ಮತದಾನ ಏರಿಳಿತವೆಂಬ ಹಾವು ಏಣಿ ಆಟ

ಬುಧವಾರ, ಏಪ್ರಿಲ್ 24, 2019
33 °C
ಮತದಾರರ ಸಂಖ್ಯೆ ಹೆಚ್ಚಾದರೂ ವೃದ್ಧಿಸದ ಮತದಾನದ ಪ್ರಮಾಣ

ಮತದಾನ ಏರಿಳಿತವೆಂಬ ಹಾವು ಏಣಿ ಆಟ

Published:
Updated:
Prajavani

ಚಿತ್ರದುರ್ಗ: ಲೋಕಸಭೆಗೆ ನಡೆದ ಚುನಾವಣೆಯ ಮತದಾನದ ಪ್ರಮಾಣದಲ್ಲಿ ಚಿತ್ರದುರ್ಗ ಕ್ಷೇತ್ರ ಭಾರಿ ಏರಿಳಿತ ಕಂಡಿದೆ. 1999ರಲ್ಲಿ ಚಲಾವಣೆಯಾದ ಶೇ 73ರ ಮತದಾನವೇ ಈವರೆಗಿನ ದಾಖಲೆಯಾಗಿದ್ದು, ಅರ್ಹರನ್ನು ಮತಗಟ್ಟೆಗೆ ಕರೆತರಲು ‘ಸ್ವೀಪ್‌’ ಸಮಿತಿ ಬೆವರು ಸುರಿಸುತ್ತಿದೆ.

1952ರಿಂದ 2014ರವರೆಗೆ ಕ್ಷೇತ್ರಕ್ಕೆ 16 ಚುನಾವಣೆಗಳು ನಡೆದಿವೆ. ಪ್ರತಿ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಲಕ್ಷಗಟ್ಟಲೆ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಮತದಾನದ ಪ್ರಮಾಣ ಏರಿಕೆ ಆಗಿಲ್ಲ ಎಂಬುದನ್ನು ಚುನಾವಣಾ ಆಯೋಗದ ಅಂಕಿ–ಅಂಶಗಳೇ ಬಹಿರಂಗಪಡಿಸಿವೆ. ಮತದಾನದ ಪ್ರಮಾಣ ಶೇ 54ರಿಂದ ಶೇ 73ರವರೆಗೆ ತಾಕಲಾಟ ಕಂಡಿದೆ.

ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಶ್ರಮಿಸುತ್ತಿದೆ. ಮತದಾರರ ಜಾಗೃತಿ ಮತ್ತು ‍ಪಾಲ್ಗೊಳ್ಳುವಿಕೆ (ಸ್ವೀಪ್‌) ಸಮಿತಿ ನೇತೃತ್ವದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಸ್ವೀಪ್‌ ಸಮಿತಿ ಸಾಹಸಿಗ ಜ್ಯೋತಿರಾಜ್‌ ಅವರನ್ನು ಮತದಾನ ಜಾಗೃತಿ ರಾಯಭಾರಿಯಾಗಿ ನೇಮಿಸಿದೆ. ಮತದಾರರನ್ನು ಹುರಿದುಂಬಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಏ.18ರಂದು ತಿಳಿಯಲಿದೆ.

ಕುಸಿಯುತ್ತಿದೆ ಮತದಾನ: ಸ್ಥಳೀಯ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಎಂಬ ಮಾತಿದೆ. ಚಿತ್ರದುರ್ಗದಲ್ಲಿ ಇದು ನಿರಂತರವಾಗಿ ಸಾಬೀತಾಗಿದೆ.

1967, 1980, 1991 ಹಾಗೂ 2004ರಲ್ಲಿ ಶೇ 60ಕ್ಕಿಂತ ಕಡಿಮೆ ಮತದಾನವಾಗಿದೆ. 2009ರಲ್ಲಿ ಅತಿ ಕಡಿಮೆ (ಶೇ 54) ಮತದಾನ ದಾಖಲಾಗಿದೆ. 1984 ಹಾಗೂ 1999ರಲ್ಲಿ ಮಾತ್ರ ಶೇ 70ಕ್ಕಿಂತ ಹೆಚ್ಚು ಮತದಾನವಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಮತದಾನದ ಪ್ರಮಾಣ ಇಳಿಕೆ ಕಂಡಿದೆ.

ಆರಂಭದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿತ್ತು. ದಾವಣಗೆರೆ ಕೂಡ ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು. ತುಮಕೂರು ಜಿಲ್ಲೆಯ ಶಿರಾ, ಪಾವಗಡದ ಜೊತೆಗೆ ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರವೂ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿತ್ತು. ಕ್ಷೇತ್ರ ಪುನರ್‌ ವಿಂಗಡೆಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆ ಹೆಚ್ಚು–ಕಡಿಮೆ ಆಗಿವೆ.

ಅಸಿಂಧು ಮತದ ಹೆಚ್ಚಳ: ಚಲಾವಣೆಗೊಂಡ ಎಲ್ಲ ಮತಗಳು ಸಿಂಧು ಆಗುವುದಿಲ್ಲ. ಮೊದಲ ಎರಡು ಚುನಾವಣೆ ಹೊರತುಪಡಿಸಿ ಉಳಿದ ಎಲ್ಲ ಚುನಾವಣೆಯಲ್ಲಿಯೂ ಚಲಾವಣೆಗೊಂಡ ಮತಗಳು ತಿರಸ್ಕೃತಗೊಂಡಿವೆ. 1999ರಲ್ಲಿ ತಿರಸ್ಕೃತಗೊಂಡ (35 ಸಾವಿರ) ಮತಗಳೇ ಈವರೆಗಿನ ದಾಖಲೆ.

1962ರಿಂದ 1999ರವರೆಗೆ ನಡೆದ ಎಲ್ಲ ಚುನಾವಣೆಯಲ್ಲಿಯೂ 10 ಸಾವಿರಕ್ಕೂ ಹೆಚ್ಚು ಮತ ತಿರಸ್ಕೃತಗೊಂಡಿವೆ. 2004ರಿಂದ ಅಸಿಂಧು ಮತಗಳ ಪ್ರಮಾಣ ಕಡಿಮೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !