿಗಾಗಿ ನಿತ್ಯ ಪರದಾಡುವ ಗ್ರಾಮಸ್ಥರು

ಬಯಲುಸೀಮೆಯ ದಾಹಕ್ಕೆ ನೀರೆರೆಯುವವರಾರು?

ತಿಮ್ಮಯ್ಯ .ಜೆ ಪರಶುರಾಂಪುರ Updated:

ಅಕ್ಷರ ಗಾತ್ರ : | |

ಪರಶುರಾಂಪುರ: ಅತಿ ಕಡಿಮೆ ಮಳೆ ಬೀಳುವ ಚಳ್ಳಕೆರೆ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿಗಾಗಿ ಜನ ಪರದಾಡುವ ಪರಿಸ್ಥಿತಿ ಇದೆ.

ದಶಕಗಳಿಂದಲೂ ನೀರಿನ ಸಮಸ್ಯೆ ತಲೆದೋರಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಬೇಕು ಎಂಬುದು ಈ ಭಾಗದ ಜನರ ಅಭಿಪ್ರಾಯ.

ಆದರೆ, ಹತ್ತು ವರ್ಷಗಳಿಂದ ಹಲವು ಮುಖ್ಯಮಂತ್ರಿಗಳು ಇಂದು, ನಾಳೆ, ನಾಡಿದ್ದು ನೀರು ಹರಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ವಾಸ್ತವವಾಗಿ ನೀರು ಬರುವುದು ಯಾವಾಗ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಪರಶುರಾಂಪುರ ಹೋಬಳಿಯ ಯಾವುದೇ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎನ್ನುವ ಹಾಗಿಲ್ಲ. ಪ್ರತಿ ಹಳ್ಳಿಯ ಹೆಣ್ಣುಮಕ್ಕಳು ನೀರಿಗಾಗಿ ಕೊಡ ಹಿಡಿದು ಅಲ್ಲಿ, ಇಲ್ಲಿ ಪರದಾಡುವ ಸ್ಥಿತಿ ಸಾಮಾನ್ಯ.

‘ಕೊರ್ಲಕುಂಟೆ, ಬೊಮ್ಮನಕುಂಟೆ, ಪುಟ್ಲಾರಹಳ್ಳಿಯಲ್ಲಿ ನೀರಿನ ಕೊರತೆ ಇದೆ. ಗ್ರಾಮ ಪಂಚಾಯಿತಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಟ್ಯಾಂಕರ್ ಮೂಲಕ ನೀರು ಬಿಡುವ ವ್ಯವಸ್ಥೆಯಾಗಬೇಕು. ನೀರಿನ ಕೊರತೆಯಿಂದ ಎತ್ತಿನ ಗಾಡಿಯಲ್ಲಿ ಪಕ್ಕದ ಜಮೀನುಗಳಿಗೆ ತೆರಳಿ ನೀರು ತುಂಬಿಸಿಕೊಂಡು ದಾಹ ತೀರಿಸಿಕೊಳ್ಳುತ್ತಿದ್ದೇವೆ.

2-3 ದಿನಕ್ಕೊಮ್ಮೆ, ಮೋಟರ್‌ ಸುಟ್ಟಿದೆ ನೀರು ಬರುತ್ತಿಲ್ಲ ಎಂಬ ಸಬೂಬು ಹೇಳಿಕೊಂಡು ಸರಿಯಾಗಿ ನೀರು ಬಿಡುತ್ತಿಲ್ಲ’ ಎನ್ನುತ್ತಾರೆ ಕೊರ್ಲಕುಂಟೆಯ ರಾಜಣ್ಣ.

ಚುನಾವಣೆ ಹಿಂದೆ, ಮುಂದೆ ಜನಪ್ರತಿನಿಧಿಗಳು ಪಂಚಾಯಿತಿಗೆ ಬಂದು 1-2 ಟ್ಯಾಂಕರ್‌ ನೀರು ಕೊಡುತ್ತಿದ್ದರು. ಈಗ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅವೂ ಬರುತ್ತಿಲ್ಲ. ಅಧಿಕಾರಿಗಳು ಸಹ ಕುಡಿಯುವ ನೀರಿಗೆ ಹಣ ಕೊರತೆಯಿಲ್ಲ ನೀರು ಕೊಡಲು ಸಿದ್ಧ ಎನ್ನುತ್ತಾರೆ. ಆದರೆ, ಹಳ್ಳಿಗಳಿಗೆ ಬಂದು ಜನರ ಸಮಸ್ಯೆ ಆಲಿಸುವವರು ಯಾರು? ಬಯಲುಸೀಮೆಯ ನೀರಿನ ಬವಣೆಯನ್ನು ಪರಿಹರಿಸುವ ಶಾಶ್ವತ ಯೋಜನೆ ಯಾವಾಗ, ಯಾರಿಂದ ಪ್ರಾರಂಭವಾಗುತ್ತದೆ ಎಂಬುವುದು ಜನರ ಒಕ್ಕೋರಲ ಪ್ರಶ್ನೆ.

*
ಬೇಸಿಗೆ ಬಂತೆಂದೆರೆ ಸಾಕು, ವೃದ್ಧರು, ಮಕ್ಕಳೆನ್ನದೆ ನೀರಿಗಾಗಿ ಕೂಲಿ– ನಾಲಿ ಬಿಟ್ಟು ಕಾಯುವಪರಿಸ್ಥಿತಿ ಇದೆ.
-ರತ್ನಮ್ಮ, ಗೃಹಿಣಿ, ಪಗಡಲಬಂಡೆ

*
ನನಗೆ 70 ವರ್ಷ ದಾಟಿದೆ. ಮನೆಯಲ್ಲಿ ಮಗ-ಸೊಸೆ ಕೆಲಸಕ್ಕೆ ಹೋದರೆ ನಾನೇ ನೀರು ತರಬೇಕಾಗುತ್ತದೆ. ಇಲ್ಲದಿದ್ದರೆ ಅಡುಗೆ ಮಾಡಲು ಕುಡಿಯಲು ನೀರಲ್ಲದಂತಾಗುತ್ತದೆ.
–ಹನುಮಂತಪ್ಪ, ಗ್ರಾಮದ ಹಿರಿಯ ಪಗಡಲಬಂಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.