ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆಯಿಂದ ಬೆಳೆಗಳಿಗೆ ಹಾನಿ; ವೆಂಗಳಾಪುರದಲ್ಲಿ ಶಾಲೆ ಕಟ್ಟಡದ ಗೋಡೆ ಕುಸಿತ

Last Updated 19 ನವೆಂಬರ್ 2021, 2:25 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ವೆಂಗಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ ಬುಧವಾರ ರಾತ್ರಿ ಕುಸಿದಿದೆ.

110 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಇರುವ 5 ಕೊಠಡಿಗಳಲ್ಲಿಯೂ ಪ್ರತಿದಿನ ಮಕ್ಕಳು ಕುಳಿತು ಪಾಠ ಕಲಿಯುತ್ತಿದ್ದರು. ಅದೃಷ್ಟವಶಾತ್‌ ರಾತ್ರಿ ಹೊತ್ತು ಗೋಡೆ ಕುಸಿತವಾಗಿದ್ದರಿಂದ ಮಕ್ಕಳು ಹಾಗೂ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೋಡು, ಮಾಡದಕೆರೆ ಸೇರಿ ತಾಲ್ಲೂಕಿನ ಹಲವೆಡೆ ಗುರುವಾರವೂ ಅರ್ಧ ತಾಸಿಗೂ ಹೆಚ್ಚುಹೊತ್ತು ಮಳೆ ಸುರಿಯಿತು. ಸತತ ಸುರಿಯುತ್ತಿರುವ ಮಳೆಯಿಂದ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಕೃಷಿಹೊಂಡ, ಬ್ಯಾರೇಜ್, ಚೆಕ್ ಡ್ಯಾಮ್ ತುಂಬಿವೆ. ಹಳ್ಳಗಳು ತುಂಬಿ ಹರಿಯುತ್ತಿವೆ. ನೆರೆಯ ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜೀವನದಿ ವೇದಾವತಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿಸಿರುವ ಕೊರಟಿಕೆರೆ, ಬಲ್ಲಾಳಸಮುದ್ರ, ಕೆಲ್ಲೋಡು, ಕಾರೇಹಳ್ಳಿ ಬೃಹತ್ ಬ್ಯಾರೇಜ್‌ಗಳ ಮೂಲಕ ನೀರು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಯುತ್ತಿದೆ.

ಗುಡ್ಡಗಳಿಂದ ನೀರು ತಗ್ಗು ಪ್ರದೇಶಕ್ಕೆ ಹರಿದು ಜಮೀನಿಗೆ ನುಗ್ಗುತ್ತಿದೆ. ಹಲವೆಡೆ ಜಮೀನುಗಳಲ್ಲಿ ಜೋಪು ಹೆಚ್ಚಾಗಿದೆ. ರೈತರು ಕಾಲಿಡಲು ಆಗುತ್ತಿಲ್ಲ. ಕೊಯ್ಲಿಗೆ ಬಂದಿದ್ದ ರಾಗಿ ಬೆಳೆಯು ಬಹುತೇಕ ನೆಲಕ್ಕಚ್ಚಿದ್ದು, ತೆನೆ ಮೊಳಕೆಯೊಡೆಯುತ್ತಿದೆ. ರಾಗಿ, ಮೆಕ್ಕೆಜೋಳ, ಹತ್ತಿ, ನವಣೆ, ಕಡಲೆಕಾಳು ಸೇರಿ ಇನ್ನಿತರ ನೂರಾರು ಎಕರೆ ಪ್ರದೇಶದಲ್ಲಿ ಇರುವ ಬೆಳೆಗಳಿಗೆ ಹಾನಿಯಾಗಿದೆ.

10 ಮನೆಗಳಿಗೆ ಹಾನಿ:ಓಬಳಾಪುರ ಸುವರ್ಣಮ್ಮ, ತೊಣಚೇನಹಳ್ಳಿ ಮಹೇಶ್‌, ಬೆಲಗೂರು ಮಲ್ಲಿಕಾರ್ಜುನ, ತಂಡಗ ರಾಮಕೃಷ್ಣಪ್ಪ, ಗವಿರಂಗಾಪುರ ಬಸವರಾಜಪ್ಪ, ಚಿಕ್ಕತೇಕಲವಟ್ಟಿ ಗೌರಮ್ಮ, ನಾಗರಕಟ್ಟೆ ಬಸವರಾಜಪ್ಪ, ಕೊಂಡಾಪುರ ಶಾರದಮ್ಮ, ಹೊನ್ನೇನಹಳ್ಳಿ ಕಮಲಮ್ಮ, ನಾಗತೀಹಳ್ಳಿ ಸುಲೋಚನಮ್ಮ ಅವರಿಗೆ ಸೇರಿದ 10 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹ 4.55 ಲಕ್ಷ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT