7
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ

ಮಾದಕವಸ್ತು ಕಳ್ಳಸಾಗಣೆ ಶತ್ರು ರಾಷ್ಟ್ರದ ಹುನ್ನಾರ

Published:
Updated:

ಚಿತ್ರದುರ್ಗ: ಯುದ್ಧದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಶತ್ರು ರಾಷ್ಟ್ರಗಳು ಭಾರತಕ್ಕೆ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿವೆ. ಯುವ ಸಮೂಹದ ದಿಕ್ಕುತಪ್ಪಿಸಿ ದೇಶದ ಮೇಲೆ ದಾಳಿ ನಡೆಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಜಾಗೃತಿ ಜಾಥಾ ಹಾಗೂ ಕಾನೂನು ಅರಿವು’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾದಕ ವಸ್ತುಗಳ ವ್ಯಸನಿಗಳಲ್ಲಿ ಶೇ 50ರಷ್ಟು ಯುವ ಸಮೂಹವಿದೆ. ದೇಶದ ಒಟ್ಟು ಯುವಜನಾಂಗದ ಪೈಕಿ ಶೇ 20ರಷ್ಟು ಜನ ಮಾದಕ ವ್ಯಸನ ಅಂಟಿಸಿಕೊಂಡಿದ್ದಾರೆ. ಹೆರಾಯಿನ್‌, ಕೋಕೇನ್‌, ಬ್ರೌನ್‌ ಷುಗರ್‌ನಂತಹ ಮಾದಕ ವಸ್ತುಗಳು ಚೀನಾ ಹಾಗೂ ಪಾಕಿಸ್ತಾನದಿಂದ ದೇಶಕ್ಕೆ ಸಾಗಣೆ ಆಗುತ್ತಿವೆ’ ಎಂದು ಹೇಳಿದರು.

‘ಮಾದಕ ವಸ್ತು ಕಳ್ಳ ಸಾಗಣೆ ಜಾಲ ದೊಡ್ಡದಿದೆ. ಸಾಮಾನ್ಯವಾಗಿ ಇವುಗಳನ್ನು ಹಡಗಿನ ಮೂಲಕ ಸಾಗಿಸಲಾಗುತ್ತದೆ. ಕರಾವಳಿ ತೀರಗಳಾದ ಗೋವಾ ಹಾಗೂ ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಬಳಿಕ ದೇಶದ ಇತರ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ. 2014ರಲ್ಲಿ 283, 2015ರಲ್ಲಿ 351 ಹಾಗೂ 2016ರಲ್ಲಿ 161 ಮಾದಕವಸ್ತು ಕಳ್ಳಸಾಗಣೆ ಪ್ರಕರಣ ರಾಜ್ಯದಲ್ಲಿ ದಾಖಲಾಗಿವೆ’ ಎಂದರು.

‘ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿ ನೋವು ಅನುಭವಿಸಿದ ಹಲವು ಯುವಕರ ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಎಂಜಿನಿಯರಿಂಗ್‌ ಹಾಗೂ ಮೆಡಿಕಲ್‌ ಕಾಲೇಜುಗಳ ವಿದ್ಯಾರ್ಥಿಗಳು ಸಿಕ್ಕಿಬಿದ್ದ ನಿದರ್ಶನಗಳೂ ಇವೆ. ವಿದ್ಯಾರ್ಥಿಗಳು ದಿಕ್ಕು ತಪ್ಪಿದರೆ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ’ ಎಂದು ಹೇಳಿದರು.

‘ಧೂಮಪಾನ ಮಾಡುವುದರಿಂದ ಉಲ್ಲಾಸ ಮೂಡುತ್ತದೆ ಎಂಬ ತಪ್ಪುಕಲ್ಪನೆ ಬಹುತೇಕರಲ್ಲಿದೆ. ಧೂಮಪಾನದಿಂದ ದೇಹದ ಜೀವಕೋಶಗಳು ನಾಶವಾಗುತ್ತವೆ. ಶ್ವಾಸಕೋಶ ಹಾಗೂ ಮಿದುಳು ನಿಷ್ಕ್ರಿಯಗೊಳ್ಳುವ ಅಪಾಯವಿದೆ. ಕ್ಯಾನ್ಸರ್‌ ಮತ್ತು ಟಿ.ಬಿ. ಕಾಯಿಲೆ ಬಹುಬೇಗ ಅಂಟುತ್ತವೆ’ ಎಂದು ಎಚ್ಚರಿಕೆ ನೀಡಿದರು.

‘ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಯಿಂದ ನಿದ್ದೆ ಬರುವುದಿಲ್ಲ. ಐದು ವರ್ಷ ನಿರಂತರವಾಗಿ ಗುಟ್ಕಾ ಸೇವಿಸಿದ ಬಹುತೇಕರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ದೇಹ ಕೂಡ ವಿಕಾರಗೊಂಡು, ಜೀವನದ ನೆಮ್ಮದಿ ಹಾಳಾಗುತ್ತದೆ. ಮಾದಕವಸ್ತುಗಳ ದಾಸರಾದವರಲ್ಲಿ ನಗರ ವಾಸಿಗಳೇ ಹೆಚ್ಚು’ ಎಂದು ಮಾಹಿತಿ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಆರ್‌.ದಿಂಡಲಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ವಿ.ನೀರಜ್‌, ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ.ವಿಶ್ವನಾಥ್‌, ಪ್ರಧಾನ ಕಾರ್ಯದರ್ಶಿ ಸಿ.ಶಿವು ಯಾದವ್‌, ಮನೋವೈದ್ಯ ಡಾ.ಆರ್‌.ಮಂಜುನಾಥ್‌, ಪ್ರಾಂಶುಪಾಲರಾದ ಟಿ.ವಿ.ಸಣ್ಣಮ್ಮ ಇದ್ದರು.

ಭವ್ಯ ಭವಿಷ್ಯ ಕಟ್ಟಿಕೊಳ್ಳುವ ಅವಕಾಶ ಯುವ ಸಮೂಹದ ಮುಂದಿದೆ. ದುಷ್ಟಶಕ್ತಿಗಳ ಪ್ರಭೆಗೆ ಒಳಗಾಗಿ ಹಾಳಾಗಬೇಡಿ. ಧೂಮಪಾನ, ಮಧ್ಯಪಾನದಿಂದ ದೂರವಿರಿ.
-ಪಿ.ಎನ್‌.ರವೀಂದ್ರಜಿಲ್ಲಾ ಪಂಚಾಯಿತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !