ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಲೋಕಸಭಾ ಚುನಾವಣೆಗೆ ನಡೆಯಿತು ಬಿರುಸಿನ ಮತದಾನ
Last Updated 3 ಮೇ 2019, 17:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಶಾಂತಿಯುತ ಮತದಾನ ನಡೆದಿದ್ದು, 19 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

ಚಿತ್ರದುರ್ಗ ಸೇರಿ ರಾಜ್ಯದ 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಿತು. ಮತದಾನ ಬಹಿಷ್ಕಾರ, ಪ್ರತಿಭಟನೆ, ಗಲಾಟೆ, ವಾಗ್ವಾದ, ಮತಯಂತ್ರ ಸ್ಥಗಿತ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದರುವುದು ಸೇರಿ ಸಣ್ಣಪುಟ್ಟ ಸಮಸ್ಯೆಗಳ ನಡುವೆ ಮತದಾನ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಂಡಿತು.

ತುಮಕೂರು ಜಿಲ್ಲೆಯ ಶಿರಾ, ಪಾವಗಡ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯಲ್ಲಿದ್ದ ಮತದಾರರು ಹಕ್ಕು ಚಲಾಯಿಸಿದರು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತಯಂತ್ರಗಳೊಂದಿಗೆ ಡಿಮಸ್ಟರಿಂಗ್‌ ಕೇಂದ್ರ ತಲುಪಿದ ಸಿಬ್ಬಂದಿ ಅವುಗಳನ್ನು ಭದ್ರತಾ ಕೊಠಡಿಗೆ ಹಸ್ತಾಂತರಿಸಿದರು. ಚಿತ್ರದುರ್ಗದ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿರುವ ಭದ್ರತಾ ಕೊಠಡಿಯಲ್ಲಿ ಒಂದು ತಿಂಗಳು ಮತಯಂತ್ರಗಳನ್ನು ಇಡಲಾಗುತ್ತದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಸಾಕಷ್ಟು ಜಿದ್ದಾಜಿದ್ದ ಇತ್ತು. ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಕ್ಕು ಚಲಾವಣೆಗೆ ಮತದಾರರಿಗೆ ಸಹಕಾರ ನೀಡಿದರು. ಮತದಾನ ಕೇಂದ್ರಕ್ಕೆ ಕರೆತರುವುದು, ಓಲೈಸುವುದು ಮತಗಟ್ಟೆಯ ಎದುರು ಸಾಮಾನ್ಯವಾಗಿತ್ತು.

ಬೆಳಿಗ್ಗೆ ಮಂದಗತಿ:ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 2,161 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬುಧವಾರ ಸಂಜೆಯೇ ಮತಗಟ್ಟೆ ಸೇರಿದ್ದ ಚುನಾವಣಾ ಸಿಬ್ಬಂದಿ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮತಗಟ್ಟೆಯಲ್ಲೇ ತಂಗಿದ್ದ ಅವರು ನಸುಕಿನಲ್ಲಿ ಎದ್ದು, ಸೂರ್ಯ ಉದಯಿಸುವ ಮುನ್ನವೇ ಸಜ್ಜುಗೊಂಡಿದ್ದರು. ಬೆಳಿಗ್ಗೆ 6ಕ್ಕೆ ಸರಿಯಾಗಿ ಅಭ್ಯರ್ಥಿಗಳ ಏಜೆಂಟರು ಮತಗಟ್ಟೆಗೆ ಧಾವಿಸಿದರು. ಅಣಕು ಮತದಾನ ಮಾಡಿ ಮತಯಂತ್ರಗಳ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಿದರು. ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6ರವರೆಗೆ ನಿರಂತರವಾಗಿ ನಡೆಯಿತು.

ಮೊದಲು ಮತ ಚಲಾವಣೆ ಮಾಡಬೇಕು ಎಂಬ ಉತ್ಸಾಹದಲ್ಲಿದ್ದ ಅನೇಕರು ಬೆಳಿಗ್ಗೆ 6.30ರಿಂದ ಮತಗಟ್ಟೆ ಎದುರು ಕಾಯುತ್ತಿದ್ದರು. ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹಕ್ಕು ಚಲಾವಣೆ ಮಾಡಿ ಹೆಮ್ಮೆ ವ್ಯಕ್ತಪಡಿಸಿದರು. ವಾಯು ವಿಹಾರಕ್ಕೆ ಬಂದವರು, ಕೆಲಸಕ್ಕೆ ಹೋಗುವವರು ಬೆಳಿಗ್ಗೆಯ ಸಮಯದಲ್ಲಿ ಮತ ಚಲಾಯಿಸಿದರು. ಇದರಿಂದ ಮತಗಟ್ಟೆ ಎದುರು ಲವಲವಿಕೆಯ ವಾತಾವರಣ ಕಂಡುಬಂದಿತು.

ಮೊಬೈಲ್‌ಗೆ ನಿರ್ಬಂಧ:ಮತಗಟ್ಟೆ ಪ್ರವೇಶಿಸಲು ಸಾಲಗಟ್ಟಿ ನಿಂತಿದ್ದ ಮತದಾರರಿಗೆ ಮೊಬೈಲ್‌ ಬಳಸದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಮತಗಟ್ಟೆ ಒಳಗೆ ಕಾಲಿಡುವ ಮುನ್ನ ಅವುಗಳನ್ನು ಪೊಲೀಸರು ಪಡೆಯುತ್ತಿದ್ದರು. ಪ್ರತಿಯೊಬ್ಬರನ್ನು ಪರಿಶೀಲಿಸಿ ಒಳಗೆ ಬಿಡುತ್ತಿದ್ದರು. ಆದರೂ, ಕೆಲವರು ಮೊಬೈಲ್‌ ಹಿಡಿದು ಮತಗಟ್ಟೆಗೆ ತೆರಳಿ ಗೊಂದಲ ಸೃಷ್ಟಿಸಿದ ನಿದರ್ಶನಗಳು ಕಂಡುಬಂದವು.

ಮತಯಂತ್ರದ ಸಮೀಪ ಸಾಲಾಗಿ ಕುಳಿತ ಸಿಬ್ಬಂದಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅರ್ಹತೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ಪುಸ್ತಕದಲ್ಲಿ ಸಹಿ, ಹೆಬ್ಬೆಟ್ಟಿನ ಗುರುತು ಪಡೆಯುತ್ತಿದ್ದರು. ಎಡಗೈ ತೋರು ಬೆರಳಿಗೆ ಶಾಯಿ ಹಾಕಿ, ಮತಚಲಾವಣೆ ಮಾಡಿದ ಮೊಹರು ಒತ್ತುತ್ತಿದ್ದರು. ನಂತರ ವಿದ್ಯುನ್ಮಾನ ಮತಯಂತ್ರದ ಬಳಿಗೆ ತೆರಳು ಅವಕಾಶ ನೀಡುತ್ತಿದ್ದರು.

ವಿ.ವಿ.ಪ್ಯಾಟ್‌ಗೆ ಫ್ಯಾನ್‌:ಹೆಚ್ಚುತ್ತಿರುವ ಬಿಸಿಲ ಧಗೆಯಲ್ಲಿ ವಿ.ವಿ.ಪ್ಯಾಟ್‌ಗಳನ್ನು ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಬಹುತೇಕ ಮತಗಟ್ಟೆಗಳಲ್ಲಿ ಫ್ಯಾನ್‌, ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿತ್ತು. ಫ್ಯಾನ್‌ ಗಾಳಿ ನೇರವಾಗಿ ಯಂತ್ರದ ಮೇಲೆ ಬೀಳುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಸೂರ್ಯನ ಕಿರಣ, ವಿದ್ಯುತ್‌ ಬೆಳಕು ನೇರವಾಗಿ ಮತಯಂತ್ರದ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಲಾಗಿತ್ತು. ಬಹುತೇಕ ಎಲ್ಲ ಮತಗಟ್ಟೆಯಲ್ಲಿಯೂ ಮತಯಂತ್ರಗಳನ್ನು ಕಿಟಕಿಯಿಂದ ದೂರ ಇಡಲಾಗಿತ್ತು.

ಎಲ್ಲ ಮತಗಟ್ಟೆಯಲ್ಲಿಯೂ ಮೂಲ ಸೌಲಭ್ಯ ಕಲ್ಪಿಸಲಾಗಿತ್ತು. ಕುಡಿಯುವ ನೀರು ಇಡಲಾಗಿತ್ತು. ಹಕ್ಕು ಚಲಾವಣೆಗೆ ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಅನೇಕರು ನೀರು ಕುಡಿದು ದಾಹ ತಣಿಸಿಕೊಂಡರು. ಸಿಬ್ಬಂದಿಗೆ ಟೀ, ಕಾಫಿ, ಬಿಸ್ಕೇಟ್‌ ವ್ಯವಸ್ಥೆ ಮಾಡಲಾಗಿತ್ತು. ಶೌಚಾಲಯ ಸೇರಿ ಇತರ ಸೌಲಭ್ಯಗಳು ಅಚ್ಚುಕಟ್ಟಾಗಿದ್ದವು.

ಮತದಾನ ಬಹಿಷ್ಕಾರ:ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ನಾಲ್ಕು ಗ್ರಾಮಗಳ ಮತದಾರರು ಮತದಾನವನ್ನು ಬಹಿಷ್ಕರಿಸಿದ್ದರು. ಕುಡಿಯುವ ನೀರು, ಮೂಲ ಸೌಲಭ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಚಿತ್ರದುರ್ಗ ತಾಲ್ಲೂಕಿನ ಪಂಜಯ್ಯನಹಟ್ಟಿ ಹಾಗೂ ಓಬಣ್ಣನಹಳ್ಳಿಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದು ಬೆಳಿಗ್ಗೆ ಅಧಿಕಾರಿಗಳ ಗಮನ ಸೆಳೆಯಿತು. ಜಿಲ್ಲಾಡಳಿತದ ಪರವಾಗಿ ಅಧಿಕಾರಿಗಳು ತೆರಳಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಈ ಎರಡೂ ಗ್ರಾಮಗಳ ಗ್ರಾಮಸ್ಥರು ಇದಕ್ಕೆ ಒಪ್ಪಲಿಲ್ಲ.

ಹೊಳಲ್ಕೆರೆ ತಾಲ್ಲೂಕಿನ ನಗರಘಟ್ಟ ಹಾಗೂ ಐನಹಳ್ಳಿಯಲ್ಲಿಯೂ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು. ಇದಕ್ಕೆ ಮಣಿದ ಮತದಾರರು ಬಹಿಷ್ಕಾರವನ್ನು ಹಿಂಪಡೆದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT