ಬಹಿರಂಗ ಪ್ರಚಾರ ಅಂತ್ಯ ಇಂದು

ಬುಧವಾರ, ಏಪ್ರಿಲ್ 24, 2019
23 °C
ಮನೆ–ಮನೆ ಪ್ರಚಾರಕ್ಕೆ ಅವಕಾಶ, ಕ್ಷೇತ್ರ ತೊರೆಯಲು ಸೂಚನೆ

ಬಹಿರಂಗ ಪ್ರಚಾರ ಅಂತ್ಯ ಇಂದು

Published:
Updated:

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಚಿತ್ರದುರ್ಗ ಕ್ಷೇತ್ರದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 6 ಗಂಟೆಗೆ ತೆರೆಬೀಳಲಿದೆ. ಅಭ್ಯರ್ಥಿಗಳು ಮನೆ–ಮನೆಗೆ ತೆರಳಿ ಮತಯಾಚನೆ ಮಾಡಲು ಅವಕಾಶವಿದೆ.

ಮತದಾನ ಆರಂಭಕ್ಕೂ 48 ಗಂಟೆ ಮೊದಲು ಮತಯಾಚನೆ ಕೊನೆಗೊಳಿಸಬೇಕು ಎಂಬುದು ಚುನಾವಣಾ ಆಯೋಗದ ಸೂಚನೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ವಿನೋತ್‌ ಪ್ರಿಯಾ ಅವರು ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಅಭ್ಯರ್ಥಿಗಳು ಸೇರಿದಂತೆ 19 ಹುರಿಯಾಳುಗಳು ಕಣದಲ್ಲಿದ್ದಾರೆ. ಮಾರ್ಚ್‌ ಕೊನೆಯ ವಾರದಿಂದ ಆರಂಭವಾದ ಪ್ರಚಾರ, ಕಳೆದ ಹತ್ತು ದಿನಗಳಲ್ಲಿ ಬಿರುಸು ಪಡೆದಿತ್ತು. ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಹಾಗೂ ಬಿಜೆಪಿ ತಾರಾ ಪ್ರಚಾರಕರು ಕ್ಷೇತ್ರಕ್ಕೆ ಧಾವಿಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಕೊನೆಯ ದಿನ ಚುನಾವಣಾ ಕಣ ಇನ್ನಷ್ಟು ರಂಗು ಪಡೆಯುವ ಸಾಧ್ಯತೆ ಇದೆ. ಮತದಾರರ ಮನಗೆಲ್ಲಲು ಕಸರತ್ತು ನಡೆಸಲಿದ್ದಾರೆ.

ಕ್ಷೇತ್ರದ ಮತದಾರರಲ್ಲದವರು ಏ.16ರ ಸಂಜೆ 6ರ ಬಳಿಕ ಜಿಲ್ಲೆಯಲ್ಲಿ ಉಳಿಯುವಂತಿಲ್ಲ. ಜಿಲ್ಲೆಯಿಂದ ಹೊರಗೆ ಕಳುಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೋಟೆಲ್‌, ವಸತಿ ಗೃಹ, ಪಕ್ಷದ ಕಚೇರಿಗಳ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ನಿಗಾ ಇಟ್ಟಿದ್ದಾರೆ. ಉಚಿತ ಊಟ, ವಸತಿ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಿ ಆಮಿಷವೊಡ್ಡಿದರೆ ಕ್ರಮಕೈಗೊಳ್ಳಲಾಗುತ್ತದೆ.

ಮತದಾನದ ಮುನ್ನಾದಿನ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ. ಐವರಿಗಿಂತ ಹೆಚ್ಚಿನ ಜನ ಗುಂಪುಗೂಡುವಂತಿಲ್ಲ. ಮನೆ–ಮನೆಗೆ ತೆರಳಿ ಮತಯಾಚನೆ ಮಾಡುವವರು ನಿಯಮ ಪಾಲಿಸುವುದು ಕಡ್ಡಾಯ. ಮೆರವಣಿಗೆ, ಜಾಥಾಗಳಿಗೆ ಅವಕಾಶ ಇಲ್ಲ. ಧ್ವನಿವರ್ಧಕ ಬಳಸಲು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ.

ಲಂಚ, ಅನುಚಿತ ವರ್ತನೆ, ಮತದಾರರ ಮೇಲೆ ಪ್ರಭಾವ ಬೀರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವ್ಯಕ್ತಿಗತ ಟೀಕೆ ಮಾಡುವಂತಿಲ್ಲ. ಮತಗಟ್ಟೆಯ ನೂರು ಮೀಟರ್ ಅಂತರದೊಳಗೆ ಚುನಾವಣಾ ಪ್ರಚಾರ ಕೈಗೊಳ್ಳುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !