ಶನಿವಾರ, ಡಿಸೆಂಬರ್ 14, 2019
24 °C
ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿಯಲ್ಲಿ ವಿಶೇಷ ಆಚರಣೆ, ಗಜರಾಜನ ಪ್ರತಿರೂಪ ರಚನೆ

ಜನಮನ ಗೆದ್ದ ‘ಕಂಬಳಿ ಆನೆ’ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಚೀರನಹಳ್ಳಿಯಲ್ಲಿ ಮಂಗಳವಾರ ಕಿರು ದೀಪಾವಳಿ ಮತ್ತು ಕಾರ್ತಿಕೋತ್ಸವದ ಅಂಗವಾಗಿ ‘ಕಂಬಳಿ ಆನೆ’ ಮೆರವಣಿಗೆ ಎಂಬ ವಿಶಿಷ್ಟ ಆಚರಣೆ ನಡೆಸಲಾಯಿತು.

ಕಪ್ಪು ಬಟ್ಟೆಯಿಂದ ಆನೆಯ ಬೃಹತ್ ಪ್ರತಿಕೃತಿ ರಚಿಸಿ ಅದರ ಮೇಲೆ ವೆಂಕಟೇಶ್ವರ ಸ್ವಾಮಿಯನ್ನು ಕೂರಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

12 ಅಡಿ ಎತ್ತರದ ಪ್ರತಿಕೃತಿ: ‘ಮೆರವಣಿಗೆಗೆ ಸುಮಾರು 12 ಅಡಿ ಎತ್ತರದ ಆನೆಯಷ್ಟೇ ಬೃಹದಾಕಾರದ ಪ್ರತಿಕೃತಿ ರಚಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮೆರವಣಿಗೆಗೆಂದೇ ಮಾಡಿರುವ ಬಂಡಿಯ ಮೇಲೆ ತೇಗದ ಕಂಬಗಳನ್ನು ನೆಟ್ಟು ಆನೆಯ ಕಾಲುಗಳನ್ನು ಮಾಡಲಾಗುತ್ತದೆ. ಬಿದಿರಿನ ದಬ್ಬೆಗಳಿಂದ ಆನೆಯ ಹೊಟ್ಟೆ, ಮುಖ, ಸೊಂಡಿಲು, ಕಿವಿ, ಬಾಲ ರಚಿಸಲಾಗುತ್ತದೆ. ಆನೆಯ ಹೊಟ್ಟೆಯೊಳಗೆ ಒಣಗಿದ ಬಾಳೆ ಸರಬು ತುಂಬಲಾಗುತ್ತದೆ. ನಂತರ ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ. ಆನೆಗೆ ಕಣ್ಣುಗಳನ್ನು ಬರೆದು ಮೈಮೇಲೆ ವಿವಿಧ ಚಿತ್ರಗಳ ಅಲಂಕಾರ ಮಾಡಲಾಗುತ್ತದೆ. ಆನೆಯ ಪ್ರತಿಕೃತಿಗೆ ಬೃಹತ್ ಹೂವಿನ ಹಾರಗಳನ್ನು ಹಾಕಲಾಗುತ್ತದೆ. ನಂತರ ಆನೆಯ ಮೇಲೆ ದೇವರ ಮೂರ್ತಿ ಕೂರಿಸಿ ಭಕ್ತರು ರಥದಂತೆ ಗ್ರಾಮದ ತುಂಬ ಬಂಡಿಯನ್ನು ಎಳೆಯುತ್ತಾರೆ.’ ಎನ್ನುತ್ತಾರೆ ಆನೆಯನ್ನು ಅಲಂಕರಿಸುವ ರಾಮಚಂದ್ರಪ್ಪ ಹಾಗೂ ಅರ್ಚಕ ವೆಂಕಟೇಶ್.

ಅನಾದಿ ಕಾಲದ ಆಚರಣೆ: ‘ನಮ್ಮೂರಿನಲ್ಲಿ ‘ಕಂಬಳಿ ಆನೆ’ ಮೆರವಣಿಗೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಹಿಂದೆ ಜೀವಂತ ಆನೆಯ ಮೇಲೆ ವೆಂಕಟೇಶ್ವರ ಸ್ವಾಮಿಯ ಮೂರ್ತಿ ಕೂರಿಸಿ ಮೆರವಣಿಗೆ ಮಾಡುತ್ತಿದ್ದರಂತೆ. ಆದರೆ ಬರಬರುತ್ತ ಆನೆಯನ್ನು ಕರೆಸುವುದು ಕಷ್ಟವಾಯಿತಂತೆ. ಆಗ ಸಂಪ್ರದಾಯ ಬಿಡಬಾರದು ಎಂದು ಆನೆಯ ಪ್ರತಿಕೃತಿಯನ್ನು ರಚಿಸಿ ಅದರ ಮೇಲೆ ದೇವರನ್ನು ಕೂರಿಸಿ ಮೆರವಣಿಗೆ ಮಾಡುವುದು ರೂಢಿಯಾಯಿತು. ಹಿಂದೆ ಕಪ್ಪು ಕಂಬಳಿ ಹೆಚ್ಚು ಸಿಗುತ್ತಿದ್ದುದರಿಂದ ಆನೆಯ ಮಾದರಿ ರಚಿಸಲು ಕಂಬಳಿಯನ್ನು ಬಳಸುತ್ತಿದ್ದರು. ಆದರೆ ಈಗ ಕಂಬಳಿ ಬಳಕೆ ಕಡಿಮೆಯಾಗಿರುವುದರಿಂದ ಕಪ್ಪು ಬಟ್ಟೆಯಿಂದ ಆನೆ ರಚಿಸುತ್ತಾರೆ’ ಎನ್ನುತ್ತಾರೆ ಗ್ರಾಮದ ರಂಗಯ್ಯ, ದಯಾನಂದ ಸ್ವಾಮಿ, ರುದ್ರಪ್ಪ, ಗುಡೇಗೌಡ್ರು ಭೈರೇಶಪ್ಪ, ಸುರೇಶ್, ಸತೀಶ್ ಹಾಗೂ ತಿಪ್ಪೇಶ್.

ಪ್ರತಿಕ್ರಿಯಿಸಿ (+)