ಬುಧವಾರ, ಮೇ 18, 2022
21 °C

ಈದ್‌ ಉಲ್ ಫಿತ್ರ್‌: ಖರೀದಿ ಭರಾಟೆ, ಮಾರುಕಟ್ಟೆಯಲ್ಲಿ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪವಿತ್ರ ರಂಜಾನ್‌ ಮಾಸದ ‘ಈದ್‌ ಉಲ್‌ ಫಿತ್ರ್‌’ಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಸೋಮವಾರ ಮಾರುಕಟ್ಟೆ ರಂಗೇರಿದ್ದು, ಮುಸ್ಲಿಮರಿಂದ ಖರೀದಿಯ ಭರಾಟೆ ಇತ್ತು.

ಕೊರೊನಾದಿಂದಾಗಿ ಮೂರು ವರ್ಷಗಳಿಂದ ಮನೆಗಳಲ್ಲಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಆದರೆ ಈ ವರ್ಷ ಸಂಭ್ರಮ ದ್ವಿಗುಣಗೊಂಡಿದೆ. ಪವಿತ್ರ ಮಾಸದ ಮುಕ್ತಾಯವಾಗಿದ್ದರಿಂದ ಎಲ್ಲ ಕಡೆ ಖರೀದಿಯೂ ಜೋರಾಗಿತ್ತು. ರಾತ್ರಿ 10ರವರೆಗೂ ಬಟ್ಟೆ ಮಳಿಗೆಗಳಲ್ಲಿ ಜನಜಂಗುಳಿ ಕಂಡು ಬಂದಿತು.

ನಗರದ ಲಕ್ಷ್ಮಿ ಬಜಾರ್‌, ಗಾಂಧಿ ವೃತ್ತ, ಬಿಡಿ ರಸ್ತೆ, ಚಿಕ್ಕಪೇಟೆ ಸೇರಿ ವಿವಿಧ ಮಾರುಕಟ್ಟೆ ಸ್ಥಳಗಳ ಬಟ್ಟೆ, ಚಪ್ಪಲಿ, ಸುಗಂಧ ದ್ರವ್ಯ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು. ಭರ್ಜರಿ ವಹಿವಾಟು ನಡೆಯಿತು. ಬೆಳಿಗ್ಗೆಯಿಂದಲೇ ಮಾರುಕಟ್ಟೆಯತ್ತ ಜನತೆ ಹೆಜ್ಜೆ ಹಾಕಿದರು. ಆದರೆ ಸಂಜೆ ಆಗುತ್ತಿದ್ದಂತೆ ಮಾರುಕಟ್ಟೆ ಮೆರುಗು ಪಡೆಯಿತು. ಇದರಿಂದ ವ್ಯಾಪಾರಿಗಳಲ್ಲೂ ಉತ್ಸಾಹ ಕಂಡು ಬಂದಿತು.

ಪ್ರಸನ್ನ ಚಿತ್ರಮಂದಿರ, ಹೊರಪೇಟೆ ರಸ್ತೆಯಲ್ಲಿ ಹಬ್ಬಕ್ಕೆ ಅಗತ್ಯ ಪರಿಕರ, ಬಟ್ಟೆ, ಸುಗಂಧ ದ್ರವ್ಯ, ಖರ್ಜೂರದ ಮಾರಾಟ ಹೆಚ್ಚಾಗಿತ್ತು. ಪ್ರಾರ್ಥನೆಗೆ ಧರಿಸುವ ಟೋಪಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಉಪವಾಸ ಅಂತ್ಯಗೊಂಡ ಬಳಿಕ ಮಹಿಳೆಯರು ಮಾರುಕಟ್ಟೆಯತ್ತ ಮುಖ ಮಾಡಿದರು.

ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮುರು ಭಾಗದ ಗ್ರಾಹಕರೂ ಚಿತ್ರದುರ್ಗ ನಗರಕ್ಕೆ ಖರೀದಿಗೆ ಬಂದಿದ್ದು ವಿಶೇಷವಾಗಿತ್ತು. ಕೊರೊನಾ ಕಾರಣಕ್ಕೆ ಕಳೆದ ಬಾರಿ ಮಳಿಗೆಗಳಿಗೆ ಹೆಚ್ಚು ಗ್ರಾಹಕರು ಭೇಟಿ ನೀಡಿರಲಿಲ್ಲ. ಇದರಿಂದ ವ್ಯಾಪಾರ ಇಲ್ಲವಾಗಿತ್ತು. ಆದರೆ ಈ ವರ್ಷ ಹೆಚ್ಚಿನ ವ್ಯಾಪಾರ ಆಗುತ್ತಿದೆ ಎಂದು ಫ್ಯಾನ್ಸಿ ಸ್ಟೋರ್‌ ಮಾಲೀಕರು ತಿಳಿಸಿದರು.

ಫ್ಯಾನ್ಸಿ ಕಿವಿ ಓಲೆ, ಉಂಗುರ, ಸರ ಸೇರಿ ಸಣ್ಣಪುಟ್ಟ ವಸ್ತುಗಳಿಗೆ ಮಹಿಳೆಯರು ಮುಗಿಬಿದ್ದಿದ್ದರು. ವಿಶೇಷವಾಗಿ ಮಕ್ಕಳಿಗೆ ಬಟ್ಟೆ ಖರೀದಿಸುತ್ತಿದ್ದು ಎಲ್ಲಡೆ ಕಂಡು ಬಂದಿತು.

‘ಕೊರೊನಾ ದೂರವಾದ ಕಾರಣ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಾಲ್ಕೈದು ದಿನಗಳಿಂದ ಮಾರುಕಟ್ಟೆಗೆ ಬರುತ್ತಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿತು ಮುಸ್ಲಿಂ ಕುಟುಂಬ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು