ನಕಲಿ ವೈದ್ಯ ಸೆರೆ

7

ನಕಲಿ ವೈದ್ಯ ಸೆರೆ

Published:
Updated:
Deccan Herald

ಚಿತ್ರದುರ್ಗ: ಡಾ.ವಿಕಾಸ್‌ ಪಾಟೀಲ್‌ ಎಂಬ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳಿಂದ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ವಿಕಾಸ್‌ ಎಂಬ ನಕಲಿ ವೈದ್ಯನನ್ನು ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಐದು ತಿಂಗಳು ಕಾರ್ಯನಿರ್ವಹಿಸಿ ಕೆಲಸ ತೊರೆದಿದ್ದ ಈತ, ಆ.6ರಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯನಾಗಿ ನಿಯೋಜನೆಗೊಂಡಿದ್ದ. ವೈದ್ಯನೆಂದು ಹೇಳಿಕೊಂಡು ಮೂರು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ.

ವಿಕಾಸ್‌ ಪಾಟೀಲ್‌ ಎಂಬ ನಕಲಿ ವೈದ್ಯನ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ವಿ.ನೀರಜ್‌ ಪರಿಶೀಲಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಶಿವಾನಂದಪ್ಪ ಎಂಬುವರ ಪುತ್ರ ಡಾ.ವಿಕಾಸ್‌ ಪಾಟೀಲ್‌ ಅಸಲಿ ವೈದ್ಯ. ವೈದ್ಯಕೀಯ ಪದವೀಧರರಾಗಿರುವ ಇವರು ಉನ್ನತ ಶಿಕ್ಷಣಕ್ಕೆ ತೆರಳಿದ್ದಾರೆ. ಶಿವಣ್ಣ ಎಂಬುವರ ಪುತ್ರ ವಿಕಾಸ್‌ ಅಸಲಿ ವೈದ್ಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ತನಿಖೆಯಿಂದ ದೃಢಪಟ್ಟಿದೆ.

ವೈದ್ಯರ ಕೊರತೆ ಎದುರಿಸುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಚೆಗೆ ತಾತ್ಕಾಲಿಕ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಮಾಸಿಕ ₹ 47 ಸಾವಿರ ವೇತನ ನಿಗದಿ ಮಾಡಿತ್ತು. ಜಿಲ್ಲಾಧಿಕಾರಿ ನೇತೃತ್ವದ ನೇಮಕಾತಿ ಪ್ರಾಧಿಕಾರದ ಎದುರು ಡಾ.ವಿಕಾಸ್‌ ಪಾಟೀಲ್‌ ಎಂಬ ಹೆಸರಿನ ದಾಖಲೆಗಳನ್ನು ಆರೋಪಿ ಹಾಜರುಪಡಿಸಿದ್ದನು. ಆದರೆ, ವೈದ್ಯಕೀಯ ಪ್ರಮಾಣಪತ್ರ ಮಾತ್ರ ಲಭ್ಯವಾಗಿರಲಿಲ್ಲ.

ವೈದ್ಯಕೀಯ ಪ್ರಮಾಣ ಪತ್ರ ಕಳೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ ದೂರಿನ ಪ್ರತಿಯನ್ನು ಪ್ರಾಧಿಕಾರದ ಎದುರು ಹಾಜರುಪಡಿಸಿದ್ದನು. ಅಲ್ಲದೇ, ಅಸಲಿ ಪ್ರಮಾಣಪತ್ರವನ್ನು ಮತ್ತೊಮ್ಮೆ ಪಡೆದು ಪ್ರಾಧಿಕಾರಕ್ಕೆ ನೀಡಲು ಕಾಲಾವಕಾಶ ಕೋರಿದ್ದನು ಎಂದು ಮೂಲಗಳು ತಿಳಿಸಿವೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಪಿ ಒಬ್ಬಂಟಿಯಾಗಿ ಇರುತ್ತಿದ್ದ. ಚಿಕಿತ್ಸೆಗೆ ಬರುವ ರೋಗಿಗಳೊಂದಿಗೆ ಆಪ್ತವಾಗಿ ಮಾತನಾಡುತ್ತಿರಲಿಲ್ಲ. ಚುಚ್ಚುಮದ್ದು, ಔಷಧಗಳನ್ನು ಶುಶ್ರೂಷಕಿಯರ ಸಲಹೆ ಪಡೆದು ನೀಡುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ವರ್ತಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !